ಗುರುವಾರ , ನವೆಂಬರ್ 21, 2019
21 °C
ಸಾಲಿಗ್ರಾಮ

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಸ್ವಾಮೀಜಿ ಆಪ್ತ ಸೇವಕನ ಬಂಧನ

Published:
Updated:
Prajavani

ಸಾಲಿಗ್ರಾಮ: ಸಮೀಪದ ಯೋಗಾನಂದ ಸರಸ್ವತಿ ಮಠದ ಜಪದಕಟ್ಟೆ ದೇವಾಲಯಕ್ಕೆ ಸೇರಿದ ಸುಮಾರು ₹ 5.10 ಲಕ್ಷ ಬೆಲೆ ಬಾಳುವ ಚಿನ್ನದ ಆಭರಣಗಳ ಕಳವು ಪ್ರಕರಣವನ್ನು ಕೆ.ಆರ್.ನಗರ ಪೊಲೀಸರು ಭೇದಿಸಿದ್ದು, ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ.

ಯೋಗಾನಂದ ಸರಸ್ವತಿ ಮಠದ ಸ್ವಾಮೀಜಿಯ ಬಳಿ ಹಲವು ವರ್ಷಗಳಿಂದ ಸೇವಕನಾಗಿದ್ದ ಗುರುರಾಜ ಕುಲಕರ್ಣಿ ಎಂಬಾತನೇ ಕಳವು ಆರೋಪಿಯಾಗಿದ್ದಾನೆ.

ಕಲಬುರ್ಗಿ ಜಿಲ್ಲೆ ಬ್ರಹ್ಮಪುರ ಮೇಲಿನಕೇರಿ ಗ್ರಾಮದ ಗುರುರಾಜ ಅವರು ಅ.5 ರಂದು ಕಳ್ಳತನ ಮಾಡಿ ನಾಪತ್ತೆಯಾಗಿದ್ದರು. ಮಠದ ವತಿಯಿಂದ ಕೆ.ಆರ್.ನಗರ ಠಾಣೆಗೆ ದೂರು ನೀಡಲಾಗಿತ್ತು. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬಲೆ ಬೀಸಿ 143 ಗ್ರಾಂ ಚಿನ್ನಾಭರಣ ಸಹಿತ ಗುರುರಾಜನನ್ನು ಸೆರೆಹಿಡಿಯಲಾಗಿದೆ ಎಂದು ಸಿಪಿಐ ಪಿ.ಕೆ. ರಾಜು ತಿಳಿಸಿದ್ದಾರೆ.

ಜಪದಕಟ್ಟೆಯ ಶ್ರೀಚಕ್ರಕ್ಕೆ ಅಲಂಕರಿಸುವ 4 ಚಿನ್ನದ ನಕ್ಲೇಸ್, ಮುತ್ತಿನಸರ, ಅವಲಕ್ಕಿ ಸರ, ಚೈನ್ ಹಾಗೂ ಪದಕ, ಗೆಜ್ಜೆ ಮತ್ತು ಸರ ಸೇರಿದಂತೆ ಒಟ್ಟು 143 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು. ಗುರುರಾಜನ ಮೇಲೆ ಸಂಶಯ ವ್ಯಕ್ತಪಡಿಸಿ ಪೊಲೀಸರು ಬಂಧಿಸಿದಾಗ ಸತ್ಯ ಗೊತ್ತಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಗಾಬರಿಗೊಂಡಿದ್ದಾರೆ. 

ಕಳ್ಳನನ್ನು ಹಿಡಿದ ಪೊಲೀಸರಿಗೆ ಎಸ್‌.ಪಿ. ಸಿ.ಬಿ. ರಿಷ್ಯಂತ್‌ ಬಹುಮಾನ ಘೋಷಿಸಿದ್ದಾರೆ.

ಪ್ರಕರಣ ಭೇದಿಸಲು ಠಾಣೆಯ ಪಿಎಸ್‌ಐ ಮಾದಪ್ಪ, ಸಿಬ್ಬಂದಿಗಳಾದ ಪ್ರದೀಪ, ಮಹೇಶ್ ಹಾಗೂ ಕೃಷ್ಣ ಸಹಕರಿಸಿದ್ದಾರೆ.

ಪ್ರತಿಕ್ರಿಯಿಸಿ (+)