ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಭೀತಿ

ನಂಜನಗೂಡಿನ ಔಷಧ ಕಾರ್ಖಾನೆ ನೌಕರರು–ಕುಟುಂಬದವರಿಂದ ದೂರ ಸರಿಯುತ್ತಿರುವ ಜನರು
Last Updated 31 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡಿನ ಹೊರ ವಲಯದಲ್ಲಿರುವ ಔಷಧ ಕಾರ್ಖಾನೆಯ 10 ನೌಕರರಿಗೆ ಕೋವಿಡ್‌–19 ದೃಢಪಟ್ಟಿದ್ದು, ಜನರಲ್ಲಿ ಭೀತಿ ಹೆಚ್ಚಿಸಿದೆ.

ಕೋವಿಡ್‌–19 ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಿಗೆ ಜಿಲ್ಲಾಡಳಿತ ಕಠಿಣ ಕ್ರಮ ಜಾರಿಗೊಳಿಸಿದೆ. ನಂಜನಗೂಡು ನಗರಕ್ಕೆ ಪೊಲೀಸರು ನಾಕಾಬಂಧಿ ಹಾಕಿದ್ದಾರೆ. ಎಲ್ಲ ರಸ್ತೆಗಳನ್ನು ಮುಚ್ಚಿದ್ದು, ನಗರ ಪ್ರವೇಶ–ನಿರ್ಗಮನಕ್ಕೆ ಒಂದೇ ರಸ್ತೆಯಲ್ಲಿ ಅವಕಾಶ ಕೊಟ್ಟಿದ್ದಾರೆ. ಹೊರ ಹೋಗುವುದು, ಒಳ ಬರಲು ಕಠಿಣ ನಿಯಮ ಅನುಸರಿಸಲೇಬೇಕಿದೆ.

ಔಷಧ ಕಾರ್ಖಾನೆಯನ್ನು ಕೇಂದ್ರೀಕರಿಸಿಕೊಂಡು ಸುತ್ತಮುತ್ತಲಿನ 5 ಕಿ.ಮೀ. ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಾರ್ಖಾ ನೆಯಿಂದ ಮೊದಲ ಮೂರು ಕಿ.ಮೀ. ಪ್ರದೇಶವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಗುರುತಿಸಲಾಗಿದೆ. ಈ ಪ್ರದೇಶಕ್ಕೆ ಯಾರೊಬ್ಬರಿಗೂ ಪ್ರವೇಶವಿಲ್ಲ.

3 ಕಿ.ಮೀ.ನಿಂದ 5 ಕಿ.ಮೀ.ವರೆಗಿನ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿದ್ದು, ಇಲ್ಲಿಗೆ ಮಾತ್ರ ಕೆಲವರ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಈ ವ್ಯಾಪ್ತಿಯಲ್ಲಿ ನಗರ, ಗ್ರಾಮೀಣ ಪ್ರದೇಶಗಳು ಒಳಪಡಲಿದ್ದು, ಎಲ್ಲೆಡೆ ಕಠಿಣ ಕ್ರಮ ಜಾರಿಗೊಳಿಸಲಾಗಿದೆ ಎಂದು ನಂಜನಗೂಡು ತಾಲ್ಲೂಕು ಆಡಳಿತದ ಮೂಲಗಳು ತಿಳಿಸಿವೆ.

ನಂಜನಗೂಡು ನಗರದ ಎಲ್ಲ ವಾರ್ಡ್‌ಗಳು ಹಾಗೂ ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಳೀಯ ನಗರಸಭೆ ಆಡಳಿತ ಸೋಂಕು ನಿವಾರಕ ಸಿಂಪಡಣೆಗೆ ತುರ್ತು ಕ್ರಮ ಕೈಗೊಂಡಿದೆ. ಸೋಮವಾರ ವಿವಿಧೆಡೆ ಸೋಂಕು ನಿವಾರಕ ಔಷಧಿ ಸಿಂಪಡಿಸಲಾಗಿದೆ.

ಭಯ–ಆತಂಕ

ನಂಜನಗೂಡು ನಗರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಸೋಮವಾರದಿಂದ ಭಯ ಹೆಚ್ಚಿದೆ. ಶನಿವಾರ ಜಿಲ್ಲೆಯಲ್ಲಿ ಕೋವಿಡ್–19 ದೃಢಪಟ್ಟ ಎಲ್ಲರೂ ಈ ಔಷಧ ಕಾರ್ಖಾನೆಯ ನೌಕರರೇ ಆಗಿದ್ದರು. ಇವರಲ್ಲಿ ನಾಲ್ವರು ನಂಜನಗೂಡಿನವರು ಆಗಿದ್ದರೇ, ಒಬ್ಬರು ಮೈಸೂರಿನ ಯರಗನಹಳ್ಳಿಯ ಹೊಸ ಬಡಾವಣೆಯ ನಿವಾಸಿಯಾಗಿದ್ದರು.

ಸೋಮವಾರ ಕೋವಿಡ್–19 ದೃಢಪಟ್ಟ ನಾಲ್ವರು ನಂಜನಗೂಡಿನವರೇ ಆಗಿದ್ದಾರೆ. ಇದು ಭೀತಿ ಹೆಚ್ಚಳಕ್ಕೆ ಕಾರಣವಾಗಿದೆ. ನಂಜನಗೂಡು ನಗರದಲ್ಲೇ ಕಾರ್ಖಾನೆಯ 753 ನೌಕರರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲೂ ನೌಕರರು ಪ್ರತ್ಯೇಕ ನಿಗಾದಲ್ಲಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ ಎನ್ನುತ್ತಾರೆ ನಂಜನಗೂಡಿನ ಎಸ್‌.ಚಂದ್ರಶೇಖರ್.

‘ಕಾರ್ಖಾನೆಯಲ್ಲಿ ಕಾಯಂ ನೌಕರರ ಜತೆ, ಹೊರ ಗುತ್ತಿಗೆ ಕಾರ್ಮಿಕರು ಇದ್ದರು. ಇವರೆಲ್ಲಾ ನಂಜನಗೂಡು ಸುತ್ತಮುತ್ತಲಿನ ಹಳ್ಳಿಯವರು. ನಮ್ಮೂರಿನಲ್ಲೇ ಇಬ್ಬರು ಇದ್ದಾರೆ. ಇವರಿಗೆ ಹೋಂ ಕ್ವಾರಂಟೈನ್ ಸೀಲ್ ಹಾಕಲಾಗಿದೆ. ಕಾರ್ಖಾನೆ ನೌಕರರಲ್ಲಿ ರೋಗ ಹೆಚ್ಚುತ್ತಿರುವುದು ನಮ್ಮೂರಿನಜನರನ್ನು ಆತಂಕಕ್ಕೆ ದೂಡಿದೆ. ಜನ ದಿನದಿಂದ ದಿನಕ್ಕೆ ಭೀತಿಗೊಳಗಾಗುತ್ತಿದ್ದಾರೆ. ಫೇಸ್‌ ಬುಕ್‌ ಲೈವ್‌ನಲ್ಲಿ ಜಿಲ್ಲಾಧಿಕಾರಿ ಆತಂಕಕ್ಕೊಳಗಾಗಬೇಡಿ ಎಂದು ಮನವಿ ಮಾಡಿಕೊಂಡರೂ, ಜನ ಭಯದಿಂದ ಹೊರ ಬರುತ್ತಿಲ್ಲ’ ಎಂದು ನಗರ್ಲೆ ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

₹ 2000 ದಂಡ

ನಂಜನಗೂಡಿನಲ್ಲಿ ಕೋವಿಡ್–19 ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ತಮ್ಮೂರುಗಳಿಗೆ ದಿಗ್ಬಂಧನ ಹಾಕಿಕೊಳ್ಳುವುದು ಹೆಚ್ಚಿದೆ. ಸ್ಥಳೀಯ ನಿಯಮಾವಳಿ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಾಗಿಯೂ ಘೋಷಿಸಿರುವುದು ತಿಳಿದು ಬಂದಿದೆ.

ನಂಜನಗೂಡು ಸಮೀಪದ ಮುಳ್ಳೂರು, ಆಲಂಬೂರು ಗ್ರಾಮಸ್ಥರು ರಸ್ತೆ ಬಂದ್ ಮಾಡಿದ್ದು, ಊರಿನ ಯಾವೊಬ್ಬ ವ್ಯಕ್ತಿ ಮಾಹಿತಿ ನೀಡದೆ ಹೊರಹೋದರೆ ₹ 2000 ದಂಡ ಪಾವತಿಸಬೇಕು ಎಂಬ ನಿಯಮವನ್ನು ತಮ್ಮಲ್ಲೇ ಜಾರಿಗೊಳಿಸಿಕೊಂಡಿದ್ದಾರೆ ಎಂದು ನಗರ್ಲೆ ವಿಜಯಕುಮಾರ್ ತಿಳಿಸಿದರು.

ಮನೆಗೆ ವಸ್ತುಗಳು...

‘ನಂಜನಗೂಡು ನಗರದ ಪ್ರತಿ ಬೀದಿ, ಬಡಾವಣೆಯಲ್ಲೂ ದಿನಸಿ ಅಂಗಡಿಗಳಿವೆ. ಈ ಅಂಗಡಿಗಳ ಮಾಲೀಕರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಗ್ರಾಹಕರಿಂದ ವಾಟ್ಸ್‌ ಆ್ಯಪ್ ಮೂಲಕವೇ ಅಗತ್ಯ ವಸ್ತುಗಳ ಪಟ್ಟಿ ತರಿಸಿಕೊಂಡು, ಅವುಗಳನ್ನು ಅವರ ಮನೆ ಬಾಗಿಲಿಗೆ ಕೊಟ್ಟು ಬರುವ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದ್ದೇವೆ’ ಎಂದು ತಹಶೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಕಾರಿ ಮಾರಾಟ ಬೀದಿ ಬೀದಿಯಲ್ಲೂ ನಡೆಯಲಿದೆ. ಅವಶ್ಯಕ ವಸ್ತುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಹೊರ ಬಂದರೆ ಕ್ರಿಮಿನಲ್ ಪ್ರಕರಣ

‘ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳ್ಳುವ ಮುನ್ನ, ಯಾರಾದರೂ ಮನೆಯಿಂದ ಹೊರ ಬಂದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.

‘ಔಷಧ ಕಾರ್ಖಾನೆ ಇದೀಗ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ನೌಕರರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇಂಥ ಹೊತ್ತಲ್ಲಿ ಮಾರ್ಚ್‌ ತಿಂಗಳ ಸಂಬಳವನ್ನು ಶೇ 30ರಿಂದ 40ರಷ್ಟನ್ನು ನಗದು ರೂಪದಲ್ಲಿ ನೌಕರರ ಮನೆಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆಡಳಿತ ಮಂಡಳಿಯೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ಒಬ್ಬರಿಗೆ ಕನಿಷ್ಠ ₹ 5 ಸಾವಿರ ಸಿಗುವಂತೆ ನೋಡಿಕೊಳ್ಳಲಾಗುವುದು. ಇವರ ಮನೆಗಳಿಗೆ ತರಕಾರಿ, ದಿನಸಿ, ಹಾಲು ಪೂರೈಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ’ ಎಂದು ಹೇಳಿದರು.

ಕ್ವಾರಂಟೈನ್‌ಗೆ ವಿರೋಧ; ಎಚ್ಚರಿಕೆ

ಔಷಧ ಕಂಪನಿಯ ಹೋಂ ಕ್ವಾರಂಟೈನ್‌ನಲ್ಲಿರುವ ನೌಕರರನ್ನು, ತಾಲ್ಲೂಕು ಆಡಳಿತ ನಂಜನಗೂಡಿನ ಕೆಎಚ್‌ಬಿ ಕಾಲೊನಿಯಲ್ಲಿನ ಬಿಸಿಎಂ ಹಾಸ್ಟೆಲ್‌ನಲ್ಲಿರಿಸಿ ಪ್ರತ್ಯೇಕ ನಿಗಾ ವಹಿಸಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು. ಯಾವುದೇ ಕಾರಣಕ್ಕೂ ಇಲ್ಲಿ ಸೋಂಕಿತರು–ಶಂಕಿತರನ್ನು ಹೋಂ ಕ್ವಾರಂಟೈನ್‌ಗೊಳಪಡಿಸಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯ ವಿಷಯ ತಿಳಿದ ತಹಶೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ಪ್ರತಿಭಟನಕಾರರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ದಂತೆ, ಕಾಲ್ಕಿತ್ತರು ಎಂಬುದು ತಿಳಿದು ಬಂದಿದೆ.

ಮೈಸೂರು ಜಿಲ್ಲೆಯ ಕೋವಿಡ್–19 ಚಿತ್ರಣ

- 2534 ಜನರು ಹೋಂ ಕ್ವಾರಂಟೈನ್‌ಗೊಳಪಟ್ಟವರು

- 821 ಜನರು ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದವರು

- 1701 ಜನರು ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ

- 1701ರಲ್ಲಿ 1087 ಜನರು ಜ್ಯುಬಿಲಿಯಂಟ್ ಔಷಧ ಕಂಪನಿಯವರು

- 95 ಜನರ ಗಂಟಲು ದ್ರವದ ಮಾದರಿ, ರಕ್ತ ಪರೀಕ್ಷೆ

- 12 ಜನರಿಗೆ ಕೋವಿಡ್ 19 ಪಾಸಿಟಿವ್

- 83 ಜನರ ಪರೀಕ್ಷಾ ವರದಿ ನೆಗೆಟಿವ್

ಆಧಾರ: ಜಿಲ್ಲಾಡಳಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT