ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಳೆಯನ್ನೇ ಹೊದ್ದ ದಳವಾಯಿ ಕೆರೆ

ನಗರದ ಚರಂಡಿ ನೀರು ಕೆರೆಯ ಒಡಲಿಗೆ l ಜೊಂಡಿನ ಆಗರವಾದ ಜಲಮೂಲ
Last Updated 26 ಆಗಸ್ಟ್ 2021, 4:26 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಊಟಿ ರಸ್ತೆಯಲ್ಲಿ ವಿಶಾಲವಾಗಿ ಚಾಚಿಕೊಂಡಿರುವ ದಳವಾಯಿ ಕೆರೆಯೇನೂ ಬತ್ತಿಲ್ಲ. ಆದರೆ, ನಗರದ ಮಲಿನ ನೀರೆಲ್ಲ ಅದರ ಒಡಲು ತುಂಬುತ್ತಿದೆ.

ಈಗ ಮೈದಾನಗಳಾಗಿರುವ ದೊಡ್ಡಕೆರೆ, ಸುಬ್ಬರಾಯನಕೆರೆ, ಜೀವರಾಯನ ಕೆರೆಗಳಲ್ಲಿ ತುಂಬಿದ ನೀರು 16.5 ಚದರ ಕಿ.ಮೀನಷ್ಟು ಜಲಾನಯನ ಪ್ರದೇಶವನ್ನು ಹೊಂದಿರುವ ದಳವಾಯಿ ಕೆರೆಯನ್ನು ಸೇರುತ್ತಿತ್ತು. ಐದು ದಶಕಗಳಿಂದ ಮೈಸೂರಿನ ಅರ್ಧ ಭಾಗದಷ್ಟು ಜನವಸತಿ ಪ್ರದೇಶದ ಚರಂಡಿ ನೀರು ಈ ಕೆರೆಯನ್ನು ಸೇರುತ್ತಿದೆ.

ಸೀವೆಜ್‌ ಫಾರಂನಲ್ಲಿ ಸಂಸ್ಕರಣೆಗೊಂಡ ಚರಂಡಿ ನೀರಿನೊಂದಿಗೆ ಜೆ.ಪಿ.ನಗರ, ಕೊಪ್ಪಲೂರು, ಗೆಜ್ಜಗಳ್ಳಿ ಸೇರಿದಂತೆ ರಿಂಗ್‌ ರಸ್ತೆಯ ಇಕ್ಕೆಲಗಳಲ್ಲಿ ದಶಕದಿಂದೀಚೆಗೆ ನಿರ್ಮಾಣಗೊಂಡ ಬಡಾವಣೆಗಳ ಮಲಿನ ನೀರು ರಾಜಕಾಲುವೆ, ಚರಂಡಿಗಳ ಮೂಲಕ ನೇರವಾಗಿ ದಳವಾಯಿ ಕೆರೆ ತಲುಪುತ್ತಿದೆ. ಇಲ್ಲಿನ ನೀರೇ ಶೆಟ್ಟಿಹಳ್ಳಿ ಕೆರೆ, ಮಂಡಕಳ್ಳಿಯ ಬಳಿಯಿರುವ ಕೆರೆ ಸೇರಿ ಕೊನೆಗೆ ಕಬಿನಿ ನದಿಯನ್ನೂ ತಲುಪುತ್ತದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ–ಅಂಶದ ಪ್ರಕಾರ ದಳವಾಯಿ ಕೆರೆ ನೀರು ಮೀನುಗಾರಿಕೆಗೂ ಯೋಗ್ಯವಾಗಿಲ್ಲ. ಇದು ಅತ್ಯಂತ ಕಳಪೆ ದರ್ಜೆಗೆ (ಇ) ಸೇರುತ್ತದೆ. ಕೆರೆಯ ಅಚ್ಚುಕಟ್ಟು ಗ್ರಾಮಗಳಾದ ಹೊಸಹುಂಡಿ, ಮಾದನಹಳ್ಳಿ, ಮರಸೆ, ನಾಯಕನಹುಂಡಿಯಲ್ಲಿ ಮಲಿನ ನೀರಿನಲ್ಲೇ ಹಸುಗಳ ಮೇವಿನ ಹುಲ್ಲು, ಭತ್ತ, ಸೊಪ್ಪು, ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇದೇ ತರಕಾರಿ– ಸೊಪ್ಪನ್ನು ಮಾರುಕಟ್ಟೆಯಲ್ಲಿ ಮೈಸೂರಿಗರೇ ಖರೀದಿಸುತ್ತಾರೆ!

ಕೆರೆಯ ಮಧ್ಯದಲ್ಲಿ ಶುಂಠಿ ಹುಲ್ಲು ಬೆಳೆಯುತ್ತಿದ್ದು, ಅದು ಹಸುಗಳ ಮೇವು. ಬಂಡಿಪಾಳ್ಯ, ಗೆಜ್ಜಗಳ್ಳಿ ಸುತ್ತಮುತ್ತಲ ಗ್ರಾಮಗಳ ಹೈನುಸಾಕಣೆದಾರರು ತೆಪ್ಪಗಳಲ್ಲಿ ಈ ಹುಲ್ಲನ್ನು ನಿತ್ಯ ಕೊಯ್ದು ಸಾಗಿಸುತ್ತಾರೆ.

‘ಕೆರೆಯ ಮಲಿನಗೊಂಡ ನೀರಿನಿಂದಾಗಿ ಸೊಳ್ಳೆ ಕಾಟ ವಿಪರೀತವಾಗಿದೆ.ಗಾಳಿ ಬೀಸಿದಾಗೆಲ್ಲ ಜೇನುನೊಣಗಳಂತೆ ಸೊಳ್ಳೆಗಳು ಹಳ್ಳಿಯನ್ನು ಮುತ್ತುತ್ತವೆ’ ಎಂದು ಕೊಪ್ಪಲೂರಿನ ನಿವಾಸಿ ಶ್ರೀಕಂಠ ಹೇಳಿದರು.

ಹೊಸ ಬಡಾವಣೆಗಳಕಟ್ಟಡ ತ್ಯಾಜ್ಯವನ್ನು ಕೆರೆಗೆ ಹೊಂದಿಕೊಂಡಿರುವ ರಸ್ತೆ, ಏರಿ ಬದಿಯಲ್ಲೇ ಸುರಿಯಲಾಗುತ್ತಿದೆ. ಅದಕ್ಕೆ ಶಾಶ್ವತ ಪರಿಹಾರವನ್ನು ಇದುವರೆಗೂ ರೂಪಿಸಿಲ್ಲ. ಅದರೊಂದಿಗೆ ಪ್ಲಾಸ್ಟಿಕ್‌ ಕವರ್‌ಗಳು, ಮದ್ಯದ ಬಾಟಲಿಗಳು, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಒಳಗೊಂಡ ಕಸವು ಕೆರೆಯಂಚನ್ನು ಮುತ್ತುತ್ತಿವೆ. ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕೊಂಡಿದ್ದಾರೆ ಎಂಬುದು ನಿವಾಸಿಗಳ ಆಕ್ಷೇಪ.

‘ಯೋಜನೆ ರೂಪಿಸಿ’: ‘ನಗರಗಳ ಕೆರೆಯ ರಕ್ಷಣೆಗೆ ಯಾವುದೇ ಯೋಜನೆಯನ್ನು ಕ್ರಮಬದ್ಧವಾಗಿ ರೂಪಿಸುತ್ತಿಲ್ಲ. ಕೆರೆ ಕೇಂದ್ರಿತವಾಗಿ ಸುಸ್ಥಿರ ನಗರ ಯೋಜನೆಯನ್ನು ಸಿದ್ಧಪಡಿಸಬೇಕು. ಕಟ್ಟಡ ತ್ಯಾಜ್ಯ ವಿಲೇವಾರಿ ಸ್ಥಳವನ್ನು ನಿಗದಿ ಮಾಡಬೇಕು. ಚರಂಡಿ ನೀರನ್ನು ಸಂಸ್ಕರಿಸಬೇಕು. ಇಲ್ಲದಿದ್ದರೆ ಮೈಸೂರಿನ ಕೆರೆಗಳಿಗೆ ಭವಿಷ್ಯ ಇರದು. 30 ವರ್ಷದ ಹಿಂದೆಯೇ ವ್ಯವಸ್ಥಿತ ಯೋಜನೆ ರೂಪಿಸಿದ್ದರೆ ದಳವಾಯಿ ಕೆರೆ ಸೇರಿದಂತೆ ಹಲವು ಐತಿಹಾಸಿಕ ಕೆರೆಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದಿತ್ತು’ ಎಂದು ಪರಿಸರವಾದಿ ಭಾನುಮೋಹನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT