ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಹೋತ್ಸವ: ಬಹುಜನ ಸೇರುವ ಕಾರ್ಯಕ್ರಮಗಳಿಗೆ ಕತ್ತರಿ

ವಸ್ತುಪ್ರದರ್ಶನ, ಆಹಾರ ಮೇಳ, ಯುವ ದಸರೆಗೆ ಕೊಕ್ಕೆ ಸಾಧ್ಯತೆ
Last Updated 8 ಸೆಪ್ಟೆಂಬರ್ 2020, 1:46 IST
ಅಕ್ಷರ ಗಾತ್ರ

ಮೈಸೂರು: ಬಹು ಜನರು ಸೇರುವ ಆಹಾರಮೇಳ, ಯುವ ದಸರೆ, ವಸ್ತುಪ‍್ರದರ್ಶನ, ಕುಸ್ತಿ ಸೇರಿದಂತೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ಹಲವು ಕಾರ್ಯಕ್ರಮಗಳಿಗೆ ಕೊಕ್ಕೆ ಬೀಳುವ ಸಂಭವವಿದೆ.

ಅಲ್ಲದೇ, ಮಕ್ಕಳನ್ನು ಒಳಗೊಳ್ಳುವ ಮಕ್ಕಳ ದಸರೆ, ಚಿಣ್ಣರ ದಸರೆಗೂ ಕತ್ತರಿ ಬೀಳಲಿದೆ. ಕೆಲ ಕಾರ್ಯಕ್ರಮಗಳನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸುವ ವಿಚಾರವನ್ನು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ ದಸರಾ ಉನ್ನತಮಟ್ಟದ ಸಭೆ ಮುಂದೆ ಮಂಡಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಜಂಬೂಸವಾರಿ ನಡೆಸುವ ವಿಚಾರ ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಆಗಲಿದೆ. ಅರಮನೆಯಿಂದ ಬನ್ನಿಮಂಟಪದವರೆಗಿನ ಜಂಬೂಸವಾರಿ ಬದಲು ಅರಮನೆ ಆವರಣದೊಳಗೆ ಸರಳವಾಗಿ ಮೆರವಣಿಗೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುವುದಾಗಿ ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳಿದ್ದಾರೆ.

‘ಕೋವಿಡ್‌ ಕಾರಣ ಕೆಲವೊಂದು ಕಾರ್ಯಕ್ರಮ ಆಯೋಜನೆ ಸವಾಲಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಸಭೆ ಆಯೋಜಿಸಿ, ಇಲಾಖೆವಾರು ಮಾಹಿತಿ ಪಡೆದಿದ್ದಾರೆ. ನಾನು ಕೂಡ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಉನ್ನತಮಟ್ಟದ ಸಭೆಯಲ್ಲಿ ದಸರೆ ರೂಪುರೇಷೆ ಬಗ್ಗೆ ವರದಿ ಮಂಡಿಸಲಾಗುವುದು. ದಸರೆ ಆಚರಣೆ ಸ್ವರೂಪದ ಮೇಲೆ ಅನುದಾನ ಕೇಳಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ನೋಡಿಕೊಂಡು ಕೆಲ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ನಡೆಸಿದೆ.

ಐದು ಆನೆ: ಜಂಬೂಸವಾರಿ ನಡೆಯದಿದ್ದರೆ ಕೇವಲ ಐದು ಆನೆಗಳನ್ನು ಮಾತ್ರ ಕರೆತರಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.

‘ಕಳೆದ ಬಾರಿ 12 ಆನೆಗಳು ಬಂದಿದ್ದವು. ಜೊತೆಗೆ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರು ಸೇರಿದರೆ 200ಕ್ಕೂ ಅಧಿಕ ಮಂದಿ ಆಗುತ್ತಾರೆ. ಅರಮನೆ ಅಂಗಳದಲ್ಲಿ ಬೀಡುಬಿಡುವ ಇವರು ನಗರದೊಳಗೆ ಸುತ್ತಾಡಲು ಹೋಗುವ ಸಾಧ್ಯತೆ ಇರುತ್ತದೆ. ಕೋವಿಡ್‌ ಹೆಚ್ಚಿರುವುದರಿಂದ ಅಪಾಯ ಎದುರಾಗಬಹುದು’ ಎಂದು ಅರಣ್ಯಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

‘ಜಂಬೂಸವಾರಿ ನಡೆಯದಿದ್ದರೆ ಅರ್ಜುನ ಆನೆ, ಎರಡು ಹೆಣ್ಣಾನೆ ಹಾಗೂ ಅರಮನೆ ಆಯುಧಪೂಜೆಗೆಂದು ಎರಡು ಆನೆಗಳನ್ನು ಕರೆತಂದರೆ ಸಾಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT