ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಈ ಬಾರಿ ಐದು ಉಪಸಮಿತಿ

ಸಿದ್ಧತಾ ಸಭೆ ನಡೆಸಿದ ಸಚಿವ ಎಸ್‌.ಟಿ.ಸೋಮಶೇಖರ್‌, ಸ್ಥಳೀಯ ಕಲಾವಿದರಿಗೆ ಆದ್ಯತೆ
Last Updated 20 ಸೆಪ್ಟೆಂಬರ್ 2020, 2:25 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಸಲು ಈ ಬಾರಿ ಕೇವಲ ಐದು ಉಪಸಮಿತಿ ರಚಿಸಲಾಗಿದೆ. ‌ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ನಾಡಹಬ್ಬ ಸೀಮಿತವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸ್ವಾಗತ ಮತ್ತು ಆಮಂತ್ರಣ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ದೀಪಾಲಂಕಾರ ಸಮಿತಿ, ಸ್ವಚ್ಛತೆ ಮತ್ತು ವ್ಯವಸ್ಥೆ ಸಮಿತಿಗಳು ಕಾರ್ಯ ನಿರ್ವಹಿಸಲಿವೆ.‌ ಅಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿ ನೀಡಲಾಗಿದೆ.

ದಸರಾ ಸಿದ್ಧತೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಸರಳ ಹಾಗೂ ಸಾಂಪ್ರದಾಯಿಕ ವಾಗಿ ಈ ಬಾರಿ ದಸರಾ ಆಚರಿಸುತ್ತಿರು ವುದರಿಂದ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಪ್ರತಿ ಖರ್ಚಿಗೂ ಲೆಕ್ಕ ಕೊಡಬೇಕು’ ಎಂದು ಸಚಿವರು ಸೂಚನೆ ನೀಡಿದರು.

‘ಜಿಲ್ಲಾಧಿಕಾರಿಯು ವೀರನಹೊಸ ಹಳ್ಳಿಗೆ ಅ.1ರಂದು ತೆರಳಿ ಮಾವುತರಿಗೆ ಆಹ್ವಾನ ನೀಡಲಿದ್ದಾರೆ. ಅರಮನೆ ಆವರಣದಲ್ಲಿ ಅ.2ರಂದು ಮಧ್ಯಾಹ್ನ 12.18ಕ್ಕೆ (ಧನುರ್‌ ಲಗ್ನ) ಗಜಪಡೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಂಬೂಸವಾರಿಗೆ ಎಷ್ಟು ಜನರನ್ನು ಸೇರಿಸಲು ಅನುಮತಿ ಸಿಗಲಿದೆಯೋ ಅಷ್ಟಕ್ಕೆ ಆಸನ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ಇರಲಿದೆ ಎಂದು ಹೇಳಿದರು.

ಹಿಂದಿನ ವರ್ಷಗಳಂತೆ ಸೆಸ್ಕ್‌ ವತಿಯಿಂದ ದೀಪಾಲಂಕಾರ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆದಷ್ಟು ಬೇಗ ಕಲಾವಿದರನ್ನು ಆಯ್ಕೆ ಮಾಡುವಂತೆ ಸಮಿತಿಯ ಮುಖ್ಯಸ್ಥರಿಗೆ ಸೂಚಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಕಳೆದ ವರ್ಷ ಅರಮನೆ ಆವರಣದಲ್ಲಿ ಆರಂಭಿಸಿದ್ದ ಸೂರ್ಯೋದಯದಿಂದ ಸೂರ್ಯಾಸ್ತ ದವರೆಗಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳನ್ನು ಕೋರಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎಲ್‌.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ಬಿ.ಶರತ್‌, ಪೊಲೀಸ್ ಕಮಿಷನರ್‌ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎಸ್‌.ಮಂಜುನಾಥಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT