ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಸಾಂಸ್ಕೃತಿಕ ಸಂಭ್ರಮ

ಶಿವರಾತ್ರಿ ಪ್ರಯುಕ್ತ ಮಾರ್ಚ್‌ 1ರಂದು ಕಲಾವಿದರಿಂದ ಕಾರ್ಯಕ್ರಮ
Last Updated 26 ಫೆಬ್ರುವರಿ 2022, 19:53 IST
ಅಕ್ಷರ ಗಾತ್ರ

ನಂಜನಗೂಡು: ‘ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಹಬ್ಬದ ಜಾಗರಣೆ ಅಂಗವಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಗರದ ಶ್ರೀಕಂಠೇಶ್ವರ ದೇವಾಲಯದಲ್ಲಿ ಶನಿವಾರ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾರ್ಚ್ 1ರಂದು ದೇವಾಲಯದಲ್ಲಿ ಶಿವರಾತ್ರಿ ಆಚರಣೆಗೆ ಸರ್ಕಾರ ಅನುಮತಿ ನೀಡಿದೆ. ಕಾರ್ಯಕ್ರಮ ಆಯೋಜಿಸಲು ಅನುದಾನ ಮಂಜೂರು ಮಾಡಿದೆ. ದೇವಾಲಯದ ಹೊರ ಆವರಣದಲ್ಲಿ ಶಿವರಾತ್ರಿ ಜಾಗರಣೆ ಆಚರಿಸಲು ಬರುವ ಭಕ್ತರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರ್ಚ್‌ 1ರಂದು ಸಂಜೆ 6ರಿಂದ 2ರಂದು ಬೆಳಿಗ್ಗೆ 6 ಗಂಟೆವರೆಗೆ ಅಹೋರಾತ್ರಿ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ದೊಡ್ಡಜಾತ್ರೆ ಆಚರಣೆಗೆ ಕ್ರಮ: ‘ಮಾರ್ಚ್ 16ರಂದು ಶ್ರೀಕಂಠೇಶ್ವರ ದೇವಾಲಯದ ದೊಡ್ಡಜಾತ್ರೆ ನಡೆಯಲಿದ್ದು, ಈ ಸಂಬಂಧ ಮುಜರಾಯಿ ಸಚಿವರ ಒಪ್ಪಿಗೆ ಪಡೆಯಲಾಗಿದೆ. ಜಾತ್ರೆಗೆ ಸಿದ್ಧತಾ ಕಾರ್ಯ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಶ್ರೀಕಂಠೇಶ್ವರ ದೇವಾಲಯದ ಕಪಿಲಾ ನದಿ ಸ್ನಾನಘಟ್ಟದ ಸಮೀಪ ಉದ್ಯಾನ, ವಾಣಿಜ್ಯ ಮಳಿಗೆಗಳ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ₹20 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ದೇವಾಲಯದ ಬೆಳ್ಳಿರಥ, ಅತಿಥಿಗೃಹ ನಿರ್ಮಾಣದ ಕಾಮಗಾರಿಗೆ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ’ ಎಂದರು.

‘ಈ ಬಾರಿ ಉತ್ತಮ ಬಜೆಟ್ ಘೋಷಣೆಯಾಗುವ ನಿರೀಕ್ಷೆಯಿದೆ. ತಾಲ್ಲೂಕಿನ ಯಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆಗೆ ₹30 ಕೋಟಿ, ಕೌವಲಂದೆ ಭಾಗದ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವ ಜತೆಗೆ ಹಸಿರೀಕರಣಕ್ಕಾಗಿ ₹70 ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ. ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ರೂಪಿಸಲು ಸಚಿವ ಆನಂದ್‍ಸಿಂಗ್ ಅವರಿಗೆ ಮನವಿ ಮಾಡಿದ್ದೇನೆ. ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ನಾಗರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹೊರಳವಾಡಿ ಮಹೇಶ್, ಕುಂಬ್ರಳ್ಳಿ ಸುಬ್ಬಣ್ಣ, ಸಿ.ಚಿಕ್ಕರಂಗನಾಯಕ, ಎಸ್.ಎಂ.ಕೆಂಪಣ್ಣ, ನಗರಸಭಾ ಸದಸ್ಯರಾದ ಕಪಿಲೇಶ್, ತಾ.ಪಂ ಮಾಜಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಮಧುರಾಜ್, ಶ್ರೀಕಂಠ ಉಪಸ್ಥಿತರಿದ್ದರು.

* ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

-ಹರ್ಷವರ್ಧನ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT