ದಸರಾ: ಮೈಸೂರಿನಲ್ಲಿ 52 ಕಿಲೋಮೀಟರ್‌ ದೀಪಾಲಂಕಾರ

7
10ರಿಂದ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬೆಳಗಲಿವೆ ಸುಂದರ ದೀಪಗಳು

ದಸರಾ: ಮೈಸೂರಿನಲ್ಲಿ 52 ಕಿಲೋಮೀಟರ್‌ ದೀಪಾಲಂಕಾರ

Published:
Updated:
Deccan Herald

ಮೈಸೂರು: ಮೈಸೂರು ದಸರಾ ದೀಪಾಲಂಕಾರ ಉಪ ಸಮಿತಿ ಹಾಗೂ ‘ಸೆಸ್ಕ್‌’ ವತಿಯಿಂದ ನಗರದ 26 ರಸ್ತೆಗಳಿಂದ ಒಟ್ಟು 56 ಕಿಲೋಮೀಟರ್ ಉದ್ದದ ದೀಪಾಲಂಕಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ತಿಳಿಸಿದರು.

ಈ ಬಾರಿ ಸಂಪೂರ್ಣ ಎಲ್‌ಇಡಿ ದೀಪಗಳನ್ನು ಬಳಸುತ್ತಿರುವುದರಿಂದ 10ನೇ ಒಂದು ಭಾಗದಷ್ಟು ವಿದ್ಯುತ್‌ ಉಳಿತಾಯವಾಗುತ್ತಿದೆ. ಅ. 10ರಿಂದ 19ರವರೆಗೆ ಒಟ್ಟು 65 ಸಾವಿರ ಯುನಿಟ್ ವಿದ್ಯುತ್‌ ದೀಪಾಲಂಕಾರಕ್ಕೆ ಬಳಕೆಯಾಗಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಟ್ಟು 26 ಪ್ರಮುಖ ರಸ್ತೆಗಳು, 51 ವೃತ್ತಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಇದೆ. ನಗರದ ವಿವಿಧ ಭಾಗಗಳಲ್ಲಿ 13 ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ₹ 2.98 ಲಕ್ಷ ಖರ್ಚಾಗಿದ್ದು, ಖಾಸಗಿ ಪ್ರಾಯೋಜಕತ್ವದಿಂದ ₹ 49 ಲಕ್ಷ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ 9 ಪ್ರತಿಕೃತಿಗಳನ್ನು ನಿರ್ಮಿಸಲಾಗಿತ್ತು. ಈ ವರ್ಷ ನಾಲ್ಕು ಹೆಚ್ಚುವರಿ ಪ್ರತಿಕೃತಿಗಳಿವೆ. ದೊಡ್ಡಕರೆ ಮೈದಾನ ಹಾಗೂ ಏಕಲವ್ಯ ವೃತ್ತದಲ್ಲಿ ಬೇಲೂರು ದರ್ಪಣ ಸುಂದರಿಯ ಪ್ರತಿಕೃತಿಗಳು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌, ‘ಮುಡಾ’ ವೃತ್ತದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಕೃತಿ ನಿರ್ಮಿಸಲಾಗುತ್ತಿದೆ ಎಂದರು.

ಮರಗಳಿಗೆ ಹಾನಿಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಕಬ್ಬಿಣದ ಮೊಳೆಗಳನ್ನು ಬಳಸಿಲ್ಲ. ಪರಿಸರ ಪ್ರಿಯ ಕ್ರಮಗಳನ್ನು ತೆಗೆದುಕೊಳ್ಳುವುದು ಆದ್ಯತೆಯಾಗಿದೆ ಎಂದು ತಿಳಿಸಿದರು.

‘ಆರ್‌ಜಿಬಿ’ ಬಳಕೆ ವಿಶೇಷ:

ಅಲ್ಲದೇ, ಈ ವರ್ಷದಿಂದ ಇದೇ ಮೊದಲ ಬಾರಿಗೆ ‘ಆರ್‌ಜಿಬಿ’ (ಕೆಂಪು, ಹಸಿರು, ನೀಲಿ) ದೀಪಗಳ ಬಳಕೆಯಾಗಿದೆ. ಇದರಿಂದ ಬಹುವರ್ಣಗಳ ಸಂಯೋಜನೆಯ ದೀಪಾಲಂಕಾರ ವ್ಯವಸ್ಥೆ ಸಿಕ್ಕಿದೆ. ದೇವರಾಜ ಅರಸು ರಸ್ತೆ ಹಾಗೂ ಬಯಲು ರಂಗಮಂದಿರದ ಬಳಿ ಈ ವ್ಯವಸ್ಥೆ ಮಾಡಿರುವುದು ವಿಶೇಷ. ಅಂತೆಯೇ, ಚಾಮುಂಡಿಬೆಟ್ಟದ ರಸ್ತೆ, ಹುಣಸೂರು ರಸ್ತೆ ಹಾಗೂ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌ಗಾಗಿ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಉಪ ಸಮಿತಿಯ ಕಾರ್ಯಾಧ್ಯಕ್ಷ ಮುನಿಗೋಪಾಲರಾಜು, ಸೆಸ್ಕ್‌ ನಿರ್ದೇಶಕ ನರಸಿಂಹೇಗೌಡ, ಮುಖ್ಯ ವಾಣಿಜ್ಯ ಅಧಿಕಾರಿ ಶಿವಣ್ಣ, ಲೆಕ್ಕಪರಿಶೋಧಕ ಎಂ.ಎಸ್.ವೆಂಕಟೇಶ, ಮುಖ್ಯ ಎಂಜಿನಿಯರ್ ಅಫ್ತಾಬ್ ಅರ್ಮಾನ್‌ ಭಾಗವಹಿಸಿದ್ದರು.

10ರಂದು ಉದ್ಘಾಟನೆ: 

ಅ.10ರಂದು ಸಂಜೆ 6.15ಕ್ಕೆ ಸಯ್ಯಾಜಿ ರಾವ್‌ ರಸ್ತೆಯ ಹಸಿರು ಮಂಟಪದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಉದ್ಘಾಟಿಸುವರು.

ಸಂಜೆ 7ರಿಂದ 10ರವರೆಗೆ ದೀಪಗಳು ಉರಿಯಲಿವೆ. ಇದಕ್ಕಾಗಿ ಮುತುವರ್ಜಿಗಾಗಿ ಒಬ್ಬ ಸಿಬ್ಬಂದಿಯನ್ನು ಪ್ರತಿ 1 ಕಿಲೋಮೀಟರಿಗೆ ಒಬ್ಬರಂತೆ, 1 ವೃತ್ತಕ್ಕೆ ಒಬ್ಬರಂತೆ ಸಿಬ್ಬಂದಿ ನಿಯೋಜಿಸಲಾಗಿದೆ. 8 ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳು, 10 ಸೇವಾ ವಾಹನಗಳು ಭಾಗವಹಿಸಲಿವೆ.

ಅಂಕಿ – ಅಂಶ

* 52– ಒಟ್ಟು ಕಿಲೋಮೀಟರ್‌ ದೀಪಾಲಂಕಾರ

* 51– ವೃತ್ತಗಳಿಗೆ ದೀಪಾಲಂಕಾರ

* 65,000– ಒಟ್ಟು ವಿದ್ಯುತ್‌ ಯುನಿಟ್ ಬಳಕೆ

* ₹2.98 ಲಕ್ಷ– ಒಟ್ಟು ಖರ್ಚು

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !