ಸಾಂಸ್ಕೃತಿಕ ಸಿರಿವೈಭವ; ಸಂತಸದ ಭಾವತರಂಗ

7
ದಸರಾ ಮಹೋತ್ಸವಕ್ಕೆ ಚಾಲನೆ, ತರಹೇವಾರಿ ಕಾರ್ಯಕ್ರಮಗಳ ರಸದೌತಣ

ಸಾಂಸ್ಕೃತಿಕ ಸಿರಿವೈಭವ; ಸಂತಸದ ಭಾವತರಂಗ

Published:
Updated:
Deccan Herald

ಮೈಸೂರು: ಸಾಂಸ್ಕೃತಿಕ ಸಿರಿವೈಭವವನ್ನು ಪರಿಚಯಿಸುವ ಮೂಲಕ ಸಂತಸದ ಭಾವತರಂಗಗಳ ಅಲೆ ಎಬ್ಬಿಸಿರುವ ದಸರಾ ಮಹೋತ್ಸವದಲ್ಲಿ ಮೊದಲ ದಿನವೇ ತರಹೇವಾರಿ ಕಾರ್ಯಕ್ರಮಗಳ ರಸದೌತಣ.

ಚಾಮುಂಡಿಬೆಟ್ಟದಿಂದ ಮೇಲೆದ್ದು ಆಕಾಶವನ್ನೇ ತಬ್ಬಿಕೊಂಡಂತಿದ್ದ ಮುಂಜಾನೆಯ ಮಂಜಿನ ಪರಿಸರದಲ್ಲಿ ಶರನ್ನವರಾತ್ರಿಗೆ ಚಾಲನೆ ಲಭಿಸಿತು. ಆ ಸಂಭ್ರಮದ ಕ್ಷಣದಿಂದ ರಾತ್ರಿಯ ವಿದ್ಯುತ್‌ ದೀಪಾಲಂಕಾರದ ವಯ್ಯಾರದಲ್ಲಿ ಅರಮನೆ ನಗರಿ ಕಂಗೊಳಿಸುವವರೆಗೆ ‌ಬಿಡುವಿಲ್ಲದ ಕಾರ್ಯಕ್ರಮಗಳು. ಆ ವೈಭವದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಮಿಂದೆದ್ದರು.

ಬರೋಬ್ಬರಿ 12 ವೈವಿಧ್ಯಮಯ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ಲಭಿಸಿತು. ಅದರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರು ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

ದಸರಾ ಉದ್ಘಾಟಕಿ ಸುಧಾಮೂರ್ತಿ ಬೆಳಿಗ್ಗೆ ಬೆಟ್ಟದಲ್ಲಿ ಕನ್ನಡ ಡಿಂಡಿಮ ಬಾರಿಸಿದರೆ, ಕುಪ್ಪಣ್ಣ ಉದ್ಯಾನದಲ್ಲಿ ತರಹೇವಾರಿ ಹೂಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದವು. ಗಾಜಿನ ಮನೆಯಲ್ಲಿ ಲೋಟಸ್‌ ಮಹಲ್‌ ಕಣ್ಮನ ಸೆಳೆಯುತ್ತಿದೆ. ರಾಜಮನೆತನದ ಖಾಸಗಿ ದರ್ಬಾರ್‌ ಮೂಲಕ ಅರಮನೆಯಲ್ಲಿ ಗತವೈಭವ ಮರುಕಳಿಸಿತು.

ಆಹಾರಮೇಳದಲ್ಲಿ ಮೊದಲ ದಿನವೇ ವಿವಿಧ ಖಾದ್ಯಗಳನ್ನು ಪ್ರವಾಸಿಗರು ಸವಿದರು. ವಿದೇಶಿ ಆಹಾರ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗದ ಆಹಾರ, ಪಂಜಾಬ್, ರಾಜಸ್ತಾನ, ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳ ಸಸ್ಯಾಹಾರ, ಮಾಂಸಾಹಾರದ ಘಮಲು ಇರಲಿದೆ.

ಚಾಮುಂಡಿವಿಹಾರದಲ್ಲಿ ಕ್ರೀಡಾ ಕಲರವ ನಿರ್ಮಾಣವಾದರೆ ಡಿ.ದೇವರಾಜ ಅರಸು ವಿವಿಧೋದ್ದೇಶ ಅಖಾಡದಲ್ಲಿ ಪೈಲ್ವಾನವರು ದೂಳೆಬ್ಬಿಸಿದರು. ಕಲಾಮಂದಿರದಲ್ಲಿ ಚಲನಚಿತ್ರೋತ್ಸವದ ರಂಗು ತೆರೆದುಕೊಂಡಿತು. ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು.‌

ಸಿಂಗಾರಗೊಂಡ ಬೆಟ್ಟ: ದಸರಾ ಸಂಭ್ರಮ ರಂಗೇರಿಸಲು ಬೆಟ್ಟದ ರಸ್ತೆಯನ್ನು ಸಿಂಗರಿಸಲಾಗಿತ್ತು. ಮಹಿಷಾಸುರ ವೃತ್ತದಿಂದ ದೇಗುಲದವರೆಗೆ ತಳಿರು ತೋರಣ, ಸ್ವಾಗತ ಕಮಾನು, ಬಣ್ಣಬಣ್ಣದ ರಂಗೋಲಿಗಳು ಕಂಗೊಳಿಸಿದವು. ನಂದಿಧ್ವಜ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ತುಂಬಿದವು. ಮಹಿಳೆಯರು ಪೂರ್ಣಕುಂಭ ಹೊತ್ತು ಗಣ್ಯರನ್ನು ಬರಮಾಡಿಕೊಂಡರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅರಮನೆಗೆ ತೆರಳಿ ರಾಜವಂಶಸ್ಥೆ ಪ್ರಮೋದಾದೇವಿ ಅವರಿಗೆ ದಸರಾ ಶುಭಾಶಯ ಕೋರಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !