ನಿತ್ಯ ಮಜ್ಜನ; ಭರ್ಜರಿ ಭೋಜನ

7
ಅರಮನೆ ಆವರಣದಲ್ಲಿ ಗಜಪಡೆಗೆ ತರಹೇವಾರಿ ಪೌಷ್ಟಿಕ ಆಹಾರ

ನಿತ್ಯ ಮಜ್ಜನ; ಭರ್ಜರಿ ಭೋಜನ

Published:
Updated:
Deccan Herald

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಎನಿಸಿರುವ ಗಜಪಡೆಯ ಆಹಾರದಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳಿಗೆ ನಿತ್ಯ ಪೌಷ್ಟಿಕ ಆಹಾರದ ಮೂಲಕ ಮತ್ತಷ್ಟು ಶಕ್ತಿ ತುಂಬಲಾಗುತ್ತಿದೆ.

ಜಂಬೂ ಸವಾರಿಯಲ್ಲಿ ಭಾಗವಹಿಸಲು ಅರಮನೆ ಆವರಣಕ್ಕೆ ಕಾಲಿಟ್ಟಾಗಿನಿಂದ ಹಿಡಿದು ವಾಪಸ್‌ ಕಾಡಿಗೆ ಹೋಗುವವರೆಗೆ ಆನೆಗಳ ಪಾಲಿಗೆ ನಿತ್ಯ ಹಬ್ಬ. ತಾಲೀಮು ಆರಂಭಕ್ಕೂ ಮುನ್ನ ಹಾಗೂ ತಾಲೀಮು ಮುಗಿದ ನಂತರ ದಿನಕ್ಕೆ ಎರಡು ಬಾರಿ ವಿಶೇಷ ಆಹಾರ ನೀಡಲಾಗುತ್ತದೆ. ದಿನದಿಂದ ದಿನಕ್ಕೆ ಪ್ರಮಾಣ ಹೆಚ್ಚಿಸಲಾಗುತ್ತದೆ. ಹಸಿವಾಗಲು ಹಾಗೂ ಮೈಕಟ್ಟಲು ವಿಟಮಿನ್‌ ಹಾಗೂ ‘ಬಿ’ ಕಾಂಪ್ಲೆಕ್ಸ್ ಪೂರೈಸಲಾಗುತ್ತದೆ.

ಮುಂಜಾನೆ 6 ಗಂಟೆ ಹಾಗೂ ಸಂಜೆ 5ಕ್ಕೆ ಶಕ್ತಿ ವೃದ್ಧಿಸಿ, ಮೈಕಟ್ಟು ಅರಳಿಸುವ ಆಹಾರ ಪದಾರ್ಥ ನೀಡಲಾಗುತ್ತದೆ. ಹಸಿರು ಕಾಳು, ಉದ್ದಿನ ಕಾಳು, ಹೆಸರು ಕಾಳು, ಕುಸುಬಲ ಅಕ್ಕಿ, ಗೋಧಿ ಬೇಯಿಸಿ ಅದಕ್ಕೆ ಈರುಳ್ಳಿ, ಉಪ್ಪು ಹಾಕಿ ಬೇಯಿಸಲಾಗುತ್ತದೆ. ಬೀಟ್‌ರೂಟ್, ಕ್ಯಾರೆಟ್‌, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡು ಮಿಶ್ರಣ ಮಾಡಲಾಗುತ್ತದೆ. ನಂತರ ಅದಕ್ಕೆ ತರಕಾರಿ, ತುಪ್ಪ ಹಾಕಿ ಗುಡ್ಡೆ ಮಾಡಿ ಬೆಳಿಗ್ಗೆ 6 ಗಂಟೆಗೆ ತಿನ್ನಿಸಲಾಗುತ್ತದೆ.

ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಹಿಂಡಿ, ಬೆಣ್ಣೆ, ವಿವಿಧ ಬಗೆಯ ಸೊಪ್ಪು, ಕೊಬ್ಬರಿ, ಉಪ್ಪು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಿ ನೀಡಲಾಗುತ್ತದೆ.

ಅರ್ಜುನನ ಆರೈಕೆ: 750 ಕೆ.ಜಿ.ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್‌ ಅರ್ಜುನನ ಆಹಾರದಲ್ಲೂ ವಿಶೇಷ ಆರೈಕೆ ಮಾಡಲಾಗುತ್ತದೆ. ಹೆಚ್ಚಿನ ಬೆಣ್ಣೆ, ಬೆಲ್ಲ, ಕೊಬ್ಬರಿ, ಕಬ್ಬು ನೀಡಿ ಬಲಶಾಲಿಯನ್ನಾಗಿ ಮಾಡಲಾಗುತ್ತಿದೆ.
ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ ದೂರವನ್ನು ಈ ಆನೆಗಳು ಕ್ರಮಿಸಬೇಕು. ಹೀಗಾಗಿ, ಒಂದೂವರೆ ತಿಂಗಳು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಕಾಡಿನ ಆಹಾರವೇ ಬೇರೆ: ಕಾಡಿನ ವಿವಿಧ ಶಿಬಿರಗಳಲ್ಲಿ ಈ ಆನೆಗಳು ದಿನವಿಡೀ ಸುತ್ತಾಡುತ್ತಾ ಹಸಿರು ಸಸ್ಯ, ಹುಲ್ಲು, ಬಿದಿರು, ಸೊಪ್ಪು, ಗೆಣಸು ತಿನ್ನುತ್ತವೆ. ಅದಕ್ಕೆ ಮಿತಿ ಇರುವುದಿಲ್ಲ. ಮಾವುತರಾಗಲಿ, ಕಾವಾಡಿಗರಾಗಲಿ, ವೈದ್ಯರಾಗಲಿ ಗಮನ ಇಡುವುದಿಲ್ಲ. ಆದರೆ, ದಸರಾ ಮಹೋತ್ಸವಕ್ಕೆ ಬಂದ ಮೇಲೆ ಅವುಗಳ ಆಹಾರದ ಮೇಲೆ ಕಣ್ಣಿಡಲಾಗುತ್ತದೆ.
ತಯಾರಿ ಎಲ್ಲಿ?: ದಸರಾ ಆನೆಗಳ ಉಸ್ತುವಾರಿ ನೋಡಿಕೊಳ್ಳುವ ರಂಗರಾಜು ಅವರ ನೇತೃತ್ವದಲ್ಲಿ ವಿಶೇಷ ಆಹಾರ ಸಿದ್ಧಪಡಿಸಲಾಗುತ್ತದೆ.‌ ಅರಮನೆಯ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇಗುಲದ ಬಳಿ ಆಹಾರ ತಯಾರಿಕೆಗಾಗಿ ಪ್ರತ್ಯೇಕ ಶೆಡ್ ನಿರ್ಮಿಸಲಾಗಿದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಧಿ ಬೇಯಿಸಲಾಗುತ್ತಿದೆ. ಬಳಿಕ ಆ ಪಾತ್ರೆಗೆ ಹಸಿರು ಕಾಳು, ಕುಸುಬಲ ಅಕ್ಕಿ, ಈರುಳ್ಳಿ ಬೆರೆಸಿ ಮತ್ತೆ ಬೇಯಿಸಲಾಗುತ್ತದೆ. ಹೀಗೆ ಸುಮಾರು ಎರಡೂವರೆ ಗಂಟೆ ಬೇಯಿಸಿದ ನಂತರ ಒಂದು ಗಂಟೆ ಇಡಲಾಗುತ್ತದೆ. ಮಧ್ಯಾಹ್ನ 3.30ಕ್ಕೆ ಬೇಯಿಸಿದ ಧಾನ್ಯಗಳನ್ನು ದೊಡ್ಡ ತಟ್ಟೆಗೆ ಹಾಕಿ ಮುದ್ದೆಯಂತೆ ಉಂಡೆ ಕಟ್ಟಿ ಸಂಜೆ ಆನೆಗಳು ತಾಲೀಮಿಗೆ ಹೋಗುವ ಮುನ್ನ ನೀಡಲಾಗುತ್ತದೆ.
ತಾಲೀಮು ಮುಗಿಸಿ ಬಂದ ನಂತರ ರಾತ್ರಿ 7ಕ್ಕೆ ಮತ್ತೊಮ್ಮೆ ಆಹಾರ ಪದಾರ್ಥ ಬೇಯಿಸಲಾಗುತ್ತದೆ. ರಾತ್ರಿ 9ರ ನಂತರ ಬೇಯಿಸಿದ ಆಹಾರ ಪದಾರ್ಥವನ್ನು ದಾಸ್ತಾನು ಕೊಠಡಿಯಲ್ಲಿಟ್ಟು ಬೀಗ ಹಾಕಲಾಗುತ್ತದೆ. ಮುಂಜಾನೆ 5ಕ್ಕೆ ಬೇಯಿಸಿದ ಆಹಾರ ಪದಾರ್ಥವನ್ನು ತೆಗೆದು ಮುದ್ದೆ ಕಟ್ಟಿ 5.30ರಿಂದ 6.30ರ ಒಳಗೆ ಎಲ್ಲಾ ಆನೆಗಳಿಗೂ ನೀಡಲಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !