ಅಪ್ಪ, ಮಗ ಜೋಡಿ ಕೊಲೆ; ಮೂವರ ಬಂಧನ
ಮೈಸೂರು: ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ಮರಿಕೋಟೇಗೌಡ (48) ಹಾಗೂ ಇವರ ಪುತ್ರ ಸತೀಶ್‌ಕುಮಾರ್ (25) ಅವರ ಕೊಲೆ ಪ್ರಕರಣ ಬೇಧಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ಗ್ರಾಮದ ನಿವಾಸಿಗಳಾದ ಮಂಜುನಾಥ್ (22), ಮಹದೇವಸ್ವಾಮಿ (22) ಹಾಗೂ ಸತೀಶ್ (22) ಬಂಧಿತರು.
ಘಟನೆ ವಿವರ: ಕೊಲೆಯಾದ ಸತೀಶ್‌ಕುಮಾರ್ ಹಾಗೂ ಆರೋಪಿಗಳಿಗೆ ಮೊದಲಿನಿಂದಲೂ ಹಳೆ ವೈಷಮ್ಯ ಇತ್ತು. ಈ ಕಾರಣದಿಂದಾಗಿ ಸತೀಶ್‌ಕುಮಾರ್ ಅವರನ್ನು ಡಿ.26ರಂದು ಎಪಿಎಂಸಿ ಸಮೀಪ ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಹಿಂದಿನಿಂದ ಆರೋಪಿಗಳು ಮಾರಕಾಸ್ತ್ರಗಳಿಂದು ಹೊಡೆದು ಕೊಲೆ ಮಾಡಿದ್ದಾರೆ. ನಂತರ, ಶವವನ್ನು ಪೊದೆಯೊಂದರಲ್ಲಿ ಎಸೆದಿದ್ದಾರೆ.
ಒಂದೆರಡು ದಿನಗಳ ನಂತರ ಸತೀಶ್‌ಕುಮಾರ್ ತಂದೆ ಮರಿಕೋಟೆಗೌಡ ಅವರು ಪುತ್ರ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ವೇಳೆ ಪೊಲೀಸ್ ತನಿಖೆಯಲ್ಲಿ ಪುತ್ರ ಕೊಲೆಯಾಗಿರುವುದು ಗೊತ್ತಾದರೆ ತಂದೆ ಮರಿಕೋಟೆಗೌಡ ಕೊಲೆ ಮಾಡಬಹುದು ಎಂದು ಹೆದರಿ ಜ. 2ರಂದು ಮರಿಕೋಟೆಗೌಡ ಅವರನ್ನು ಮಂಡಕಳ್ಳಿ–ಶ್ರೀನಗರ ಮಧ್ಯೆ ರಸ್ತೆಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಕಳ್ಳತನದ ಆರೋಪಿ ಬಂಧನ:ದ್ವಿಚಕ್ರ ವಾಹನಗಳ ಕಳ್ಳತನದ ಆರೋಪಿ ಕ್ಯಾತಮಾರನಹಳ್ಳಿ ನಿವಾಸಿ ಕಿರಣ್ (23) ಎಂಬಾತನನ್ನು ಬಂಧಿಸಿರುವ ಕೆ.ಆರ್.ಠಾಣೆ ಪೊಲೀಸರು ಈತನಿಂದ ₹ 3.50 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಗೋವು ಸಾಗಣೆ; ಆರೋಪಿ ಬಂಧನ
ಮೈಸೂರು: ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ಕೇರಳದ ಕಣ್ಣೂರು ಜಿಲ್ಲೆಯ ಸಮೀರ್ (34) ಎಂಬಾತನನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು 2 ಎಮ್ಮೆ ಕರು ಹಾಗೂ 1 ಹಸುವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.