ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಕೇರಿಯಲ್ಲಿ ಸಾಮರಸ್ಯ ನಡಿಗೆ:ನನ್ನ ಪ್ರಯತ್ನ ನಾನು ಮಾಡುವೆ:ವಿಶ್ವೇಶತೀರ್ಥರು

Last Updated 11 ಸೆಪ್ಟೆಂಬರ್ 2019, 14:36 IST
ಅಕ್ಷರ ಗಾತ್ರ

ಮೈಸೂರು: ‘ದಲಿತರ ಏಳ್ಗೆಗಾಗಿ ಶ್ರಮಿಸುತ್ತಿರುವೆ. ನನ್ನ ಪ್ರಯತ್ನವನ್ನು ನಾನು ಮಾಡುವೆ’ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಇಲ್ಲಿ ಹೇಳಿದರು.

ನಗರದಲ್ಲಿನ ಮಂಜುನಾಥಪುರದ ದಲಿತರ ಕಾಲೊನಿಯಲ್ಲಿ ಸ್ಥಳೀಯ ಶ್ರೀ ವೀರಾಂಜನೇಯ ಸ್ವಾಮಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ‘ಸಾಮರಸ್ಯ ಪಾದಯಾತ್ರೆ’ಯಲ್ಲಿ ಭಾಗಿಯಾದ ಸ್ವಾಮೀಜಿ ದಲಿತರೊಬ್ಬರ ಮನೆಗೆ ಭೇಟಿ ನೀಡಿ, ಪಾದ ಪೂಜೆ ಸ್ವೀಕರಿಸಿದರು.

ವಿಶ್ವೇಶತೀರ್ಥ ಸ್ವಾಮೀಜಿ ದೇಗುಲದ ಬಳಿ ಬರುತ್ತಿದ್ದಂತೆ, ನೆರೆದಿದ್ದ ಜನಸ್ತೋಮ ಹರ್ಷೋದ್ಗಾರದಿಂದ ಘೋಷಣೆಗಳನ್ನು ಮೊಳಗಿಸಿತು. ‘ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು, ಹರೇ ರಾಮ. ಹರೇ ಕೃಷ್ಣ’ ಜಯಘೋಷ ಸೇರಿದಂತೆ ಭಜನೆ ಮುಗಿಲು ಮುಟ್ಟಿದವು.

ಸ್ವಾಮೀಜಿ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಪೂರ್ಣಕುಂಭ ಹೊತ್ತ ಮಹಿಳೆಯರು ಸ್ವಾಗತಿಸಿದರು. ಹೆಣ್ಮಕ್ಕಳು ಪುಷ್ಪಾರ್ಚನೆಗೈದರು. ಸಾಮರಸ್ಯದ ಪಾದಯಾತ್ರೆ ಆರಂಭಗೊಳ್ಳುತ್ತಿದ್ದಂತೆ ವರ್ಷಧಾರೆಯೂ ಸುರಿಯಲಾರಂಭಿಸಿತು. ಕೊಂಚ ದೂರ ಸಾಗುವಷ್ಟರಲ್ಲೇ ಮಳೆ ಬಿರುಸಾಯಿತು.

ಮನೆ ಬಾಗಿಲಲ್ಲೇ ಸ್ವಾಮೀಜಿ ಸತ್ಕಾರಕ್ಕಾಗಿ ತುಳಸಿ ಮಾಲೆಗಳನ್ನು ಹಿಡಿದು ನಿಂತಿದ್ದ ರಾಚಮ್ಮ–ಚೌಡಯ್ಯ ದಂಪತಿ ಮನೆ ಪ್ರವೇಶಿಸಿದ ಸ್ವಾಮೀಜಿ, ಪಾದ ಪೂಜೆ ಸ್ವೀಕರಿಸಿದರು. ರಾಚಮ್ಮ ಸೇರಿದಂತೆ ಮಳೆಯಿಂದ ರಕ್ಷಣೆ ಪಡೆಯಲು ಮನೆಯೊಳಕ್ಕಿದ್ದ ಹಲವರು ವಿಶ್ವೇಶತೀರ್ಥರ ಪಾದ ಮುಟ್ಟಿ ನಮಸ್ಕರಿಸಿದರು.

ಈ ಸಂದರ್ಭ ಸ್ವಾಮೀಜಿ ರಾಚಮ್ಮ ಜತೆ ಕುಶಲೋಪರಿ ನಡೆಸಿದರು. ರಾಚಮ್ಮ ತನ್ನ ಮನೆಯ ಸಂಕಷ್ಟ ಹೇಳಿಕೊಂಡು ಪತಿ ಚೌಡಯ್ಯನಿಗಿರುವ ಹೃದಯ ರೋಗದ ಬಗ್ಗೆ ವಿಶ್ವೇಶತೀರ್ಥರ ಬಳಿ ಹೇಳಿಕೊಂಡರು. ಮಹಿಳೆಯ ಅಳಲಿಗೆ ತಕ್ಷಣವೇ ಸ್ಪಂದಿಸಿದ ಸ್ವಾಮೀಜಿ ಮಠದಿಂದ ನೆರವು ನೀಡುವುದಾಗಿ ಪ್ರಕಟಿಸಿದರು. ಸುರಿಯೋ ಮಳೆಯಲ್ಲೇ ಕಾರಿನ ಮೂಲಕ ವೀರಾಂಜನೇಯ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಚಾತುರ್ಮಾಸ್ಯ ಕೈಗೊಂಡಿರುವ ಕೃಷ್ಣಧಾಮಕ್ಕೆ ಮರಳಿದರು.

ರಾಮಕೃಷ್ಣಾಶ್ರಮದ ಯುಕ್ತೇಶಾನಂದ ಮಹಾರಾಜ್‌, ಶಿವಕಾಂತಾನಂದ ಮಹಾರಾಜ್‌ ಪೇಜಾವರ ಶ್ರೀಗೆ ಸಾಮರಸ್ಯದ ಪಾದಯಾತ್ರೆಯಲ್ಲಿ ಸಾಥ್ ನೀಡಿದರು. ಸ್ಥಳೀಯರು ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT