ಬುಧವಾರ, ಜುಲೈ 28, 2021
28 °C
ಸಿಪಿಎಂ ವತಿಯಿಂದ ಪ್ರತಿಭಟನೆ– ಇಂಧನ ದರ ಏರಿಕೆ ವಿರುದ್ಧ ಆಕ್ರೋಶ

ಕಾರ್ಮಿಕರ ನೆರವಿಗೆ ಧಾವಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಲಾಕ್‌ಡೌನ್‌ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಜಮಾಯಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಡವರು, ಕಾರ್ಮಿಕರು, ರೈತರಿಗೆ ತಿಂಗಳಿಗೆ ₹ 7,500ರಂತೆ ಆರು ತಿಂಗಳು ನೀಡಬೇಕು. ಪ್ರತಿ ವ್ಯಕ್ತಿಗೆ 10 ಕೆ.ಜಿಯಂತೆ ಆರು ತಿಂಗಳವರೆಗೆ ಉಚಿತ ಆಹಾರ ಧಾನ್ಯ ವಿತರಿಸಬೇಕು. ಉದ್ಯೋಗ ಖಾತ್ರಿ ಅಡಿಯಲ್ಲಿ ನೀಡುತ್ತಿರುವ ಕೂಲಿ ಹೆಚ್ಚಿಸಬೇಕು. ನಗರದ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. ನಿರುದ್ಯೋಗಿಗಳಿಗೆ ತಕ್ಷಣವೇ ನಿರುದ್ಯೋಗ ಭತ್ಯೆ ಪ್ರಕಟಿಸಬೇಕು’ ಎಂದು ‍ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಆಗ್ರಹಿಸಿದರು.

‘ಕೃಷಿ ಉತ್ಪನ್ನಗಳ ಬೆಲೆ ತಗ್ಗಿದೆ. ಆಟೊ, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗಾರಿಕೆಗಳು ನಿಂತು ಹೋಗಿವೆ. ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವುದನ್ನು ನಿಲ್ಲಿಸಬೇಕು’ ಎಂದರು.

‘ರಾಜ್ಯದಲ್ಲಿ ವೆಂಟಿಲೇಟರ್, ಅಗತ್ಯ ಔಷಧದ ತೀವ್ರ ಕೊರತೆ ಇದ್ದು, ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಪೂರೈಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ವಿಜಯಕುಮಾರ್‌, ಜಗನ್ನಾಥ್‌, ರಾಜೇಂದ್ರ, ಮುರಳೀಧರ್‌ ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.