ಸೋಮವಾರ, ಅಕ್ಟೋಬರ್ 26, 2020
28 °C
ಮೈಸೂರು: ಸಂಕಷ್ಟದಿಂದ ಬಳಲಿದವರಿಗೆ ಆಸರೆ ಆಗದ ದಸರಾ ಮಹೋತ್ಸವ

ವ್ಯಾಪಾರ ವಹಿವಾಟಿಗೆ ಮತ್ತಷ್ಟು ಹೊಡೆತ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌–19 ಪರಿಣಾಮ ದಿಂದ ಆರೇಳು ತಿಂಗಳಿನಿಂದ ಜರ್ಜರಿತ ಗೊಂಡಿರುವ ಮೈಸೂರಿನಲ್ಲಿ, ವ್ಯಾಪಾರ ವಹಿವಾಟಿಗೆ ಚೇತರಿಕೆ ನೀಡಬಹುದು ಎಂದು ಭಾವಿಸಿದ್ದ ದಸರಾ ಮಹೋತ್ಸವ ಕೂಡ ಈ ಬಾರಿ ಕೈ ಹಿಡಿಯುತ್ತಿಲ್ಲ.

ಜಿಲ್ಲೆಯಲ್ಲಿ ಸತತವಾಗಿ ಏರಿಕೆ ಆಗುತ್ತಿರುವ ಸೋಂಕು ಹಾಗೂ ಸಾವಿನ ಪ್ರಮಾಣವು ಅಂಬಾವಿಲಾಸ ಅರಮನೆ, ಮೃಗಾಲಯ ಮುಂಭಾಗದಲ್ಲಿ ಕಡಲೆ ಕಾಯಿ ಮಾರುವ ಅಜ್ಜಿಯಿಂದ ಹಿಡಿದು ಹೋಟೆಲ್‌ ಉದ್ಯಮದವರೆಗೆ ದೊಡ್ಡ ಹೊಡೆತ ನೀಡಿದೆ. ಪ್ರವಾಸೋದ್ಯಮ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.

ನಾಡಹಬ್ಬ ದಸರಾ ಉದ್ಘಾಟನೆಗೆ ಕೇವಲ ನಾಲ್ಕು ದಿನ ಬಾಕಿ ಇದ್ದು, ಶೇ 75ರಷ್ಟು ಹೋಟೆಲ್‌ ಕೊಠಡಿಗಳು ಖಾಲಿ ಇವೆ.

‘ಸರಳ ದಸರೆ ಎಂದು ಜಿಲ್ಲಾಡಳಿತ ₹ 15 ಕೋಟಿ ಖರ್ಚು ಮಾಡುತ್ತಿದೆ. ಕೋಟ್ಯಂತರ ಹಣ ವ್ಯಯಿಸಿ ಅದ್ದೂರಿ ದೀಪಾಲಂಕಾರ ಮಾಡಿದ್ದಾರೆ. ಅದನ್ನೇ ಬಳಸಿ ಹೋಟೆಲ್‌ ಉದ್ಯಮಕ್ಕೆ ಒಂದಿಷ್ಟು ತೆರಿಗೆ ವಿನಾಯಿತಿ ನೀಡಿದ್ದರೆ ಹಲವರು ಹೇಗೋ ಬದುಕು ದೂಡುತ್ತಿದ್ದರು’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ದಸರೆ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಇದು ವ್ಯಾಪಾರಿಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಬೇರೆ ದಿನಗಳಲ್ಲಿ ವಹಿವಾಟಿಗೆ ಹಿನ್ನಡೆಯಾಗಿದ್ದರೂ ದಸರೆ ಆರಂಭಕ್ಕೆ ಒಂದು ತಿಂಗಳ ಮೊದಲು, ನಂತರದ ಒಂದು ತಿಂಗಳು ವ್ಯಾಪಾರಿಗಳ ಪಾಲಿಗೆ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿತ್ತು.

‘ಬೆಂಗಳೂರಿನಿಂದ ಬರುತ್ತಿರುವ ಒಂದಿಷ್ಟು ಪ್ರವಾಸಿಗರನ್ನು ನೆಚ್ಚಿಕೊಂಡಿ ದ್ದೇವೆ. ಪಕ್ಕದ ರಾಜ್ಯ ಗಳಿಂದಲೂ ಬರುತ್ತಿಲ್ಲ. ಸುತ್ತಮುತ್ತಲಿನ ಜಿಲ್ಲೆಗಳ ಜನರೂ ಮೈಸೂರಿಗೆ ಕಾಲಿಡುತ್ತಿಲ್ಲ. ಜೀವ ಮುಖ್ಯ ನಿಜ; ಆದರೆ, ಜೀವನ ನಡೆಸುವುದು ಹೇಗೆ’ ಎಂದು ವ್ಯಾಪಾರಿಗಳು ಪ್ರಶ್ನಿಸುತ್ತಾರೆ.

ಅಂಬಾವಿಲಾಸ ಅರಮನೆ, ಮೃಗಾ ಲಯ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳು ತೆರೆದಿದ್ದರೂ ಸೋಂಕಿನ ಭಯದಿಂದ ಪ್ರವಾಸಿಗರು ಹೆಚ್ಚಾಗಿ ಬರುತ್ತಿಲ್ಲ. ‘ಚಾಮುಂಡಿಬೆಟ್ಟಕ್ಕೆ ಬರುತ್ತಿ ರುವ ಭಕ್ತರ ಸಂಖ್ಯೆ ಕಳೆದ ಬಾರಿಗೆ ಹೋಲಿಸಿದರೆ ಶೇ 50 ದಾಟಿಲ್ಲ. ದಸರೆ ಆರಂಭವಾದ ಮೇಲೆ ಹೆಚ್ಚಾಗಬಹುದು’ ಎಂದು ಹೇಳುತ್ತಾರೆ ಚಾಮುಂಡೇಶ್ವರಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಯತಿರಾಜ್‌.

ಪ್ರವಾಸಿಗರು ಇಲ್ಲದೇ ಹಲವು ಟ್ಯಾಕ್ಸಿ ಮಾಲೀಕರು ತಮ್ಮ ವಾಹನಗಳನ್ನು ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದು, ಸಾಲದ ಮಾಸಿಕ ಕಂತು (ಇಎಂಐ) ಪಾವತಿಸಲು ಪರದಾಡುತ್ತಿದ್ದಾರೆ. ಇದರ ನಡುವೆ ‌ಇಎಂಐ ಪಾವತಿಸುವಂತೆ ಖಾಸಗಿ ಬ್ಯಾಂಕ್‌ಗಳು ಹಾಗೂ ಫೈನಾನ್ಸ್‌ ಸಂಸ್ಥೆಗಳು ಒತ್ತಡ ಹೇರುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.