ಮಂಗಳವಾರ, ಸೆಪ್ಟೆಂಬರ್ 21, 2021
27 °C
ಪರಿಶೀಲನೆ ನಡೆಸಿದ ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ

ಐತಿಹಾಸಿಕ ದೊಡ್ಡ ಗಡಿಯಾರದಲ್ಲಿ ಬಿರುಕು; ಆತಂಕ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಐತಿಹಾಸಿಕ ದೊಡ್ಡ ಗಡಿಯಾರದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಗೋಪುರದ ಮೇಲಿನ ಒಳಭಾಗದಲ್ಲಿ ಬಿರುಕುಗಳು ಮೂಡಿವೆ. ನಿರ್ಲಕ್ಷ್ಯ ವಹಿಸಿದರೆ ಗೋಪುರ ಶಿಥಿಲವಾಗುವ ಸಾಧ್ಯತೆ ಇದೆ.

ಗಡಿಯಾರದ ಘಂಟೆಯ ಶಬ್ದವನ್ನು ಪುನರ್‌ ಆರಂಭಿಸಲು ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿಯ ಸದಸ್ಯರು ಈಚೆಗೆ ಪರಿಶೀಲನೆ ನಡೆಸಿದಾಗ ಬಿರುಕು ಮೂಡಿರುವುದು ಪತ್ತೆಯಾಗಿದೆ.

ಇಲ್ಲಿದ್ದ 5.5 ಅಡಿ ಎತ್ತರದ ಬೃಹತ್ ಕಂಚಿನ ಘಂಟೆಯಿಂದ ಹೊರಹೊಮ್ಮುತ್ತಿದ್ದ ದೊಡ್ಡ ಶಬ್ದದಿಂದ ಬಿರುಕು ಮೂಡುತ್ತಿದೆ ಎಂದು ಭಾವಿಸಿ ಶಬ್ದವನ್ನು 30 ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗಲೂ ಹೊಸ ಹೊಸ ಬಿರುಕುಗಳು ಮೂಡುತ್ತಲೇ ಇವೆ. ಇದಕ್ಕೆ ನಾದ ಅಥವಾ ಭಾರ ಕಾರಣವಲ್ಲ. ಬದಲಿಗೆ, ಇದಕ್ಕೆ ಬಳಸಲಾಗಿರುವ ಕಬ್ಬಿಣ ತುಕ್ಕು ಹಿಡಿಯುತ್ತಿರುವುದೇ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯ ಡಾ.ಎನ್‌.ಎಸ್‌.ರಂಗರಾಜು, ‘ದೊಡ್ಡಗಡಿಯಾರದ ಮೇಲ್ಭಾಗದಲ್ಲಿ ಬಿರುಕು ಮೂಡುತ್ತಿರುವುದಕ್ಕೆ ಘಂಟಾನಾದ ಅಥವಾ ಭಾರ ಕಾರಣ ಅಲ್ಲ. ಇದರ ಶಬ್ದ ಹೊರ ಹೋಗಲು ನಾಲ್ಕೂ ಕಡೆಯೂ ಕಿಟಕಿ ಸ್ವರೂಪದ ಜಾಗಗಳಿವೆ. ಇಲ್ಲಿಂದ ಶಬ್ದ ಸುಲಲಿತವಾಗಿ ಹೊರ ಹೋಗುತ್ತದೆ. ಗೋಪುರವನ್ನು ರಾಜಸ್ತಾನದ ಮರಳಿನ ಇಟ್ಟಿಗೆಯಿಂದ ಕಟ್ಟಲಾಗಿದೆ. ಇದಕ್ಕೆ ಬಳಸಿರುವ ಕಬ್ಬಿಣವು ತುಕ್ಕು ಹಿಡಿಯುತ್ತಿರುವುದರಿಂದ ಬಿರುಕು ಮೂಡುತ್ತಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ’ ಎಂದು ಹೇಳಿದ್ದಾರೆ.‌

ಪಾರಂಪರಿಕ ತಜ್ಞರ ಸಮಿತಿ 14 ಮಂದಿ ಸದಸ್ಯರಲ್ಲಿ ಒಬ್ಬರಾದ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಸಹ ಪರಿಶೀಲನೆ ನಡೆಸಿದ್ದು, ದುರಸ್ತಿ ಕುರಿತು ಎಂಜಿನಿಯರ್ ಎನ್.ಆರ್.ಅಶೋಕ್‌ ಅವರಿಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು