ಶನಿವಾರ, ನವೆಂಬರ್ 23, 2019
17 °C
ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಅನಾವರಣ

ದಲಿತರಿಗೆ ಅನುದಾನ ಮೀಸಲಾತಿ ಕಡ್ಡಾಯ: ಸಿದ್ದರಾಮಯ್ಯ

Published:
Updated:
Prajavani

ತಿ.ನರಸೀಪುರ: ಸರ್ಕಾರದ ಅನುದಾನದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳು ಕಡ್ಡಾಯವಾಗಿ ಶೇ 24.1ರಷ್ಟು ಬಳಕೆ ಮಾಡುವಂತೆ ಕಾನೂನು ಮಾಡಿದ್ದೇವೆ. ಯಾವುದೇ ಸರ್ಕಾರ ಬಂದರೂ ಇದನ್ನು ಪಾಲಿಸಲೇಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ಯೋಜನೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟು ಬಳಕೆ ಮಾಡಲು ಕಾಂಗ್ರೆಸ್ ಸರ್ಕಾರ ಕಾನೂನು ಮಾಡಿದೆ. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯ ಶೇ 17.15, ಪರಿಶಿಷ್ಟ ಪಂಗಡ ಶೇ 6.95 ಜನಸಂಖ್ಯೆಯಲ್ಲಿ ಪಾಲಿದೆ. ಅದರಂತೆ ಎಸ್‍ಇಪಿ, ಟಿಎಸ್‍ಪಿ ಯೋಜನೆಗೆ 2019-20ನೇ ಸಾಲಿಗೆ ₹ 30,140 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಅದರ ಅನುದಾನ ಕೂಡ ಹೆಚ್ಚಾಗುತ್ತದೆ. ಉದ್ಯೋಗ, ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡಿದ್ದೇವೆ. ನಮ್ಮ ಸರ್ಕಾರವಿದ್ದಾಗ ₹ 1 ಕೋಟಿವರೆಗೆ ಗುತ್ತಿಗೆ ಮೀಸಲಾತಿ ನೀಡಲಾಗಿತ್ತು. ಈ ಹಣವನ್ನು ₹ 2 ಕೋಟಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‌ನಲ್ಲಿ ಓದಿದ್ದರು. ಅದರ ಮಾದರಿಯಲ್ಲೇ ಬೆಂಗಳೂರಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಆಫ್ ಎಕಾನಮಿಕ್ಸ್ ಸಂಸ್ಥೆ ಪ್ರಾರಂಭ ಮಾಡಿದ್ದೇವೆ. ಅಂಬೇಡ್ಕರ್ ಒಂದು ಸಮುದಾಯಕ್ಕೆ ಸೀಮಿತರಲ್ಲ. ಎಲ್ಲ ಶೋಷಿತ ವರ್ಗಕ್ಕೂ ಸೇರಿದವರು. ಅವರ ಸಾಮಾಜಿಕ ನ್ಯಾಯದ ರಥ ಮುಂದುವರಿಯಬೇಕಾದಲ್ಲಿ ಅಂಬೇಡ್ಕರ್ ಅವರ ಚಿಂತನೆ, ಸಂವಿಧಾನದ ರಕ್ಷಣೆ ಮಾಡುವವರನ್ನು ಜನತೆ ಬೆಂಬಲಿಸಬೇಕು’ ಎಂದು ಸಲಹೆ ಮಾಡಿದರು.

ದಲಿತರಿಗೆ ಹಿಂಬಡ್ತಿಗೆ ಸಂಬಂಧಿಸಿದಂತೆ ವಿಶೇಷ ಕಾನೂನು ರೂಪಿಸಿ ಸರ್ಕಾರ ನೌಕರರ ಹಿತ ಕಾದಿದೆ. ಇದರ ವಿರುದ್ಧವಾಗಿ ‘ಅಹಿಂಸಾ’ ಎಂಬ ಹೆಸರಿನಲ್ಲಿ ಕೆಲವರು ಬಂದು ನಮ್ಮನ್ನು ಕೇಳಿದ್ದರು. ನಾವು ಸಂವಿಧಾನ ರೀತಿಯಲ್ಲಿ ಸರ್ಕಾರ ನಡೆಸುತ್ತಿದ್ದೇವೆ. ಎಲ್ಲರ ಹಿತ ಕಾಯುವುದು ನಮ್ಮ ಕರ್ತವ್ಯ. ಅಂಬೇಡ್ಕರ್ ಆಶಯದಂತೆ ನಡೆಯುತ್ತಿದ್ದೇವೆ ಎಂದು ತಿಳಿ ಹೇಳಿದ್ದಾಗಿ ಇಲ್ಲಿ ಸ್ಮರಿಸಿದರು.

ಸಂಸದ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ‘ಅಂಬೇಡ್ಕರ್ ರಾಜಕೀಯ ಮುಖಂಡರಲ್ಲ. ಅವರು ನಮ್ಮ ಆಧ್ಯಾತ್ಮಿಕ ನಾಯಕರು. ಅ. 14 ಅವರು ಬೌದ್ಧಧರ್ಮ ಸ್ವೀಕರಿಸಿದ ಪವಿತ್ರ ದಿನ. ಶೋಷಿತರಿಗೆ ಅಂಬೇಡ್ಕರ್ ಅವರು ಸ್ವಾಭಿಮಾನಿ, ಸ್ವಾವಲಂಬಿ ಬದುಕು ಕಟ್ಟಿಕೊಡಲು ದನಿಯಾಗಿ ನಿಂತವರು. ನಮ್ಮೊಳಗಿನ ಜಾತಿಯ ಒಳಪಂಗಡಗಳ ಗೊಂದಲ ನಿರ್ಮಿಸುವುದು ಬೇಡ. ಧಾರ್ಮಿಕ ವಿಮೋಚನೆ ನೀಡಿ ಸಮಾಜದಲ್ಲಿ ಗೌರವಯುತ ನಾವು ಬದುಕುವ ಧೃಡ ನಿರ್ಣಯವನ್ನು ನಮಗೆ ಕೊಟ್ಟಿದ್ದಾರೆ. ಪಕ್ಷ ಯಾವುದೇ ಇರಲಿ. ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಇಡೀ ದೇಶದ ಉದ್ದಗಲಕ್ಕೂ ಹಿಂದೂ ದಮನಕಾರಿ ನೀತಿಯ ವಿರುದ್ಧ ಧ್ವನಿ ಎತ್ತಿ, ಬುದ್ಧನೆಡೆಗೆ ಹೆಜ್ಜೆ ಹಾಕುವ ಪ್ರಯತ್ನ ಮಾಡಿದರೆ ನಮ್ಮ ಮನೆ ಮುಂದೆ ಜನ ನಿಲ್ಲುತ್ತಾರೆ. ನಾವು ದಲಿತರು ಇತ್ತ ಹಿಂದೂ ಧರ್ಮವನ್ನು ಪಾಲನೆ ಮಾಡುತ್ತೇವೆ; ಅತ್ತ ಬುದ್ಧನನ್ನೂ ಸ್ಮರಿಸುತ್ತೇವೆ. ಇಂದು ದಲಿತ ಸಮುದಾಯಗಳು ಕೋಮುವಾದದ ವಿರುದ್ಧ ದನಿ ಎತ್ತಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಬೇಕು’ ಎಂದು ಕರೆ ನೀಡಿದರು.

ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಅಶ್ವಿನ್ ಕುಮಾರ್ ಮಾತನಾಡಿದರು. ಕಾಂಗ್ರೆಸ್‌ ಮುಖಂಡರಾದ ಕಳಲೆ ಕೇಶವಮೂರ್ತಿ, ಸುನಿಲ್ ಬೋಸ್, ಶಶಿಕಲಾ ನಾಗರಾಜು, ತಾ.ಪಂ ಅಧ್ಯಕ್ಷ ಚೆಲುವರಾಜು, ಅಂಬೇಡ್ಕರ್ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.

ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ, ಪ್ರಸಾದ್
ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಆದರೆ, ಇಬ್ಬರೂ ಪರಸ್ಪರ ಮಾತನಾಡಲಿಲ್ಲ. ಶಾಸಕ ಡಾ.ಯತೀಂದ್ರ ಹಾಗೂ ಮುಖಂಡ ಸುನಿಲ್ ಬೋಸ್ ಅವರ ಜತೆ ಪ್ರಸಾದ್ ಮಾತನಾಡಿದ್ದು ಗಮನಸೆಳೆಯಿತು. ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತೆರಳಿದರು.

ಒಡೆದು ಆಳುವುದು ಬೇಡ
ಒಳ ಮೀಸಲಾತಿ ಎಂದು ದಲಿತರನ್ನು ಒಡೆದು ಆಳುವುದು ಬೇಡ ಎಂದು ಸಂಶದ ವಿ.ಶ್ರೀನಿವಾಸ ಪ್ರಸಾದ್ ಮನವಿ ಮಾಡಿದರು.

ದಲಿತರಲ್ಲಿ ಒಳಮೀಸಲಾತಿ ನೀಡಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಲ್ಲ ದಲಿತರಿಗೂ ಸೌಲಭ್ಯ ಪಡೆಯುವ ಹಕ್ಕಿದೆ. ಮೀಸಲಾತಿ ಇದೆ. ಇದನ್ನು ಶೋಷಿತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು. ಶೋಷಿತರನ್ನು ಒಡೆದು ಆಳುವ ಅವಕಾಶವಾದಿ ಜನರಿದ್ದಾರೆ; ಅವರ ಬಗ್ಗೆ ಎಚ್ಚರಿಕೆ ಇರಲಿ. ಅಂಬೇಡ್ಕರ್ ಅವರ ಆಶಯ ಈಡೇರಲು ದಲಿತರು, ಧರ್ಮದ ಕಲಂನಲ್ಲಿ ‘ಬೌದ್ಧಿಸ್ಟ್’ ಎಂದು ನಮೂದಿಸುವಂತೆ ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)