ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ದಸರಾ: ಕಲಾವಿದರಿಗೆ ಸಿಗದ ಮಾಹಿತಿ

ಗೊಂದಲದಲ್ಲಿ ಕಲಾವಿದರು: 8 ವೇದಿಕೆಗಳ ಪಟ್ಟಿಯೂ ಅಲಭ್ಯ
Last Updated 26 ಸೆಪ್ಟೆಂಬರ್ 2022, 4:05 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಉದ್ಘಾಟನೆಯ ದಿನ ಬಂದರೂ ಸಾಂಸ್ಕೃತಿಕ ದಸರಾ ಕಾರ್ಯ ಕ್ರಮಗಳ ಪಟ್ಟಿ ಪ್ರಕಟವಾಗಿಲ್ಲ. ಕಲಾ ಪ್ರದರ್ಶನಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆಯೂ ಇಲ್ಲ. ಕಲಾವಿದರು ಮತ್ತು ಪ್ರದರ್ಶನಗಳ ಮಾಹಿತಿಯೂ ಲಭ್ಯವಾಗಿಲ್ಲ.

ಒಟ್ಟು 8 ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಉಪಸಮಿತಿ ಪದಾಧಿಕಾರಿಗಳು ಹೇಳುತ್ತಾರೆ. ಆದರೆ, ಎಲ್ಲೆಲ್ಲಿ ವೇದಿಕೆಗಳನ್ನು ನಿರ್ಮಿಸಲಾಗಿದೆ, ಯಾವ ದಿನ, ಯಾವ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗದಂತಾಗಿದೆ.

ಪ್ರದರ್ಶನಕ್ಕೆ ಆಯ್ಕೆಯಾಗಿರುವ ಕಲಾವಿದರಿಗೆ ಹಾಗೂ ತಂಡಗಳಿಗೆ ಮಾತ್ರ ಮಾಹಿತಿಯನ್ನು ನೀಡಿರುವುದು ಅನುಮಾನಗಳಿಗೆ ದಾರಿ ಮಾಡಿದೆ. ಪ್ರದರ್ಶನ ನೀಡಲಿರುವ ವೇದಿಕೆಗಳ ಬಗ್ಗೆಯೂ ಕಲಾವಿದರಿಗೆ ಮಾಹಿತಿ ನೀಡದಿರುವುದರಿಂದ, ಆಯ್ಕೆಯಾ ದವರೂ ಗೊಂದಲ ದಲ್ಲಿದ್ದಾರೆ.

ಪ್ರದರ್ಶನ ನೀಡುವ ಆಸೆಯಿಂದ ರಾಜ್ಯದಾದ್ಯಂತ ಸಾವಿರಾರು ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆಯಾದ ಕಲಾವಿದರಿಗೆ ಮಾತ್ರ ಸಾಂಸ್ಕೃತಿಕ ದಸರಾ ಉಪಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಯ್ಕೆಯಾಗದಿರುವ ಕಲಾವಿದರಿಗೆ ಯಾವುದೇ ಮಾಹಿತಿ ನೀಡದಿರುವುದ ರಿಂದ ಅವರೆಲ್ಲ ಗೊಂದಲದಲ್ಲಿದ್ದಾರೆ.

‘ದಸರಾ ಮಹೋತ್ಸವದಲ್ಲಿ ಬಯಲಾಟ ಪ್ರದರ್ಶನ ನೀಡುವ ಉದ್ದೇಶದಿಂದ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದೆವು. ಪ್ರದರ್ಶನಕ್ಕೆ ಆಯ್ಕೆಯಾದ ಅಥವಾ ಆಗದಿರುವ ಬಗ್ಗೆ ಈವರೆಗೆ ಮಾಹಿತಿಯೇ ಸಿಕ್ಕಿಲ್ಲ. ಆಯ್ಕೆಯಾಗಿದ್ದರೆ ಕಲಾವಿದರನ್ನು ಒಟ್ಟುಗೂಡಿಸಿ ಮೈಸೂರಿಗೆ ಕರೆತರುವುದು ಕಷ್ಟವಾಗುತ್ತದೆ’ ಎಂದು ಬಳ್ಳಾರಿ ಜಿಲ್ಲೆಯ ಬಯಲಾಟ ತಂಡವೊಂದರ ಮುಖಂಡರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ನಮ್ಮ ತಂಡದಲ್ಲಿ 9 ಕಲಾವಿದರಿ ದ್ದಾರೆ. ಅವರನ್ನು ಒಂದೆಡೆ ಸೇರಿಸಿ, ಮೈಸೂರಿಗೆ ರೈಲಿನಲ್ಲಿ ಕರೆತರಬೇಕಾದರೆ ಸಮಯ ಹಿಡಿಯುತ್ತದೆ. ಹೀಗಾಗಿ, ಮುಂಚಿತವಾಗಿ ಮಾಹಿತಿ ನೀಡಿದರೆ ಒಳಿತು’ ಎಂದರು.

‘ಸೆ.30ರಂದು ಬಾಹುಬಲಿ ನಾಟಕ ಪ್ರದರ್ಶಿಸುವಂತೆ ಸಾಂಸ್ಕೃತಿಕ ದಸರಾ ಉಪಸಮಿತಿ ಸದಸ್ಯರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪುರಭವನದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿದ್ದು, ಅದು ತೆರೆದ ವೇದಿಕೆಯೋ, ಮುಚ್ಚಿದ ವೇದಿಕೆಯೋ ಗೊತ್ತಿಲ್ಲ’ ಎಂದು ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ಧಾತ್ರಿ ರಂಗ ಸಂಸ್ಥೆಯವರು ತಿಳಿಸಿದರು.

‘ಕಲಾ ಪ್ರದರ್ಶನ ನೀಡಲು ಒಟ್ಟು 2,073 ಕಲಾವಿದರು ಅರ್ಜಿ ಸಲ್ಲಿಸಿದ್ದು, 270 ಮಂದಿಗಷ್ಟೇ ಅವಕಾಶ ನೀಡಲಾಗಿದೆ. ಆಯ್ಕೆಯಾದವರಿಗೆ 2–3 ಬಾರಿ ದೂರವಾಣಿ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ನೀಡಲಾಗಿದೆ. ಆಯ್ಕೆಯಾಗದ 1,803 ಕಲಾವಿದರಿಗೆ ಕರೆ ಮಾಡಿ ಮಾಹಿತಿ ನೀಡಲು ಸಾಧ್ಯವಿಲ್ಲ. ಕರೆ ಬಂದಿಲ್ಲವೆಂದರೆ ಅವರು ಆಯ್ಕೆಯಾಗಿಲ್ಲ ಎಂದರ್ಥ’ ಎಂದು ಸಾಂಸ್ಕೃತಿಕ ದಸರಾ ಉಪಸಮಿತಿ ಕಾರ್ಯಾಧ್ಯಕ್ಷೆ ನಿರ್ಮಲಾ ಮಠಪತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT