ಶನಿವಾರ, ಜೂಲೈ 4, 2020
22 °C
ಒಂದೇ ದಿನ 32 ಮಂದಿ ಗುಣಮುಖ; 18 ಹೊಸ ಪ್ರಕರಣ ದೃಢ

ಮೈಸೂರಿನಲ್ಲಿ ಕೋವಿಡ್‌ಗೆ ಎರಡನೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತೀವ್ರ ಉಸಿರಾಟದ ಸಮಸ್ಯೆಯಿಂದ (ಎಸ್‌ಎಆರ್‌ಐ) ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೋವಿಡ್‌ನಿಂದ ಅಸುನೀಗಿದವರ ಸಂಖ್ಯೆ ಎರಡಕ್ಕೇರಿದೆ.

‘ಜೂನ್‌ 26 ರಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ (ರೋಗಿ 11,942) ಮೃತ‍ಪಟ್ಟಿದ್ದು, ಅವರು ಕೋವಿಡ್‌ ಪೀಡಿತರಾಗಿರುವುದು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೊದಲ ಸಾವು ಜೂನ್‌ 24ರಂದು ವರದಿಯಾಗಿತ್ತು. 87 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರಿಗೆ ಕೋವಿಡ್‌ ಇರುವುದು ಬಳಿಕ ಖಚಿತವಾಗಿತ್ತು.

10 ಮಂದಿ ಪುರುಷರು, ಏಳು ಮಹಿಳೆಯರು ಮತ್ತು 13 ವರ್ಷದ ಬಾಲಕಿ ಸೇರಿದಂತೆ 18 ಪ್ರಕರಣಗಳು ಹೊಸದಾಗಿ ಭಾನುವಾರ ವರದಿಯಾಗಿವೆ. ಮೈಸೂರು ನಗರ ಮತ್ತು ಕೆ.ಆರ್‌.ನಗರ ತಾಲ್ಲೂಕಿನವರಾದ ಇವರೆಲ್ಲರೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದವರು.

‘ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ನಾಲ್ವರು, ತೀವ್ರ ಉಸಿರಾಟದ ಸಮಸ್ಯೆ ಮತ್ತು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿರುವ ಎಂಟು ಮಂದಿ, ಕಂಟೈನ್‌ಮೆಂಟ್‌ ವಲಯದ ಒಬ್ಬರು, ಸೋಂಕಿನ ಯಾವುದೇ ಲಕ್ಷಣವಿಲ್ಲದ ಇಬ್ಬರು, ಒಬ್ಬರು ಗರ್ಭಿಣಿ ಮತ್ತು ಹೊರ ಜಿಲ್ಲೆಯಿಂದ ಬಂದ ಇಬ್ಬರಲ್ಲಿ ಕೋವಿಡ್‌ ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 255 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, 164 ಮಂದಿ ಗುಣಮುಖರಾಗಿದ್ದಾರೆ. 2,437 ಮಂದಿ ಹೋಂ ಕ್ವಾರಂಟೈನ್‌ನಲ್ಲಿ ಹಾಗೂ 195 ಮಂದಿ ಫೆಸಿಲಿಟಿ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಜಿಲ್ಲಾಡಳಿತದ ಮಾಹಿತಿ ತಿಳಿಸಿದೆ.

9 ಕಡೆ ಕಂಟೈನ್‌ಮೆಂಟ್‌ ಪ್ರದೇಶ

ಮೈಸೂರು ನಗರದಲ್ಲಿ ಹೊಸದಾಗಿ ಏಳು ಕಡೆ ಮತ್ತು ಕೆ.ಆರ್‌.ನಗರ ತಾಲ್ಲೂಕಿನಲ್ಲಿ ಎರಡು ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ.

ಮೈಸೂರು ನಗರ ವ್ಯಾಪ್ತಿಯ ರಾಘವೇಂದ್ರ ನಗರದ 4ನೇ ಅಡ್ಡರಸ್ತೆ, ರಾಮಕೃಷ್ಣನಗರದ 16ನೇ ಅಡ್ಡರಸ್ತೆ, ಉದಯಗಿರಿ ಸ್ಟೋನ್‌ ಪಾರ್ಕ್‌ನ 5ನೇ ಅಡ್ಡರಸ್ತೆ, ಜೆ.ಪಿ.ನಗರ ಡಿ ಬ್ಲಾಕ್‌ನ 23ನೇ ಮುಖ್ಯರಸ್ತೆ, ಲಲಿತ್‌ಮಹಲ್‌ ನಗರದ 9ನೇ ಅಡ್ಡರಸ್ತೆ, ಗೌಸಿಯಾನಗರದ ಸುಲ್ತಾನ್‌ ರಸ್ತೆಯ 2ನೇ ಅಡ್ಡರಸ್ತೆ, ಚಾಮರಾಜ ಮೊಹಲ್ಲಾದ ಕುಂಬಾರಗಿರಿಯ 1ನೇ ಅಡ್ಡರಸ್ತೆ ಹಾಗೂ ಕೆ.ಆರ್‌.ನಗರದ ಹಂಪಾಪುರದ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ ಮತ್ತು ಬಸವರಾಜಪುರ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.