ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಹೆಚ್ಚುತ್ತಿದೆ ಪುಂಡರ ಹಾವಳಿ

ಮದ್ಯ ಸೇವಿಸಿ ಪ್ರವಾಸಿಗರಿಗೆ, ಮಹಿಳೆಯರಿಗೆ ಕಿರುಕುಳ
Last Updated 24 ಮೇ 2019, 20:09 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಪುಂಡರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೊರವಲಯದಲ್ಲಿ ಮಾತ್ರ ಇದ್ದ ಪುಂಡರ ಅಟಾಟೋಪ ಇದೀಗ ನಗರದ ಹೃದಯ ಭಾಗಕ್ಕೂ ವ್ಯಾಪಿಸಿರುವುದು ಸಾರ್ವಜನಿಕರ ಭೀತಿಗೆ ಕಾರಣವಾಗಿದೆ.‌

ಮಹಿಳೆಯರು ಮತ್ತು ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಅಪರಾಧ ಎಸಗುತ್ತಿದ್ದ ಪುಂಡರು ಇದೀಗ ಪ್ರವಾಸಿಗರ ಮೇಲೂ ಹಲ್ಲೆಗೆ ಮುಂದಾಗಿರುವುದು ಪೊಲೀಸರ ನಿದ್ದೆಗೆಡಿಸಿದೆ.

ನಗರದ ಹೊರವಲಯದಲ್ಲಿ ಮದ್ಯಸೇವಿಸುತ್ತ ಕುಳಿತಿದ್ದ ಪುಂಡರು ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಇನ್ನೂ ಹಸಿರಿರುವಾಗಲೇ ಚಾಮರಾಜ ನೂರಡಿ ರಸ್ತೆಯ ತಾತಯ್ಯ ವೃತ್ತದ ಬಳಿ ಈಚೆಗೆ ಹಾಡಹಗಲೇ ಪ್ರವಾಸಿಗರ ಮೇಲೆ ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವುದು ಆತಂಕ ಸೃಷ್ಟಿಸಿದೆ.

ಚಾಮುಂಡಿಬೆಟ್ಟದಲ್ಲಿ ಇಂತಹ ಪುಂಡರ ಹಾವಳಿ ಹೆಚ್ಚಾಗಿತ್ತು. ಸಂಜೆ ನಂತರ ಯುವತಿಯರು ಮತ್ತು ಮಹಿಳೆಯರು ಬೆಟ್ಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದರು. ಬೆಟ್ಟದ ಮೆಟ್ಟಿಲಿನ ಬಳಿ ವಿದೇಶಿ ಯುವ ತಿಯೊಬ್ಬರು ಲೈಂಗಿಕ ಕಿರುಕುಳಕ್ಕೆ ಒಳ ಗಾಗಿದ್ದರು. ಕೆ.ಆರ್.ಠಾಣೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ ನಂತರ ಇಲ್ಲಿ ಹತೋಟಿಗೆ ಬಂದಿತು.

ಪ್ರೇಮಿಗಳನ್ನಷ್ಟೇ ಗುರಿಯಾಗಿಸಿ ಕೊಂಡು ಅವರ ಮೇಲೆ ದೌರ್ಜನ್ಯ ಎಸಗುವ ಕಿಡಿಗೇಡಿಗಳು ಸಾಕಷ್ಟು ಸಂಖ್ಯೆ ಯಲ್ಲಿದ್ದಾರೆ. ಮರ್ಯಾದೆಗೆ ಅಂಜುವ ಯುವತಿಯರು ತಮ್ಮ ಮೇಲಾ ಗುವ ಕಿರುಕುಳವನ್ನು ಪೊಲೀಸರ ಗಮನಕ್ಕೆ ತರುವುದಿಲ್ಲ. ಇದರಿಂದ ಇಂತಹ ಪುಂಡರ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ.

‘ಹೊರವಲಯದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಂತಹ ಘಟನೆ ಯಲ್ಲಿ ಯುವಕನ ಮೇಲೆ ಗಂಭೀರವಾದ ದಾಳಿ ನಡೆಯದೇ ಹೋಗಿದ್ದರೆ ಬಹುಶಃ ಈ ಪ್ರಕರಣವೂ ಬೆಳಕಿಗೆ ಬರುತ್ತಿರಲಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮಾರ್ಚ್‌ ತಿಂಗಳಿನಲ್ಲಿ ವಿದ್ಯಾರಣ್ಯ ಪುರಂ ಬಳಿಯ ಮುನಿಸ್ವಾಮಿನಗರದ 8ನೇ ಕ್ರಾಸ್‌ನಲ್ಲಿ ಕೆ.ಆರ್.ಉಪವಿಭಾಗದ ಪೊಲೀಸರು ಪುಂಡರಿಗೆ ಬಿಸಿ ಮುಟ್ಟಿಸಿದ್ದರು. ನಡೆದು ಹೋಗುತ್ತಿದ್ದ ಯುವತಿಯೊಬ್ಬರನ್ನು ಆಟೊದಲ್ಲಿ ಬಂದ ನಾಲ್ವರು ಯುವಕರು ಅಡ್ಡಗಟ್ಟಿ ಕೈ ಹಿಡಿದು ಎಳೆದಾಡಿದ್ದರು. ನಿತ್ಯ ನಡೆಯುತ್ತಿದ್ದ ಇಂತಹ ಕೃತ್ಯಗಳಿಂದ ರೋಸಿ ಹೋದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಕೊನೆಗೆ, ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದರು.

ಅತ್ಯಾಚಾರ ಘಟನೆ ನಡೆದ ನಂತರ ಹೊರವಲಯದ ರಿಂಗ್‌ರಸ್ತೆಯ ಆಸುಪಾಸಿನಲ್ಲಿ ಪೊಲೀಸರು ಭದ್ರತೆ ಯನ್ನು ಹೆಚ್ಚಿಸಿದ್ದಾರೆ. ಆದರೆ, ಇನ್ನೂ ನಿರ್ಜನ ಪ್ರದೇಶಗಳಲ್ಲಿ ಹಾಗೂ ನಗರದ ಹಲವೆಡೆ ಸಾರ್ವಜನಿಕವಾಗಿ ಮದ್ಯ ಸೇವಿಸುವವರ ಗುಂಪುಗಳು ಕಂಡು ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT