ಮೈಸೂರು ದಸರೆಗೆ ಪೊಲೀಸರ ಸರ್ಪಗಾವಲು

7
5,284 ಪೊಲೀಸ್‌ ಅಧಿಕಾರಿ, ಸಿಬ್ಬಂದಿ, 1,600 ಗೃಹರಕ್ಷಕರಿಗೆ ಹೊಣೆ

ಮೈಸೂರು ದಸರೆಗೆ ಪೊಲೀಸರ ಸರ್ಪಗಾವಲು

Published:
Updated:

ಮೈಸೂರು: ಈ ಬಾರಿ ದಸರಾ ಮಹೋತ್ಸವಕ್ಕೆ 6 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಇವರಲ್ಲಿ 5,284 ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು 1,600 ಗೃಹರಕ್ಷಕ ಸಿಬ್ಬಂದಿ ಸೇರಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದಲ್ಲಿ ಒಟ್ಟು 86 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವು ಮೈಸೂರು ಅರಮನೆ, ಮೆರವಣಿಗೆ ಮಾರ್ಗ, ಬನ್ನಿಮಂಟಪ ಮೈದಾನ ಹೀಗೆ ಪ್ರಮುಖ ಸ್ಥಳಗಳಲ್ಲಿ ಇವೆ. ಇದರ ಜತೆಗೆ, ಮೊಬೈಲ್ ಕಮಾಂಡ್ ಬಸ್‌ನ್ನೂ ಕಾರ್ಯಾಚರಣೆಗೆ ಇಳಿಸಲಾಗಿದೆ. ಇದರಲ್ಲಿ ತೀರಾ ದೂರದ ದೃಶ್ಯಗಳನ್ನು ನಾಲ್ಕೂ ದಿಕ್ಕಿನಿಂದಲೂ ಸೆರೆ ಹಿಡಿಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಾಂಬ್ ನಿಷ್ಕ್ರಿಯ ದಳ, ಕಮಾಂಡೊ ಪಡೆಗಳೂ ಸಹ ಇರಲಿವೆ. 30 ‍ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ವೃತ್ತಿನಿರತ ಕಿಸೆಗಳ್ಳರು ಹಾಗೂ ಇತರೆ ಕಳ್ಳರ ವಿರುದ್ಧ ಭದ್ರತಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.‌

ಮೆರವಣಿಗೆಯಲ್ಲಿ ಅಲ್ಲಲ್ಲಿ ಚಿಕಿತ್ಸೆ ದೊರೆಯುವಂತಹ ಸೌಲಭ್ಯ ಒದಗಿಸಲು ಹಾಗೂ ಹಾಲುಣಿಸುವ ಕೇಂದ್ರಗಳನ್ನು ತೆರೆಯಲು ಯೋಚಿಸಲಾಗಿದೆ ಎಂದು ಅವರು ತಿಳಿಸಿದರು.

ಡ್ರೋಣ್ ಕ್ಯಾಮೆರಾಕ್ಕೆ ಮೊದಲೇ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸದ್ಯ, ಡ್ರೋಣ್ ಕ್ಯಾಮೆರಾ ಬಳಕೆ ಕುರಿತು ನೀತಿ ನಿಯಮಗಳು ಬದಲಾವಣೆ ಆಗಿವೆ. ಹೊಸದಾಗಿ ಬಂದಿರುವ ಕಾನೂನಿನ ಚೌಕಟ್ಟಿನಡಿ ಪರಿಶೀಲಿಸಿ ಅನುಮತಿ ನೀಡಲಾಗುವುದು ಎಂದರು.

ಎಲ್ಲೆಲ್ಲಿ ಪೊಲೀಸ್ ಸಹಾಯವಾಣಿಗಳು?

ಬೆಂಗಳೂರು ರಸ್ತೆಯ ಚೆಕ್‌ಪೋಸ್ಟ್‌, ಮಿಲೇನಿಯಂ ವೃತ್ತ, ಜಗಜೀವನರಾಂ ವೃತ್ತ, ರೈಲು ನಿಲ್ದಾಣದ ಪಶ್ಚಿಮ ದ್ವಾರ, ಹುಣಸೂರು ರಸ್ತೆಯ ಚೆಕ್‌ಪೋಸ್ಟ್, ಈಜ್ಹಿಡೇ ಮಾಲ್‌ ಬಳಿ, ಕಲಾಮಂದಿರ, ಕೆಎಆರ್‌ಎಸ್‌ ಚೆಕ್‌ಪೋಸ್ಟ್, ಅರಮನೆಯ ಬಲರಾಮ, ವರಹಾ ಹಾಗೂ ಜಯಮಾರ್ತಾಂಡ ಗೇಟ್, ಕೆ.ಆರ್.ವೃತ್ತ, ಸೆಂಟ್ ಫಿಲೊಮಿನಾ ಚರ್ಚ್, ಗ್ರಾಮಾಂತರ ಬಸ್‌ನಿಲ್ದಾಣ, ಮಹಾತ್ಮ ಗಾಂಧೀಜಿ ಚೌಕ, ಮೈಸೂರು ಮೃಗಾಲಯ, ದಸರಾ ವಸ್ತುಪ್ರದರ್ಶನದ ಮುಖ್ಯದ್ವಾರ ಮತ್ತು ಪೂರ್ವದ್ವಾರ, ಫಲಪುಷ್ಪ ಪ್ರದರ್ಶನ, ಕಾರಂಜಿ ಕೆರೆ ಗೇಟ್ ಬಳಿ, ಮೈಸೂರು ಮಾಲ್‌, ಲಲಿತಮಹಲ್ ಬಳಿ, ಚಾಮುಂಡಿಬೆಟ್ಟ, ಸುತ್ತೂರು ಮಠ ವೃತ್ತ, ಏಕಲವ್ಯ ವೃತ್ತ, ಸ್ಕೌಟ್ಸ್‌ ಮತ್ತು ಗೈಡ್ಸ್, ಅವಧೂತ ದತ್ತಪೀಠ, ನಂಜನಗೂಡು ಚೆಕ್‌ಪೋಸ್ಟ್, ವಿವೇಕಾನಂದ ವೃತ್ತ, ಮಂಡಕಳ್ಳಿ ವಿಮಾನನಿಲ್ದಾಣ.

ಡಿಸಿಪಿಗಳಾದ ವಿಕ್ರಂ ವಿ.ಆಮ್ಟೆ, ವಿಷ್ಣುವರ್ಧನ್ ಇದ್ದರು.

* ದಸರಾ ಮಹೋತ್ಸವಕ್ಕೆ ಈ ಬಾರಿ ಭದ್ರತೆಗಾಗಿ ಒಟ್ಟು 6,884 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಸ್‌.ಪಿ ದರ್ಜೆಯ 10, ಎಸಿಪಿ ದರ್ಜೆಯ 39 ಅಧಿಕಾರಿಗಳ ಜತೆಗೆ ಕರ್ನಾಟಕ ರಾಜ್ಯ ಮೀಸಲು ಪಡೆಯ ಒಟ್ಟು 57 ತುಕಡಿಗಳು ಇರಲಿವೆ.

* 5,284 ಸಿವಿಲ್/ಸಂಚಾರ ಪೊಲೀಸ್ ಅಧಿಕಾರಿಗಳು

* 1,600 ಗೃಹರಕ್ಷಕ ಸಿಬ್ಬಂದಿ

* 57 ಮೀಸಲು ಪಡೆ ತುಕಡಿಗಳು

* 10 ಎಸ್‌.ಪಿ ದರ್ಜೆ ಅಧಿಕಾರಿಗಳು

* 39 ಎಸಿಪಿ ದರ್ಜೆ ಅಧಿಕಾರಿಗಳು

* 113 ಇನ್‌ಸ್ಪೆಕ್ಟರ್‌ಗಳು

* 16 ಅಗ್ನಿಶಾಮಕದಳ

* 17 ಅಂಬುಲೆನ್ಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !