ಮಂಗಳವಾರ, ಜೂನ್ 28, 2022
28 °C
ಗುಣಮುಖರ ಸಂಖ್ಯೆಯಲ್ಲೂ ಆರು ಪಟ್ಟು ಹೆಚ್ಚಳ

ಸಾವು–ಸೋಂಕು ಮೂರು ಪಟ್ಟು ಹೆಚ್ಚಳ: ಮೇ ತಿಂಗಳಲ್ಲಿ ಎಲ್ಲವೂ ದಾಖಲೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ಅಬ್ಬರ ಜಿಲ್ಲೆಯಲ್ಲಿ ಇದೀಗ ತುಸು ತಗ್ಗಿದೆ. ಇದು ಸಮಾಧಾನಕರ ವಿಷಯವಾದರೂ; ಮೇ ತಿಂಗಳು ಮೈಸೂರಿಗರ ಪಾಲಿಗೆ ‘ಕೋವಿಡ್‌ ಕಹಿ’ಯನ್ನೇ ಉಣಬಡಿಸಿದೆ.

ಈ ಹಿಂದಿನ ಎಲ್ಲ ತಿಂಗಳುಗಳನ್ನು ಪರಿಗಣಿಸಿದರೂ, ಮೇ ತಿಂಗಳೊಂದರಲ್ಲೇ ಹೆಚ್ಚಿನ ಸಂಖ್ಯೆಯ ಜನರಿಗೆ ಕೋವಿಡ್‌ ಸೋಂಕು ತಗುಲಿದೆ. ಸೋಂಕಿನಿಂದ ಗುಣಮುಖರಾದವರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟವರ ಸಂಖ್ಯೆಯೂ ಹಲವು ಪಟ್ಟು ಹೆಚ್ಚಿದೆ.

ಜಿಲ್ಲಾಡಳಿತದ ಅಂಕಿ–ಅಂಶಗಳ ಪ್ರಕಾರವೇ ತಿಂಗಳೊಂದರಲ್ಲೇ ಅತಿ ಹೆಚ್ಚು ಸಾವು–ನೋವು ದಾಖಲಾಗಿರುವುದು ಮೇ ತಿಂಗಳಿನಲ್ಲೇ.

419 ಸಾವು: ಮೇ 1ರಿಂದ 31ರವರೆಗೂ ಜಿಲ್ಲೆಯಲ್ಲಿ ಕೋವಿಡ್‌ನಿಂದ ಚೇತರಿಸಿಕೊಳ್ಳದೆ 419 ಜನರು ಮೃತಪಟ್ಟಿದ್ದಾರೆ. 66,040 ಜನರಿಗೆ ಸೋಂಕು ತಗುಲಿದೆ. 61,311 ಜನರು ಗುಣಮುಖರಾಗಿದ್ದಾರೆ.  

ಏಪ್ರಿಲ್‌ನಲ್ಲಿ 20,965 ಜನರು ಸೋಂಕು ಪೀಡಿತರಾಗಿದ್ದರೆ, 150 ಮಂದಿ ಮೃತಪಟ್ಟಿದ್ದರು. ಗುಣಮುಖರ ಸಂಖ್ಯೆ ಹತ್ತು ಸಾವಿರದ ಆಸುಪಾಸಿತ್ತು.

ಜಿಲ್ಲಾಡಳಿತದ ಈ ಎರಡು ತಿಂಗಳ ಅಂಕಿ–ಅಂಶವನ್ನು ಪರಾಮರ್ಶೆಗೊಳಪಡಿಸಿದರೆ, ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಸೋಂಕು–ಸಾವಿನ ಪ್ರಮಾಣ ಮೇ ತಿಂಗಳಲ್ಲಿ ಮೂರು ಪಟ್ಟು ಹೆಚ್ಚಿದೆ. ಗುಣಮುಖರ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ.

ಕೋವಿಡ್‌–19 ಸೋಂಕು ಜಿಲ್ಲೆಯಲ್ಲಿ ಬಾಧಿಸಲಾರಂಭಿಸಿ ವರ್ಷ ಗತಿಸುವುದರೊಳಗೆ 55,810 ಜನರನ್ನು (2021ರ ಮಾರ್ಚ್‌ ಅಂತ್ಯಕ್ಕೆ) ಪೀಡಿಸಿತು. ಇದರಲ್ಲಿ 1,055 ಮಂದಿಯನ್ನು ಬಲಿ ಪಡೆದಿದ್ದು ನೋವಿನ ವಿಷಯ. ಇದನ್ನು ಹೊರತುಪಡಿಸಿ ಸೋಂಕಿಗೆ ತುತ್ತಾಗಿದ್ದ ಸಹಸ್ರಾರು ಜನರು ಗುಣಮುಖರಾಗಿದ್ದಾರೆ. ಎಂದಿನಂತೆ ತಮ್ಮ ಬದುಕು ಕಟ್ಟಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ.

ಏಪ್ರಿಲ್‌–ಮೇ ತಿಂಗಳಿನಲ್ಲಿ 87,005 ಜನರಿಗೆ ಸೋಂಕು ಬಾಧಿಸಿದೆ. 71 ಸಾವಿರಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಎರಡು ತಿಂಗಳಲ್ಲಿ 569 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 15085 ಜನರು ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಹಲವರು ಐಸಿಯು ವೆಂಟಿಲೇಟರ್‌ನಲ್ಲಿ ಇಂದಿಗೂ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಇದು ಆತಂಕಕಾರಿ ವಿಷಯ. ಈ ಪ್ರಮಾಣದ ಸಾವು–ನೋವಿಗೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬ ಟೀಕೆ, ಆರೋಪವೂ ಜಿಲ್ಲೆಯ ಎಲ್ಲೆಡೆಯಿಂದಲೂ, ಸಾರ್ವಜನಿಕ ವಲಯದಲ್ಲೂ ಕೇಳಿ ಬರುತ್ತಿದೆ.

ತಾಳೆಯಾಗದ ಸಾವಿನ ಲೆಕ್ಕ!

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯ ಬಗ್ಗೆ, ಪ್ರತಿ ನಿತ್ಯವೂ ಜಿಲ್ಲಾಡಳಿತ ನೀಡುತ್ತಿರುವ ಸಾವಿನ ಲೆಕ್ಕಕ್ಕೂ, ಪಾಲಿಕೆಯ ಮುಕ್ತಿಧಾಮ, ಸ್ಮಶಾನಗಳಲ್ಲಿ ನಡೆದಿರುವ ಅಂತ್ಯಕ್ರಿಯೆಯ ಲೆಕ್ಕಕ್ಕೂ ತಾಳೆಯಾಗುತ್ತಿಲ್ಲ.

ಸೋಂಕಿತರಾಗಿ ಹೋಂ ಐಸೋಲೇಷನ್‌ನಲ್ಲಿ ಇದ್ದು ಅಸುನೀಗಿದವರು, ಸಕಾಲಕ್ಕೆ ಹಾಸಿಗೆ ಸಿಗದೆ ಆಸ್ಪತ್ರೆಯ ಹೊರ ಭಾಗದಲ್ಲೇ ಮೃತಪಟ್ಟವರು ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದ ದಿನ ಅಥವಾ ಮರು ದಿನ ಮೃತಪಟ್ಟವರ ಮಾಹಿತಿಯು ರಾಜ್ಯ ಸರ್ಕಾರ ನಿತ್ಯ ಬಿಡುಗಡೆ ಮಾಡುವ ಕೋವಿಡ್‌ ಮೃತರ ಪಟ್ಟಿಯಲ್ಲಿ ಪ್ರಕಟಗೊಳ್ಳುತ್ತಿಲ್ಲ.

ಮೈಸೂರು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ, ಮೇ 1ರಿಂದ 31ರವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 419. ಆದರೆ, ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸುತ್ತಿರುವ ಅಯೂಬ್ ಅಹಮ್ಮದ್‌ ಹೇಳುವ ಪ್ರಕಾರ ಈ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಅಂತ್ಯಸಂಸ್ಕಾರ ನಡೆದಿವೆ.

ಮೇ 1ರಿಂದ 29ರವರೆಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಮಶಾನಗಳಲ್ಲಿ ಕೋವಿಡ್‌ನಿಂದ ಮೃತಪಟ್ಟ 969 ಜನರ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಕೆ.ಆರ್‌.ನಗರದ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ದಾಖಲೆ ಬಿಡುಗಡೆ ಮಾಡಿದ್ದಾರೆ.

ಪಟ್ಟಿಯಲ್ಲಿರಲಿಲ್ಲ ಹೆಸರು

‘ಕೋವಿಡ್‌ ಪೀಡಿತರಾಗಿದ್ದ ನಮ್ಮ ದೊಡ್ಡಪ್ಪನಿಗೆ, ಸಾಕಷ್ಟು ಪ್ರಯತ್ನದ ನಂತರವೂ ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಸೋಂಕು ಉಲ್ಬಣಿಸಿ ಮನೆಯಲ್ಲೇ ಮೃತಪಟ್ಟರು. ಅದಾದ ನಂತರ ಎರಡ್ಮೂರು ದಿನದವರೆಗೆ ರಾಜ್ಯ ಸರ್ಕಾರ ಪ್ರಕಟಿಸುವ ಕೋವಿಡ್‌ನಿಂದ ಮೃತರಾದವರ ಪಟ್ಟಿ ಗಮನಿಸಿದೆ. ಆದರೆ ನಮ್ಮ ದೊಡ್ಡಪ್ಪನ ರೋಗಿ ಸಂಖ್ಯೆ ಮಾತ್ರ ಪ್ರಕಟಗೊಳ್ಳಲಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಯೊಬ್ಬರೇ ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮ ಇನ್ನೊಬ್ಬ ಸಂಬಂಧಿಯ ಹೆಸರು ಸಹ ಇದೇ ರೀತಿ ಪ್ರಕಟಗೊಳ್ಳಲಿಲ್ಲ ಎಂದು ಅವರು ಹೇಳಿದರು.

ಕುಟುಂಬಗಳ ಕಣ್ಣೀರು ಕಾಣಿಸುತ್ತಿಲ್ಲವೇ?

‘ಮೈಸೂರು ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಇಳಿಮುಖ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳುತ್ತಲೇ ಇದ್ದಾರೆ. ಜಿಲ್ಲಾಡಳಿತದ ಅಂಕಿ–ಅಂಶದಂತೆಯೇ ಮೇ ತಿಂಗಳೊಂದರಲ್ಲಿ 419 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇವು ಸಾವಲ್ಲವೇ? ಮೃತರ ಕುಟುಂಬಗಳ ಕಣ್ಣೀರು ನಿಮಗೆ ಕಾಣಿಸುತ್ತಿಲ್ಲವೇ?’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎನ್.ಪುನೀತ್‌.

‘ಯುವ ಸಮೂಹದ ಸಾವು ಸಹಿಸಲಾಗಲ್ಲ. ಎರಡ್ಮೂರು ತಲೆಮಾರಿಗೆ ಬಿದ್ದ ಹೊಡೆತವಿದು. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸತ್ಯಾಂಶ ಮರೆ ಮಾಚಬೇಡಿ. ಬೆಂಗಳೂರು ಬಿಟ್ಟರೇ ಮೈಸೂರಿನಲ್ಲೇ ಹೆಚ್ಚು ಸಾವಾಗಿವೆ ಎಂಬುದನ್ನು ಒಪ್ಪಿಕೊಳ್ಳಿ. ಇಲ್ಲದ ಸಾಧನೆಯನ್ನೇ ಬಿಂಬಿಸಿಕೊಳ್ಳುವ ಭರದಲ್ಲಿ ಮೃತರ ಕುಟುಂಬದ ಕಣ್ಣೀರನ್ನೇ ಕಡೆಗಣಿಸುವ ಕೆಲಸವನ್ನು ಇನ್ನಾದರೂ ಬಿಡಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು