ದೀಪಗಳ ಕೆಳಗೆ ಕತ್ತಲು...

7

ದೀಪಗಳ ಕೆಳಗೆ ಕತ್ತಲು...

Published:
Updated:
Deccan Herald

ದಸರೆ ಪ್ರಯುಕ್ತ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿರುವ ಅರಮನೆ ನಗರಿ ಜಗಮಗಿಸುತ್ತಿದೆ. ಪಾರಂಪರಿಕ ಕಟ್ಟಡಗಳು, ವಿವಿಧ ವೃತ್ತಗಳು ಪ್ರಜ್ವಲಿಸುತ್ತಿವೆ. ಆದರೆ, ಕೆಲ ಪಾರಂಪರಿಕ ಕಟ್ಟಡಗಳ ಪರಿಸ್ಥಿತಿ ದೀಪದ ಕೆಳಗಿನ ಕತ್ತಲಿನಂತೆ. ಐತಿಹಾಸಿಕ ಮಹತ್ವ ಸಾರುವ ಹಲವಾರು ಕಟ್ಟಡಗಳು ನಿರ್ವಹಣೆಯಿಂದ ಬಳಲುತ್ತಿವೆ. ಕೆಲ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಗಿಡಗಳು ಬೆಳೆದಿದ್ದರೂ, ಪಾಚಿಕಟ್ಟಿದ್ದರೂ, ಬಿರುಕು ಬಿಟ್ಟಿದ್ದರೂ ಗಮನಿಸುವವರೇ ಇಲ್ಲವಾಗಿದೆ..!

ಅದಕ್ಕೆ ಸಾಕ್ಷಿ ಸರ್ಕಾರಿ ಅತಿಥಿ ಗೃಹ. ಈ ಅತಿಥಿ ಗೃಹದ ಸ್ವಾಗತ ಕಮಾನು ವಿರೂಪಗೊಳ್ಳುತ್ತಿದೆ. ಗಿಡಗಳು ಬೆಳೆದು ಈ ದ್ವಾರವನ್ನು ಶಿಥಿಲಗೊಳಿಸುತ್ತಿವೆ. ದ್ವಾರದ ಮೇಲೆ ಕೆತ್ತಿದ್ದ ಕಲಾಕೃತಿಗಳು ಮಾಸುತ್ತಿವೆ. ಜಗನ್ಮೋಹನ ಅರಮನೆಯದ್ದೂ ಅದೇ ಕಥೆ. ರಾಜವಂಶಸ್ಥರು ವಸ್ತುಸಂಗ್ರಹಾಲಯವನ್ನು ನವೀಕರಣಗೊಳಿಸುತ್ತಿದ್ದಾರೆ. ಆದರೆ, ಸಭಾಂಗಣದ ಮಹಡಿ ಪಾಚಿ ಕಟ್ಟಿದ್ದು ಯಾರೂ ಅತ್ತ ಗಮನಿಸುತ್ತಿಲ್ಲ. ಇನ್ನು ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಕಟ್ಟಡಗಳ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬನ್ನೂರು ರಸ್ತೆಯಲ್ಲಿರುವ ತೂಗುದೀಪ ವೃತ್ತದಲ್ಲಿರುವ ಕಟ್ಟಡದ್ದೂ ಇದೇ ಕಥೆ. ನಿರ್ವಹಣೆ ಕೊರತೆಯಿಂದ ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಅದೆಲ್ಲಾ ಬದಿಗಿರಲಿ, ಮಹಾನಗರ ಪಾಲಿಕೆ ಕಟ್ಟಡವೇ ಕೆಲವೆಡೆ ಪಾಚಿಗಟ್ಟಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 200ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಇವೆ. ರಾಜ್ಯ ಸರ್ಕಾರವು ಮೈಸೂರು ನಗರವನ್ನು ಪಾರಂಪರಿಕ ನಗರವೆಂದು ಘೋಷಿಸಿದೆ. 201 ಕಟ್ಟಡಗಳಲ್ಲಿ 52 ಕಟ್ಟಡಗಳು ರಾಜ್ಯ ಸರ್ಕಾರದ ವಶದಲ್ಲಿಯೂ, 13 ಕಟ್ಟಡಗಳು ಕೇಂದ್ರ ಸರ್ಕಾರದ ವಶದಲ್ಲಿಯೂ, 16 ಕಟ್ಟಡಗಳು ಮೈಸೂರು ಮಹಾನಗರ ಪಾಲಿಕೆ ವಶದಲ್ಲಿಯೂ, 9 ಕಟ್ಟಡಗಳು ಮೈಸೂರು ವಿಶ್ವವಿದ್ಯಾನಿಲಯದ ವಶದಲ್ಲಿಯೂ, 111 ಕಟ್ಟಡಗಳು ಖಾಸಗಿ ವ್ಯಕ್ತಿಗಳ ಸುಪರ್ದಿಯಲ್ಲಿಯೂ ಇವೆ.

‘ಪಾರಂಪರಿಕ ಕಟ್ಟಡಗಳನ್ನು ಸಮಿತಿಯ ಗಮನಕ್ಕೆ ತಾರದೆ ನೆಲಸಮ ಮಾಡುತ್ತಿರುವುದು ಪರಂಪರೆಗೆ ಧಕ್ಕೆ ಉಂಟಾಗುತ್ತಿದೆ. ಪರಂಪರೆ ನಾಶವಾಗುವುದರಿಂದ ಮುಂದಿನ ಪೀಳಿಗೆಗೆ ಮೈಸೂರಿನ ಭವ್ಯ ಪರಂಪರೆ ತಿಳಿಸುವುದು ಕಷ್ಟ’ ಎನ್ನುತ್ತಾರೆ ಇತಿಹಾಸ ತಜ್ಞರು.

ಈ ಹಿಂದೆ ಕೇಂದ್ರ ಸರಕಾರದ ಜೆಎನ್-ನರ್ಮ್‌ ಯೋಜನೆಯಲ್ಲಿ ಪರಂಪರೆ ಸಂರಕ್ಷಣೆಗೆ ಹಣವೂ ಬಂದಿತ್ತು. ಆದರೆ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಈ ಹಣ ಬಳಕೆ ಆದಂತಿಲ್ಲ. ಹೆರಿಟೇಜ್‌ ಬಿಲ್ಡಿಂಗ್‌ಗಳ ಸಂರಕ್ಷಣೆಗೆ ಒತ್ತು ನೀಡಿರುವುದು ಎಲ್ಲೂ ಕಾಣಿಸುತ್ತಿಲ್ಲ. ಈಗ ದಸರೆಯ ನೆಪದಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ನಡೆಯುತ್ತಿವೆ. ಪಾರಂಪರಿಕ ನಡಿಗೆ, ಪಾರಂಪರಿಕ ಸೈಕಲ್‌ ಎಂದೆಲ್ಲಾ ಅದಕ್ಕೆ ಹೆಸರಿಡಲಾಗಿದೆ. ಪರಿಣತರಿಂದ ಈ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ. ವಿಪರ್ಯಾಸ ಎಂದರೆ ದಸರೆ ಬಂದಾಗ ಮಾತ್ರ ಪಾರಂಪರಿಕ ಕಟ್ಟಡಗಳ ನೆನಪಾಗುತ್ತದೆ. ಮುಗಿದ ಮೇಲೆ ಅದೇ ರಾಗ, ಅದೇ ಹಾಡು.

ಅಗ್ರಹಾರದ ಚಿಕ್ಕಮಾರುಕಟ್ಟೆಯೂ ಶಿಥಿಲಗೊಂಡಿದೆ. ಕಟ್ಟಡದ ಮೇಲೆ ಕಸದ ರಾಶಿಯೇ ಇದೆ. ನಗರದ ಹೃದಯ ಭಾಗದಲ್ಲಿರುವ ಕಾಡಾ ಕಚೇರಿಯು ನಿರ್ವಹಣೆ ಕೊರತೆಯಿಂದ ಸೊರಗುತ್ತಿದ್ದು, ಅಲ್ಲಲ್ಲಿ ಪಾಚಿಗಟ್ಟಿದೆ. ತೇವಾಂಶ ಹೆಚ್ಚಾದ ಪರಿಣಾಮ ಗೋಡೆಗಳು ಬಿರುಕುಬಿಟ್ಟಿವೆ. ಕಟ್ಟಡದ ಹಿಂಭಾಗದ ಗೋಡೆಯನ್ನು ಮೂತ್ರ ವಿಸರ್ಜನೆಯ ತಾಣವಾಗಿಸಿಕೊಂಡಿದ್ದಾರೆ. ಜಯಲಕ್ಷ್ಮಿ ವಿಲಾಸ ಅರಮನೆಯ ಅಂದ ಮಾಸಿದ್ದು, ಸೌಂದರ್ಯ ಕಳೆದುಕೊಂಡಿದೆ. ಮೈಸೂರಿನ ಅನೇಕ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಬಗ್ಗೆ ಗಮನ ಹರಿಸಬೇಕಿದೆ. ಅದಕ್ಕಾಗಿ ಪಾರಂಪರಿಕ ಸಮಿತಿ ಕೂಡ ಇದೆ. ಈ ಪಾರಂಪರಿಕ ಶೈಲಿಯ ಕಟ್ಟಡಗಳನ್ನು ಸಂರಕ್ಷಿಸಿ ಜೋಪಾನ ಮಾಡುವುದು ಮೈಸೂರಿನ ಜನತೆಯ ಜವಾಬ್ದಾರಿ ಕೂಡ.

ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯನ್ನೇ ಈಗ ಬೇರೆಡೆಗೆ ಸ್ಥಳಾಂತರಿಸಲು ಹುನ್ನಾರ ನಡೆಯುತ್ತಿದೆ. ಈ ಇಲಾಖೆ ಏನು ಕೆಲಸ ಮಾಡುತ್ತಿದೆ ಎಂಬುದೇ ಹೆಚ್ಚಿನವರಿಗೆ ಗೊತ್ತಿಲ್ಲ. ಅಲ್ಲದೇ, ಈ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ತರುವ ಮಾತುಗಳು ಕೇಳಿಬರುತ್ತಿವೆ.

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳು ವಿಭಿನ್ನವಾಗಿದ್ದು ವಿಶಿಷ್ಟ ಶೈಲಿಯಲ್ಲಿವೆ. ರಾಜ್ಯದಲ್ಲಿ ಬೇರೆಡೆ ದೇವಾಲಯ, ಕೋಟೆಗಳಿದ್ದರೂ ಇಂಡೋ ಸಾರ್ಸನಿಕ್‌ ಶೈಲಿಯ ಇಂಥ ಕಟ್ಟಡಗಳು ಬೇರೆಡೆ ಕಾಣಸಿಗುವುದು ಅಪರೂಪ. ಅವುಗಳನ್ನು ಅಭಿವೃದ್ಧಿಪಡಿಸಿ ಆಕರ್ಷಣೀಯ ತಾಣಗಳಾಗುವಂತೆ ಮಾಡಬೇಕಿದೆ. ನೂರು ವರ್ಷ ಪೂರೈಸಿರುವ ಕಟ್ಟಡಗಳನ್ನು ಇನ್ನೂ ನೂರು ವರ್ಷ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !