ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ 12 ತಿಂಗಳಲ್ಲಿ 23 ಕೊಲೆ; 73 ಆರೋಪಿಗಳ ಬಂಧನ

ವಿಜಯನಗರ ಠಾಣೆ: ಹಳೆಯ ಪ್ರಕರಣ ಹೆಚ್ಚು
Last Updated 6 ಜನವರಿ 2022, 8:45 IST
ಅಕ್ಷರ ಗಾತ್ರ

ಮೈಸೂರು: ಕೊಲೆಗೆ ದಾರಿ ಮಾಡಿದ ರೌಡಿಗಳ ಕಾದಾಟ, ಕೊಂದು ಶವವನ್ನೇ ಹೂತಿಟ್ಟ ಪಾತಕಿಗಳು, ಆಟೊರಿಕ್ಷಾ ಹರಿಸಿ ಕೊಲೆ, ಕೊಲೆ ಮಾಡಿ ಕೈಯನ್ನು ಕತ್ತರಿಸಿ ಠಾಣೆಗೆ ತಂದ ಭೂಪ...

–ಹೀಗೆ ನಗರದಲ್ಲಿ ಒಂದು ವರ್ಷದಲ್ಲಿ ವಿಭಿನ್ನ ಸ್ವರೂಪದ 23 ಕೊಲೆಗಳು ನಡೆದಿವೆ. ಅವುಗಳಲ್ಲಿ 4 ಪ್ರಕರಣಗಳನ್ನು ಬಿಟ್ಟು ಉಳಿದೆಲ್ಲ ಪ್ರಕರಣಗಳಲ್ಲೂ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪತ್ತೆ ಹಚ್ಚಲಾಗಿರುವ 19 ಕೊಲೆ ಪ್ರಕರಣಗಳಲ್ಲಿ 73 ಆರೋಪಿಗಳನ್ನು ಬಂಧಿಸಿದ್ದಾರೆ.

ಅತ್ಯಂತ ಹೆಚ್ಚು ಕೊಲೆ ಪ್ರಕರಣಗಳು (6) ವಿಜಯನಗರ ಠಾಣೆಯಲ್ಲೇ ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಆತ್ಮಹತ್ಯೆ ಎಂದು ಮುಚ್ಚಿ ಹೋಗಿದ್ದವು. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ಆಧರಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಎರಡು ಕಡೆ ಜೋಡಿ ಕೊಲೆ: ನಗರದಲ್ಲಿ 2021ರಲ್ಲಿ ಎರಡು ಕಡೆ ಜೋಡಿಕೊಲೆಗಳು ನಡೆದು, ಜನರಲ್ಲಿ ಭೀತಿ ಸೃಷ್ಟಿಸಿದ್ದವು. ಫೆ.8ರಂದು ಇಲ್ಲಿನ ಚಾಮುಂಡಿಪುರಂ ವೃತ್ತದಿಂದ ಊಟಿ ರಸ್ತೆಗೆ ಹೋಗುವ ಮಾರ್ಗಮಧ್ಯೆ ಸಿನಿಮೀಯ ಶೈಲಿಯಲ್ಲಿ ಗೌರಿಶಂಕರ ನಗರದ ನಿವಾಸಿಗಳಾದ ಕಿರಣ್ (30) ಹಾಗೂ ದೀಪಕ್‌ಕಿಶನ್‌ (30) ಎಂಬುವವರನ್ನು ಅಟ್ಟಾಡಿಸಿದ್ದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಘಟನೆ ನಗರದಲ್ಲಿ ಸಾಕಷ್ಟು ಆತಂಕಕ್ಕೂ ಕಾರಣವಾಗಿತ್ತು.

ಡಿ. 11ರಂದು ಬೋಗಾದಿ ರಸ್ತೆಯಲ್ಲಿ ಕ್ಷುಲ್ಲಕ ವಿಷಯಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿ ರಾಡಿನಿಂದ ಇಬ್ಬರನ್ನು ಹೊಡೆದು ಕೊಲೆ ಮಾಡಲಾಗಿತ್ತು. ಎರಡೂ ಪ್ರಕರಣಗಳಲ್ಲೂ ಪೊಲೀಸರು ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ಉದಯಗಿರಿಯಲ್ಲಿ ಕೊಲೆಯ ಬೆನ್ನಿಗೆ ಕೊಲೆ!: ಇಲ್ಲಿನ ಉದಯಗಿರಿಯಲ್ಲಿ ಆ. 15 ಹಾಗೂ 16ರಂದು ನಡೆದಿದ್ದ ಎರಡು ಕೊಲೆಗಳು ಬಡಾವಣೆಯ ಜನರನ್ನು ಆಂತಕಕ್ಕೆ ದೂಡಿದ್ದವು.

ರಾಜೀವನಗರ 3ನೇ ಹಂತದ ನಿವಾಸಿ ಮಹಮ್ಮದ್ ಸರಾನ್ (27) ಅವರನ್ನು ಕೊಲೆ ಮಾಡಿದ್ದ ಅವರ ಬಾವಮೈದುನ ಕದೀರ್ ಪಾಷಾ ಪೊಲೀಸ್‌ ಠಾಣೆಗೆ ಬಾವನ ಬಲಗೈನೊಂದಿಗೆ ಶರಣಾಗಿದ್ದ. ಅದಾದ ಮರುದಿನವೇ ರಾಜಕುಮಾರ ರಸ್ತೆಯ ಇಂದಿರಾ ಕ್ಯಾಂಟೀನ್‌ ಬಳಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು, ಅಜೀಜ್‌ಸೇಠ್‌ ನಗರದ ನಿವಾಸಿ ಯಾಸ್ಮಿನ್ (21) ಕೊಲೆಯಾದರು. ಎರಡೂ ಪ್ರಕರಣಗಳು ನಗರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಪೊಲೀಸರು ಆರೋಪಿಗಳನ್ನು ಕೆಲವೇ ದಿನಗಳಲ್ಲಿ ಬಂಧಿಸಿದ್ದರು.

ಕೊಲೆ ಮಾಡಿ ಶವ ಹೂತಿಟ್ಟರು..: ಸೆ. 1ರಂದು ಇಲ್ಲಿನ ಜನತಾನಗರದ ನಿವಾಸಿ ಉಮೇಶ್‌ ಅಲಿಯಾಸ್ ಬೋಸಿ ಎಂಬ ರೌಡಿಶೀಟರ್‌ನನ್ನು ಕೊಲೆ ಮಾಡಿ ಸ್ಮಶಾನದ ಬಳಿ ಆರೋಪಿಗಳು ಹೂತಿಟ್ಟಿದ್ದರು. ಉಮೇಶ್ ಅವರ ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆ ಸರಸ್ವತಿಪುರಂ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಶವ ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿದ್ದರು.

ಜ. 12ರಂದು ಆಟೊ ಚಾಲಕ ಮಲ್ಲಿಕಾರ್ಜುನ (55) ಅವರ ಮೇಲೆ ಹೆಬ್ಬಾಳದಲ್ಲಿ ಆಟೊ ಹರಿಸಿ ಕೊಲೆ ಮಾಡಲಾಗಿತ್ತು. ಅವರ ಮೇಲೆ ಸಾಕಷ್ಟು ಬಾರಿ ಆಟೊರಿಕ್ಷಾ ಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿದಾಖಲಾಗಿದ್ದವು.

6 ತಿಂಗಳ ನಂತರದ ಎಲ್ಲ ಪ್ರಕರಣ ಇತ್ಯರ್ಥ
6 ತಿಂಗಳಿಂದ ನಡೆದ ಎಲ್ಲ ಕೊಲೆ ಪ್ರಕರಣಗಳನ್ನೂ ಪೊಲೀಸರು ಬೇಧಿಸಿದ್ದಾರೆ. ಬಹುತೇಕ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಪ್ರತೀಕಾರದ ಹೊಡೆದಾಟಗಳನ್ನೂ ತಡೆದಿದ್ದಾರೆ.

ಬೋಸಿ, ಡಾಕು, ಪಾಯಸ, ಟಿಬೆಟ್‌ ...ಹೀಗೆ ನಗರ ರೌಡಿಗಳ ಅಡ್ಡಹೆಸರುಗಳನ್ನು ಹೇಳುತ್ತ ಹೋದರೆ ಕೊನೆ ಎಂಬುದಿಲ್ಲ. ಉದಯಗಿರಿ, ಜನತಾನಗರ, ಗೌರಿಶಂಕರ ನಗರ ಸೇರಿದಂತೆ ಕೆಲವೆಡೆ ರೌಡಿಗಳಿದ್ದಾರೆ. ಅವರ ಮಧ್ಯೆ ಮಾರಾಮಾರಿ ನಡೆದು ಕೊಲೆಗಳು ನಡೆದಿದ್ದರೂ, ಪ್ರತೀಕಾರದ ದಾಳಿಗಳಾಗಲಿ, ಕೊಲೆಗಳಾಗಲಿ ನಡೆಯದಂತೆ ಎಚ್ಚರ ವಹಿಸಿದ್ದಾರೆ. ರೌಡಿಗಳಿಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ರೌಡಿಗಳ ಮೇಲೆ ಹದ್ದಿನಕಣ್ಣು’
‘ರೌಡಿಗಳ ಮನೆ ಹಾಗೂ ಅವರ ಅಡ್ಡೆಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರೌಡಿಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು’ ಎಂದು ಡಿಸಿಪಿ ಪ್ರದೀಪ್‌ಗುಂಟಿ ಎಚ್ಚರಿಕೆ ನೀಡಿದ್ದಾರೆ.

‘ನಗರದಲ್ಲಿ ಯಾವುದೇ ಕಾರಣಕ್ಕೂ ರೌಡಿಗಳ ಉಪಟಳಕ್ಕೆ ಅವಕಾಶ ನೀಡುವುದಿಲ್ಲ. ರೌಡಿಗಳ ಮೇಲೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿಯೇ ಪ್ರತಿಕಾರದ ದಾಳಿಗಳು ನಡೆದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT