ಮಕ್ಕಳ ದಸರಾ: ವೇಷಭೂಷಣ, ಗಾಯನ ರಂಜನೆ, ಐಶ್ವರ್ಯ– ಸೃಜನ್‌ ಪಟೇಲ್‌ ನೃತ್ಯ ಮೋಡಿ

7
ಡಾನ್ಸ್‌ ಕರ್ನಾಟಕ ಡಾನ್ಸ್‌ ಖ್ಯಾತಿಯ ಕಲಾವಿದರಿಂದ ನೃತ್ಯ

ಮಕ್ಕಳ ದಸರಾ: ವೇಷಭೂಷಣ, ಗಾಯನ ರಂಜನೆ, ಐಶ್ವರ್ಯ– ಸೃಜನ್‌ ಪಟೇಲ್‌ ನೃತ್ಯ ಮೋಡಿ

Published:
Updated:
Deccan Herald

ಮೈಸೂರು: ಬಗೆ ಬಗೆ ಹೂಗಳ ನ್ನಿಟ್ಟಿಕೊಂಡು ಹೂದಾನಿಯೊಂದು ವೇದಿಕೆಗೆ ನಡೆದುಬಂದುದನ್ನು ಕಂಡು ಪ್ರೇಕ್ಷಕರು ಅಚ್ಚರಿಗೊಂಡರು. ನ್ಯೂಸ್‌ ಪೇಪರ್‌ನ ಹೂಗಳಿಂದ ಮಾಡಿದ ಗೌನ್‌, ಕಿರೀಟ ಧರಿಸಿದ ಸುಂದರಿಯ ಬಿನ್ನಾಣಕ್ಕೆ ಚಪ್ಪಾಳೆಗಳ ಸುರಿಮಳೆಯಾಯಿತು.

ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಮಕ್ಕಳ ದಸರಾದಲ್ಲಿ ಮಕ್ಕಳು ವಿವಿಧ ವೇಷಭೂಷಣ ಧರಿಸಿ ಮಿಂಚಿದರು.

ಗೌತಮ ಬುದ್ಧ ವೇಷಧಾರಿ ಧ್ಯಾನ ಮಾಡಿದರೆ, ಮಹಿಷಾಸುರ ಮರ್ದಿನಿ ರೋಷಾವೇಷ ತೋರಿದಳು. ಪೋರಿಯೊಬ್ಬಳು ಮ್ಯಾಜಿಕ್‌ ಸ್ಟಿಕ್‌ ಹಿಡಿದು ಮೋಡಿ ಮಾಡಿದಳು. ನೀರಿನ ಹನಿಯ ರೂಪ ಧರಿಸಿ ಬಂದ ಪೋರನೊಬ್ಬ ‘ನೀರು ಉಳಿಸಿ ಜೀವ ಉಳಿಸಿ’ ಎಂಬ ಸಂದೇಶವುಳ್ಳ ಭಿತ್ತಿಪತ್ರ ಹಿಡಿದು ಗಮನ ಸೆಳೆದ.

ಡಾನ್ಸ್‌ ಕರ್ನಾಟಕ ಡಾನ್ಸ್‌ ಖ್ಯಾತಿಯ ಐಶ್ವರ್ಯ ಹಾಗೂ ಸೃಜನ್‌ ಪಟೇಲ್‌ ‘ಓ ಬೇಬಿ ಒನ್ಸ್‌ ಅಗೇನ್‌... ಹಾಡಿಗೆ ಹೆಜ್ಜೆ ಹಾಕಿದ್ದು ಸಭಾಂಗಣದಲ್ಲಿ ಸಂಚಲನ ಮೂಡಿಸಿತು. ವಿಶೇಷ ಮಕ್ಕಳ ಶಾಲೆಯ ವಿದ್ಯಾರ್ಥಿಗಳ ನೃತ್ಯ ರಂಜಿಸಿತು.

ಎಲ್ಲೆಲ್ಲೂ ಮಕ್ಕಳ ಕಲರವ ಕಂಡು ಬಂತು. ಆರಂಭದಲ್ಲಿ ರಾಮಕೃಷ್ಣನಗರದ ಲಲಿತ ಸಂಗೀತ ಶಾಲೆಯ ಮಕ್ಕಳು ಪ್ರಸ್ತುತ ಪಡಿಸಿದ ಸುಗಮ ಸಂಗೀತ ಕಾರ್ಯಕ್ರಮ ಮಕ್ಕಳ ದಸರೆಗೆ ಅರ್ಥಪೂರ್ಣ ಆರಂಭ ನೀಡಿತು. ವಿಜ್ಞಾನ ವಸ್ತು ಪ್ರದರ್ಶನ, ಚಿತ್ರಕಲಾ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. 

ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ: ಕಲುಷಿತ ನೀರನ್ನು ಕೃಷಿಗೆ ಬಳಸುವ ವಿಧಾನದ ಮಾದರಿಯನ್ನು ಪ್ರದರ್ಶಿಸಿದ ವಿದ್ಯಾರ್ಥಿನಿ ಜೆ.ನಿರ್ಮಿತಾ, ಈ ಮಾದರಿಯನ್ನು ಬೆಂಗಳೂರಿನ ಕೋರಮಂಗಲದಲ್ಲಿ ಹಾಗೂ ನೆಸ್ಲೆ ಕಂಪನಿಯಲ್ಲಿ ಬಳಸಲಾಗುತ್ತಿದೆ ಎಂದು ವಿವರಿಸಿದರು. ಬೋರ್‌ವೆಲ್‌ನಿಂದ ನೀರು ಪಂಪ್‌ ಮಾಡುವಾಗ ಪೋಲಾಗುವ ನೀರನ್ನು ಉಳಿಸುವುದಕ್ಕೆ ವಿಧಾನವೊಂದನ್ನು ಹರಳಹಳ್ಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ ಪಟ್ಟಾಭಿರಾಮಚಂದ್ರ ಅವರು ಪ್ರದರ್ಶನಕ್ಕಿಟ್ಟಿದ್ದರು.

ಅಗಸ್ತ್ಯ ಫೌಂಡೇಶನ್‌ ವತಿಯಿಂದ ವಿಜ್ಞಾನದ ಹಲವು ಸಿದ್ಧ ಮಾದರಿಗಳನ್ನು ಇಡಲಾಗಿತ್ತು. ಕುಂಬಾರಕೊಪ್ಪಲು ಸುತ್ತಲಿನ ಸರ್ಕಾರಿ ಶಾಲೆಯ 14 ವಿದ್ಯಾರ್ಥಿಗಳು ಈ ಮಾದರಿಗಳ ಬಗ್ಗೆ ವಿವರಿಸಿದರು. ಉಷ್ಣಕ್ಷೇಪಕ ಕ್ರಿಯೆ, ರಾಸಾಯನಿಕ ದ್ವಿಸ್ಥಾನ ಪಲ್ಲಟ, ಆಳ ದೃಷ್ಟಿ, ದೃಷ್ಟಿ ಚಲನೆ, ನ್ಯೂಟ್ರಾನ್‌ ತೊಟ್ಟಿಲು, ಬಹು ಪ್ರತಿಫಲನ, ಡೀಪ್‌ ವೆಲ್‌, ಪಾಕ್ಷ ಸ್ಥಾನ ಪಲ್ಲಟ, ಮಾನವನ ಅಂಗಗಳ ಪರಿಚಯ, ದ್ವಿತಿ ಪೆಟ್ಟಿಗೆ ಹೀಗೆ ಹಲವು ಮಾದರಿಗಳು ಮಕ್ಕಳ ಜ್ಞಾನ ವರ್ಧನೆಗೆ ಸಹಾಯಕವಾಗುವಂತಿದ್ದವು.

ವಿವಿಧ ತಾಲ್ಲೂಕುಗಳ ಕಸ್ತೂರಬಾ ಗಾಂಧಿ ವಸತಿ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ಕರಕುಶಲ ವಸ್ತುಗಳು ಜನರನ್ನು ಆಕರ್ಷಿಸಿದವು. ಉಣ್ಣೆಯ ಚೀಲ, ಪರ್ಸ್‌, ಬಟ್ಟೆಯ ಹೂಗಳು, ವಯರ್‌ ಬುಟ್ಟಿಗಳು, ಸೀರೆಯ ಮೇಲೆ ಕಸೂತಿ, ಕುಂದಣ ರಂಗೋಲಿ, ರೇಷ್ಮೆಗೂಡಿನ ಹಾರಗಳು, ಗ್ಲಾಸ್‌ ಪೇಂಟಿಂಗ್‌ ಮಕ್ಕಳ ಪ್ರತಿಭೆಗೆ ಸಾಕ್ಷ್ಯ ಹೇಳಿದವು. ಶಾಲೆಯಿಂದ ಹೊರಗುಳಿದ ಮಕ್ಕಳು, ಸಿಂಗಲ್‌ ಪೇರೆಂಟ್‌ ಮಕ್ಕಳು ಹಾಗೂ ಶಾಲೆಯನ್ನು ಅರ್ಧದಲ್ಲೇ ಬಿಟ್ಟ ಮಕ್ಕಳು ಇಲ್ಲಿ ಕಲಿಯುತ್ತಿರುವುದು ವಿಶೇಷ.

ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯೂ ನಡೆಯಿತು. ಡೈಸಿ ಕಾನ್ವೆಂಟ್‌ ಶಾಲೆಯ ಮಕ್ಕಳು ‘ಪ್ರೀತಿಯ ಕಾಳು’ ಕಿರು ನಾಟಕವನ್ನು ಪ್ರದರ್ಶಿಸಿದರು. ಮಧ್ಯಾಹ್ನ ಸುದರ್ಶನ್‌ ಜಾದೂಗಾರ್‌ ಜಾದು ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !