ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ನಿಂತ ನೀರಲ್ಲ; ಹರಿಯೋ ನೀರು: ಸಚಿವ ವಿ.ಸೋಮಣ್ಣ

ದಸರಾ ಸೋಲು–ಗೆಲುವಿನ ಹೊಣೆ ನನ್ನದೇ
Last Updated 8 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ‘ದಸರಾ ಸೋಲು–ಗೆಲುವಿನ ಹೊಣೆಗಾರಿಕೆ ನನ್ನದೇ. ಜವಾಬ್ದಾರಿ ಹೊತ್ತು 16 ದಿನಗಳಾಗಿವೆ. ಈ ಅವಧಿಯಲ್ಲಿ ಎರಡು ದಿನವಷ್ಟೇ ಮನೆಯಲ್ಲಿ ಉಳಿದಿದ್ದೇನೆ. ನಮಗೆ, ನಮ್ಮ ಕುಟುಂಬಕ್ಕೆ ಪಾಸ್‌ ಕೊಡಿ ಎಂಬುದನ್ನು ಬಿಡಿ. ಹೊರಗಿನಿಂದ ಬರುವವರಿಗೆ ಮೊದಲ ಆದ್ಯತೆ ನೀಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಮೈಸೂರು ತಾಲ್ಲೂಕಿನ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಿದ ಸಚಿವರು, ‘ಎಲ್ಲರನ್ನೊಳಗೊಂಡ ದಸರಾ ನಡೆಸಬೇಕು ಎಂಬ ಉದ್ದೇಶದಿಂದ ನಿಮ್ಮನ್ನೂ ಭಾಗಿದಾರರನ್ನಾಗಿ ಮಾಡಿಕೊಳ್ಳುತ್ತಿದ್ದೇವೆ. ಉಪ ಸಮಿತಿ ಸದಸ್ಯರಾಗದಿದ್ದರೇನಂತೆ. ನನ್ನೊಟ್ಟಿಗಿರಿ’ ಎಂದು ಹೇಳಿದರು.

‘ಪ್ರಬುದ್ಧರ ಜಿಲ್ಲೆಯ ಜನಪ್ರತಿನಿಧಿಗಳು ನೀವು. ಸರ್ಕಾರ ನಿಂತ ನೀರಲ್ಲ. ಹರಿಯೋ ನೀರು. ಹರಿಯೋ ನೀರಲ್ಲಿ ಮುಖ್ಯಮಂತ್ರಿ ಬಳಿ ಅನುದಾನ ತರುವೆ. ಎಲ್ಲರೂ ಸೇರಿ ದಸರಾ ಯಶಸ್ವಿಗೊಳಿಸೋಣ. ನಂತರ ನಿಮ್ಮ ಸಮಸ್ಯೆ ಏನು ಎಂಬುದು ನನಗೂ ಗೊತ್ತಿದೆ. ಅವಕ್ಕೆ ಪರಿಹಾರ ಕಲ್ಪಿಸುವೆ. ಸಿಎಂ ಜತೆ ಮಾತನಾಡಿ ಅನುದಾನ ಕೊಡಿಸುವೆ’ ಎಂಬ ಭರವಸೆ ನೀಡಿದರು.

‘ಅಧಿಕಾರಿ ಸಮೂಹ ನನ್ನನ್ನು ಬೈದುಕೊಳ್ಳುತ್ತಿದೆ ಎಂಬುದರ ಅರಿವು ನನಗಿದೆ. ದಸರಾ ಆಚರಣೆಯಲ್ಲಿ ಪರಂಪರೆಯ ಜತೆಗೆ ಬದಲಾವಣೆಯನ್ನು ತರಬೇಕು ಎಂಬ ಆಶಯದಿಂದ ದುಡಿಯುತ್ತಿರುವೆ. ಜಿಲ್ಲೆಯಾದ್ಯಂತ ಸಂಚರಿಸಿ, ಎಲ್ಲರಲ್ಲೂ ಮನವಿ ಮಾಡುತ್ತಿರುವೆ. ನೀವು ಮುಕ್ತ ಮನಸ್ಸಿನಿಂದ ಸಹಕರಿಸಿ’ ಎಂದು ಸೋಮಣ್ಣ ಮನವಿ ಮಾಡಿದರು.

‘ಜಂಬೂಸವಾರಿ ಸಾಗುವ ಹಾದಿ ಬದಿ ಖಾಸಗಿಯವರು ಟೆಂಟ್ ಹಾಕಿಕೊಳ್ಳಲು ಅವಕಾಶ ಕೊಡಲ್ಲ. ಪಾಲಿಕೆ ವತಿಯಿಂದಲೇ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ತಾ.ಪಂ.ಸದಸ್ಯ ಹನುಮಂತು ಆಕ್ಷೇಪಕ್ಕೆ ಸಚಿವರು ಪ್ರತಿಕ್ರಿಯಿಸಿದರು.

‘ದಸರಾ ಆಚರಣೆಗಾಗಿ ಈಗಾಗಲೇ ಘೋಷಿಸಿರುವ ಅನುದಾನವನ್ನು ಮೂರು ದಿನಗಳೊಳಗೆ ಬಿಡುಗಡೆ ಮಾಡುವೆ. ಗ್ರಾಮೀಣ ದಸರಾ ಚಟುವಟಿಕೆಗಳು ಸೆ.25ರೊಳಗೆ ಪೂರ್ಣಗೊಳ್ಳಬೇಕು’ ಎಂದು ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಗಳಾ ಸೋಮಶೇಖರ್, ಬೀರಿಹುಂಡಿ ಬಸವಣ್ಣ, ಅರುಣ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ, ಮೈಸೂರು ತಾಲ್ಲೂಕಿನ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮೈಸೂರು ನಗರ ತಾಲ್ಲೂಕು ರಚಿಸಿ

‘ಮೈಸೂರು ತಾಲ್ಲೂಕು ಎಂಬುದನ್ನು ಕೈಬಿಡಿ. ನಗರ–ಗ್ರಾಮಾಂತರ ಎಂದು ರಚಿಸಿ. ಮುಂದಿನ 15 ವರ್ಷಗಳಲ್ಲಿ ಮೈಸೂರು ಸಾಕಷ್ಟು ಪ್ರಗತಿ ಹೊಂದಲಿದೆ. ಈ ಅವಧಿಯಲ್ಲಿ ನಗರ ತಾಲ್ಲೂಕು ಸಹ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಅವಕಾಶವಿರುತ್ತದೆ’ ಎಂದು ಸಚಿವ ಸೋಮಣ್ಣ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಅವರಿಗೆ ಸೂಚಿಸಿದರು.

ಮೈಸೂರು ತಾಲ್ಲೂಕಿನ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ‘ರಾಜಕಾರಣಿಗಳು ಎಂದೆಂದೂ ವೋಟಿನಾಸೆಗೆ ಕೆಲಸ ಮಾಡುವವರು. ನೀವು ಸಿಕ್ಕಷ್ಟೇ ಸಾಕು ಎಂದು ಬಾಚಿಕೊಳ್ಳುವ ಪ್ರವೃತ್ತಿ ಬಿಟ್ಟು, ಮನಪೂರ್ವಕವಾಗಿ ಜನರ ಸೇವೆ ಸಲ್ಲಿಸಲು ಮುಂದಾಗಿ. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ’ ಎಂದು ಅಧಿಕಾರಿ ಸಮೂಹಕ್ಕೆ ಕಿವಿಮಾತು ಹೇಳಿದರು.

ದೇಗುಲದಲ್ಲಿ ರಾಜಕಾರಣ ಬೇಡ

ಚಾಮುಂಡೇಶ್ವರಿ ದೇಗುಲದ ಸುತ್ತಮುತ್ತಲಿನ ವ್ಯಾಪಾರಿಗಳ ತೆರವುಗೊಳಿಸುವಿಕೆ ಪ್ರಕರಣ, ದಿನದಿಂದ ದಿನಕ್ಕೆ ರಾಜಕೀಯ ಸ್ವರೂಪ ಪಡೆದಿದೆ.

ಮೈಸೂರು ತಾಲ್ಲೂಕು ಆಡಳಿತದ ಅಧಿಕಾರಿ ವರ್ಗದೊಟ್ಟಿಗೆ ಭಾನುವಾರ ಈ ವಿಷಯವಾಗಿ ಚರ್ಚಿಸಿದ ಸಚಿವ ವಿ.ಸೋಮಣ್ಣ, ‘ದೇಗುಲದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮೂಗು ತೂರಿಸಬಾರದು. ಪಕ್ಕದ ಜಿಲ್ಲೆಯ ಮಹದೇಶ್ವರ ದೇಗುಲ ಗಮನಿಸಿ. ಅಲ್ಲಿಯೂ ಇದೇ ರೀತಿ ಸಮಸ್ಯೆಯಿತ್ತು. ಪರಿಹರಿಸಿದ ಬಳಿಕ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಸರ್ಕಾರದ ಚಿಕ್ಕಾಸಿನ ನೆರವಿನ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ’ ಎಂದು ಹೇಳಿದರು.

‘ಈ ವಿಷಯವನ್ನು ಸಮರ್ಪಕವಾಗಿ ನಿಭಾಯಿಸಿ. ಸಮಸ್ಯೆ ತಲೆದೋರದಂತೆ ಬಗೆಹರಿಸಿ. ಇಲ್ಲದಿದ್ದರೆ ನಾನು ಸುಮ್ಮನಿರಲ್ಲ. ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಸಂಬಂಧಿಸಿದ ಎಂಜಿನಿಯರ್‌, ತಾ.ಪಂ. ಇಒ ಕೃಷ್ಣಕುಮಾರ್‌ಗೆ ಸಚಿವರು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT