ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್: ಚಂದನ್‌ ಶೆಟ್ಟಿಗೆ ಪೊಲೀಸ್‌ ನೋಟಿಸ್‌

ಶೆಟ್ಟಿ–ನಿವೇದಿತ ವಿರುದ್ಧ ದೂರು
Last Updated 6 ಅಕ್ಟೋಬರ್ 2019, 2:32 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನಲ್ಲಿ ಶುಕ್ರವಾರ ರಾತ್ರಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಗಾಯಕ ಚಂದನ್‌ ಶೆಟ್ಟಿ, ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾ ಗೌಡ ಅವರಲ್ಲಿ ಪ್ರೇಮ ನಿವೇದನೆ ಮಾಡಿ ವೇದಿಕೆ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಪೊಲೀಸರು ಕಾರಣ ಕೇಳಿ ನೋಟಿಸ್‌ ಜಾರಿಮಾಡಿದ್ದಾರೆ.

ಅಲ್ಲದೆ, ಚಂದನ್‌ಶೆಟ್ಟಿ ಮತ್ತು ನಿವೇದಿತಾ ಗೌಡ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ 4 ದೂರುಗಳು ದಾಖಲಾಗಿವೆ.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮೋಸಿನ್‌ಖಾನ್, ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು, ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಹಾಗೂ ಕರ್ನಾಟಕ ಪ್ರಜಾ ಪಾರ್ಟಿಯ ಸದಸ್ಯರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮದಲ್ಲಿ, ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವೈಯಕ್ತಿಕ, ಖಾಸಗಿ ಬದುಕಿನ ವಿಚಾರಗಳಿಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ದಸರಾ ಸಮಿತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ, ರಾತ್ರಿ 10.30ಕ್ಕೆ ಮುಗಿಯಬೇಕಾಗಿದ್ದ ಕಾರ್ಯಕ್ರಮ ಮಧ್ಯರಾತ್ರಿ 12ರವರೆಗೂ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದನ್‌ ಶೆಟ್ಟಿ, ‘ಸಂಘಟಕರ ಅನುಮತಿ ಪಡೆದಿರಲಿಲ್ಲ. ಕೇವಲ 5 ನಿಮಿಷ ತೆಗೆದುಕೊಂಡಿದ್ದೇವೆ. ವೇದಿಕೆ ದುರುಪಯೋಗ ಆಗಿದ್ದರೆ ಸರ್ಕಾರದ ಕ್ಷಮೆ ಯಾಚಿಸುತ್ತೇನೆ‍. ಶಿಷ್ಟಾಚಾರ ಗೊತ್ತಿರಲಿಲ್ಲ’ ಎಂದರು.

‘ಖುಷಿಯನ್ನು ಹಂಚಿಕೊಂಡಿದ್ದೇವೆ ಅಷ್ಟೆ. ವೇದಿಕೆಯಲ್ಲಿ ಮದುವೆ ಆಗಿದ್ದರೆ ತಪ್ಪು ಎನ್ನಬಹುದಿತ್ತು’ ಎಂದು ನಿವೇದಿತಾ ಪ್ರಕ್ರಿಯಿಸಿದ್ದಾರೆ.

ಸಂಗೀತ ಕಾರ್ಯಕ್ರಮ ನೀಡಲು ರ‍್ಯಾಪರ್‌ ಚಂದನ್‌ ಅವರನ್ನು ಆಹ್ವಾನಿಸಲಾಗಿತ್ತು. ಮೈಸೂರಿನವರೇ ಆದ ನಿವೇದಿತಾ ಅವರಿಗೆ ಅಧಿಕೃತ ಆಹ್ವಾನ ಇರಲಿಲ್ಲ. ಕಾರ್ಯಕ್ರಮದ ಕೊನೆಗೆ ನಿವೇದಿತಾ ಅವರನ್ನು ವೇದಿಕೆಗೆ ಕರೆಯಿಸಿದ ಚಂದನ್‌, ‘ನನ್ನ ಮದುವೆ ಆಗುತ್ತೀಯಾ?’ ಎನ್ನುತ್ತಾ ಉಂಗುರ ತೊಡಿಸಿ ಅಪ್ಪಿಕೊಂಡಿದ್ದಾರೆ. ಆಗ ಹೂದಳಗಳನ್ನು ಸುರಿಯಲಾಗಿದೆ.

‘ಹೇಗಿತ್ತು ನನ್ನ ಪ‍್ರಪೋಸಲ್‌’ ಎಂದು ಚಂದನ್‌ ಕೇಳುತ್ತಾರೆ. ಅದಕ್ಕೆ ನಿವೇದಿತಾ, ‘ಫುಲ್‌ ಶಾಕ್‌ ಆಗ್ತಿದೆ. ಲವ್‌ ಯೂ ಸೋ ಮಚ್‌’ ಎನ್ನುತ್ತಾರೆ.

6 ತಿಂಗಳಲ್ಲಿ ಚಾಮುಂಡೇಶ್ವರಿಯಿಂದ ಶಿಕ್ಷೆ: ‘ನಾಡಹಬ್ಬದ ವೇದಿಕೆಯಲ್ಲಿ ಇಂಥ ಘಟನೆ ನಡೆಯಬಾರದಿತ್ತು. ಇದು ಅಕ್ಷಮ್ಯ. ತಪ್ಪೆಸಗಿರುವ ಇವರಿಬ್ಬರಿಗೆ ಆರು ತಿಂಗಳಲ್ಲಿ ಚಾಮುಂಡೇಶ್ವರಿ ಶಿಕ್ಷೆ ನೀಡುತ್ತಾಳೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

4 ದೂರು ದಾಖಲು: ಗಾಯಕ ಚಂದನ್‌ಶೆಟ್ಟಿ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾ ಗೌಡ ವಿರುದ್ಧ ಇಲ್ಲಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ 4 ದೂರುಗಳು ದಾಖಲಾಗಿವೆ.

ಸರ್ಕಾರಿ ವೇದಿಕೆ ದುರ್ಬಳಕೆ, ವೇದಿಕೆಗೆ ಅತಿಕ್ರಮ ಪ್ರವೇಶ, ಸಂಚು ರೂಪಿಸಿ ಪ್ರಚಾರ ಪಡೆಯುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮೋಸಿನ್‌ಖಾನ್, ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು, ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಹಾಗೂ ಕರ್ನಾಟಕ ಪ್ರಜಾ ಪಾರ್ಟಿಯ ಸದಸ್ಯರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

* ವೇದಿಕೆ ದುರ್ಬಳಕೆ ಆಗಿರುವುದು ನಿಜ. ಚಂದನ್‌ ಶೆಟ್ಟಿ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೋಟಿಸ್‌ ನೀಡಿದ್ದಾರೆ

-ಅಭಿರಾಂ ಜಿ.ಶಂಕರ್‌, ಜಿಲ್ಲಾಧಿಕಾರಿ, ದಸರಾ ವಿಶೇಷಾಧಿಕಾರಿ

* ಸಾರ್ವಜನಿಕವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಅದರಲ್ಲಿ ತಪ್ಪೇನಿದೆ? ಇದರಿಂದ ಮೈಸೂರಿನ ಘನತೆಯೇನೂ ಕುಗ್ಗುವುದಿಲ್ಲ

-ಪ್ರತಾಪಸಿಂಹ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT