ಶುಕ್ರವಾರ, ಅಕ್ಟೋಬರ್ 18, 2019
20 °C
ಗಾದಿ, ನಮ್ದಾ ತಯಾರಿಕೆಯಲ್ಲಿ ತೊಡಗಿರುವ ಪಾಷಾ, ಜಕಾವುಲ್ಲಾ

ಧಾರ್ಮಿಕ ಸೌಹಾರ್ದ ಸಾರುವ ದಸರಾ

Published:
Updated:

ಮೈಸೂರು ದಸರಾ ಮಹೋತ್ಸವ ಐತಿಹಾಸಿಕ ಹಾಗೂ ವಿಶಿಷ್ಟ ಆಚರಣೆಗಳಿಂದಷ್ಟೇ ಪ್ರಸಿದ್ಧಿ ಪಡೆಯದೆ, ಭಾವೈಕ್ಯದ ನೆಲೆಯಲ್ಲೂ ಮಹತ್ವವೆನಿಸುತ್ತದೆ. ದಸರೆಯ ಪ್ರಮುಖ ಕೇಂದ್ರಬಿಂದುವಾದ ಜಂಬೂಸವಾರಿಯ ಸಿದ್ಧತೆಯಲ್ಲಿ ಮುಸ್ಲಿಂ ಸಮುದಾಯದವರ ಪಾತ್ರವೂ ಗಮನಾರ್ಹ.

ಸರ್ವಾಲಂಕಾರಗೊಂಡು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಾ ಸಾಗುವ ಆನೆ, ಅದನ್ನು ಹಿಂಬಾಲಿಸುವ ಇತರ ಗಜಪಡೆ ಸಾಗುವುದು ನಯನಮನೋಹರ. ಇಂಥ ಅಂಬಾರಿಯನ್ನು ಆನೆ ಮೇಲೆ ಇಡಲು ಅಗತ್ಯವಿರುವ ವಸ್ತುಗಳ ತಯಾರಿಕೆ ಹಾಗೂ ಜೋಡಿಸುವ ಪ್ರಕ್ರಿಯೆಯನ್ನು ಮುಸ್ಲಿಂ ಸಮುದಾಯದವರೇ ನೋಡಿಕೊಳ್ಳುತ್ತಾರೆ ಎಂಬುದು ವಿಶೇಷ.

ಅಂಬಾರಿಯನ್ನು ಆನೆ ಮೇಲೆ ಇಡುವುದಕ್ಕೂ ಮುನ್ನ ನಮ್ದಾ, ಗಾದಿ, ಚಾಪು (ಹಾಸಿಗೆ), ಜೂಲಾ (ಆಲಂಕಾರಿಕ ಬಟ್ಟೆ) ಹಾಕುತ್ತಾರೆ. ನಮ್ದಾ (ಗಾದಿ ಅಳತೆಯ ಹಾಸಿಗೆ) ಆನೆ ಮೇಲೆ ಹೊದಿಸಿ ಗಾದಿಯನ್ನು ಇಟ್ಟು ಬಿಗಿಯಾಗಿ ಕಟ್ಟಬೇಕು. ಅದರ ಮೇಲೆ ಚಾಪು ಹಾಗೂ ಜೂಲಾವನ್ನು ಹೊದಿಸಲಾಗುತ್ತದೆ. ಆನಂತರ, ಅಂಬಾರಿಯನ್ನು ಇಟ್ಟು ಬಿಗಿಯಾಗಿ ಕಟ್ಟಲಾಗುತ್ತದೆ. ಇದಕ್ಕೆ ಅನುಭವಿ ಪರಿಣತರೇ ಇರಬೇಕು.

ಗಾದಿ ತಯಾರಿಕೆ: ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ, ಸರಳಾ ಆನೆ ಮಾವುತರಾಗಿ ನಿವೃತ್ತಿ ಹೊಂದಿರುವ ಪಾಷಾ, ಚೈತ್ರಾ ಆನೆ ಮಾವುತರಾಗಿ ನಿವೃತ್ತರಾದ ಜಕಾವುಲ್ಲಾ ಅವರು ಗಾದಿ, ನಮ್ದಾ ತಯಾರಿಕೆಯಲ್ಲಿ ತೊಡಗಿದ್ದಾರೆ. ಪಾಷಾ 12 ವರ್ಷಗಳಿಂದ ಹಾಗೂ ಜಕಾವುಲ್ಲಾ 14 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿದ್ದಾರೆ. ಪಶುವೈದ್ಯ ಡಾ.ನಾಗರಾಜ್ ಅವರ ಸಹಾಯಕರಾಗಿರುವ ಅಕ್ರಂ ಅವರು ಇವರಿಗೆ ಸಹಾಯ ಮಾಡುತ್ತಿದ್ದಾರೆ.

ಆನೆ ಮೇಲೆ 6 ಅಡಿ ಉದ್ದ, 5 ಅಡಿ ಅಗಲದ ಗಾದಿ ತಯಾರಿಸಲಾಗುತ್ತಿದೆ. ಇದರ ಮಧ್ಯಭಾಗದಲ್ಲಿ ಒಂದು ಅಡಿ ಅಳತೆಯ ಚೌಕಾಕಾರದ ರಂಧ್ರ ಮಾಡಲಾಗಿದೆ. ಆನೆಯ ಬೆನ್ನುಮೂಳೆ ಮೇಲೆ ಕೂರುವುದಕ್ಕೆ ಇದರಿಂದ ಸಾಧ್ಯ. ಈ ಗಾದಿಯನ್ನು ಜೊಂಡು ಹುಲ್ಲಿನಿಂದ ತಯಾರಿಸಲಾಗುತ್ತದೆ. ಕೆರೆಗಳಲ್ಲಿ ಬೆಳೆದಿರುವ ಜೊಂಡು ಹುಲ್ಲನ್ನು ತಂದು 4-5 ದಿನ ಒಣಗಿಸಲಾಗುತ್ತದೆ. ಆನಂತರ ಅದನ್ನು ಸುರಳಿಯಾಕಾರದಲ್ಲಿ ಸುತ್ತಿ ಗೋಣಿ ಚೀಲದಲ್ಲಿ ಹಾಕಿ ಹೊಲಿಯಲಾಗುತ್ತದೆ. ಇದರಿಂದ ಆನೆಗೆ ಮೃದುವಾದ ತಲೆದಿಂಬಿನಂತೆ ಅನುಭವ ಆಗುತ್ತದೆ. ಅಂಬಾರಿ ಅಂಚುಗಳಿಂದ ಆನೆಗೆ ಆಗುವ ಗಾಯಗಳನ್ನು ಗಾದಿಯಿಂದ ತಪ್ಪಿಸಬಹುದು.

ಆನೆಯ ಗಾತ್ರ, ಅದು ನಡೆಯುವ ರೀತಿಯನ್ನು ಗಮನಿಸಿ ಗಾದಿಯನ್ನು ಸಿದ್ಧಪಡಿಸಲಾಗುತ್ತದೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ 4 ಕಿ.ಮೀ ದೂರವನ್ನು ಸುಗಮವಾಗಿ ಕ್ರಮಿಸುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಅಕ್ರಂ ತಿಳಿಸಿದರು.

ಪ್ರತಿ ವರ್ಷ 14 ಗಾದಿಗಳ ತಯಾರಿಕೆ
‘ನಮ್ಮ ಮಾವ ಸುಲ್ತಾನ್ ಅವರು ಅರಮನೆಯ ಹಂಸರಾಜ ಎಂಬ ಪಟ್ಟದಾನೆಯ ಮಾವುತರಾಗಿದ್ದರು. ಅವರಿಂದ ಗಾದಿ ಮಾಡುವುದನ್ನು ಕಲಿತೆ. ಸುಂಕದಕಟ್ಟೆ, ಬಳ್ಳೆ ಆನೆ ಶಿಬಿರಗಳಲ್ಲಿ ಮಾವುತನಾಗಿ ಕೆಲಸ ಮಾಡಿದ್ದೆ. ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಸರಳಾ ಆನೆಗೂ ಮಾವುತನಾಗಿದ್ದೆ. ವಯಸ್ಸಾದ ಕಾರಣ ಸರಳಾ ಆನೆಯನ್ನು ಮತ್ತಿಗೋಡು ಶಿಬಿರದಲ್ಲಿ ಬಿಡಲಾಗಿದೆ’ ಎಂದು 75 ವರ್ಷದ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನೆಗಳ ತಾಲೀಮು ನಡೆಸುವ ಸಂದರ್ಭದಲ್ಲೂ ಗಾದಿಯನ್ನು ಬಳಸಲಾಗುತ್ತದೆ. ನಿರಂತರ ತಾಲೀಮಿನಿಂದಾಗಿ ಗಾದಿಯು ಹಾಳಾಗುತ್ತದೆ. ಹೀಗಾಗಿ, ಪ್ರತಿ ವರ್ಷ 14 ಗಾದಿಗಳನ್ನು ಸಿದ್ಧಪಡಿಸಬೇಕು. ಅರ್ಜುನ ಆನೆಗೆ ಇಡುವ ಗಾದಿಯು ಒಂದು ದಿನ ಮಾತ್ರ ಬಳಸುವುದರಿಂದ ಅದು ಅಷ್ಟು ಹಾಳಾಗಿರುವುದಿಲ್ಲ. ಹೀಗಾಗಿ, ಹಳೆಯ ಗಾದಿಯನ್ನೇ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ’ ಎಂದು ವಿವರಿಸಿದರು.

*
ವಿಜಯದಶಮಿ ಆಚರಣೆಯಲ್ಲಿ ನಮ್ಮ ಕುಟುಂಬ ಪಾಲ್ಗೊಳ್ಳುತ್ತಾ ಬಂದಿದೆ. ನಾವೆಲ್ಲ, ಯಾವುದೇ ಜಾತಿಭೇದವಿಲ್ಲದೆ ಒಟ್ಟಿಗೆ ಸೇರಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದೇವೆ.
-ಅಕ್ರಂ, ಪಶುವೈದ್ಯರ ಸಹಾಯಕ

Post Comments (+)