ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ನೋವಿಗೆ ದನಿಯಾದ ದಸರಾ ಕವಿಗೋಷ್ಠಿ

ದಸರಾ ಕವಿಗೋಷ್ಠಿಯ ‘ವಿಸ್ಮಿತ’ ವಿಭಾಗದಲ್ಲಿ 15 ಕವಿಗಳಿಂದ ವಾಚನ; ಮಾರ್ದನಿಸಿತು ಸ್ವಸ್ಥ ಸಮಾಜದ ಕಳಕಳಿ
Last Updated 2 ಅಕ್ಟೋಬರ್ 2019, 18:33 IST
ಅಕ್ಷರ ಗಾತ್ರ

ಮೈಸೂರು: ಪ್ರವಾಹದಿಂದ ಮನೆ–ಮಠ ಕಳೆದುಕೊಂಡು ಕಂಗಾಲಾಗಿರುವ ಜನರ ನೋವು–ಸಂಕಟ, ಬಾಪು ಇಲ್ಲದ ಭಾರತದ ಸ್ಥಿತಿ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವ ಭೇದಭಾವದ ವಿಷಗಾಳಿ, ಪತ್ರಕರ್ತರ ತಲ್ಲಣಗಳು, ಪ್ರೋತ್ಸಾಹ ನೀಡುವ ನೆಪದಲ್ಲಿ ಪ್ರತಿಭೆಗಳನ್ನು ತುಳಿಯುವ ನಯವಂಚಕತನ.. ಹೀಗೆ ಹಲವು ಸಂಗತಿಗಳು ಬುಧವಾರ ಆರಂಭವಾದ ದಸರಾ ಕವಿಗೋಷ್ಠಿಯಲ್ಲಿ ಅನಾವರಣಗೊಂಡವು.

ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಕವಿ ಡಾ. ದೊಡ್ಡರಂಗೇಗೌಡ ಗೋಷ್ಠಿ ಉದ್ಘಾಟಿಸಿದರು. ‘ವಿಸ್ಮಿತ’, ‘ವಿಕಾಸ’, ‘ವಿನೋದ’, ‘ವಿಶಿಷ್ಟ’ ಹಾಗೂ ‘ವಿಖ್ಯಾತ’ ಹೆಸರಿನಲ್ಲಿ ಪಂಚ ಕವಿಗೋಷ್ಠಿ ನಡೆಯುತ್ತಿರುವುದು ಈ ಬಾರಿ ದಸರೆಯ ವಿಶೇಷ.

‘ವಿಸ್ಮಿತ’ ವಿಭಾಗದಲ್ಲಿ 15 ಮಂದಿ ಕವಿತೆ ಓದಿದರು. ಪ್ರವಾಹದಿಂದ ಉಂಟಾದ ಅನಾಹುತಗಳ ಬಗ್ಗೆ, ನಿರಾಶ್ರಿತರ ಕೇಂದ್ರಗಳಲ್ಲಿ ಸಂತ್ರಸ್ತರು ಎದುರಿಸುತ್ತಿರುವ ಸಂಕಷ್ಟವನ್ನು ಅಕ್ಷತಾ ತಮ್ಮ ಕವನದಲ್ಲಿ ಕಟ್ಟಿಕೊಟ್ಟರೆ; ಸ್ವತಃ ಪ್ರವಾಹ ಸಂತ್ರಸ್ತರಾದ ಬಾಗಲಕೋಟೆ ಜಿಲ್ಲೆಯ ಸದಾನಂದ ಅವರು ಪಟ್ಟ ಪಾಡನ್ನು ‘ಮುಳುಗಿದವೋ ಎಲ್ಲ ಮುಳುಗಿದವೋ’ ಎಂದು ಹಾಡಿದರು. ಡಿಸಿಪಿ ಬಿ.ಟಿ.ಕವಿತಾ, ‘ಸ್ವಗತ’ ಕವನದಲ್ಲಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಶಕ್ತಿಗಳ ನಡುವೆ ಎಚ್ಚರದ ಸ್ವಾಭಿಮಾನದ ಹೆಜ್ಜೆ ಇರಿಸಬೇಕಾದ ಅಗತ್ಯ ತಿಳಿಸಿದರು. ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತರೊಬ್ಬರ ಶವವನ್ನು ಕಸದ ಗಾಡಿಯಲ್ಲಿ ಸಾಗಿಸ
ಬೇಕಾಗಿ ಬಂದ ಸ್ಥಿತಿ ಹೇಳುವ ಮೂಲಕ, ಮಾಧ್ಯಮ ಲೋಕದ ಬದುಕಿನಲ್ಲಿ ಕಳೆದುಕೊಂಡಿದ್ದು ಬಹಳಷ್ಟು ಎಂಬುದನ್ನು ಪತ್ರಕರ್ತ ರಾಮ್ ಎದುರಿಗಿಟ್ಟರು. ‘ಗಾಂಧಿ ತಾತ’ ಕವನ ವಾಚಿಸಿದ ಅಂಶಿ ಪ್ರಸನ್ನಕುಮಾರ್‌, ರಾಜಕಾರಣಿಗಳ ವಿಡಂಬನೆ ಮಾಡಿದರು. ಗಣೇಶ ಅಮೀನಗಡ ಪತ್ರಕರ್ತರ ಕುರಿತು ಕವನ ವಾಚಿಸಿದರು. ಜಿ.ಕೆ.ರವೀಂದ್ರ ಕುಮಾರ್‌, ‘ಕೈಯಿಂದ ಚಿಮ್ಮಿದ ಚೆಂಡಿಗೆ ಗೊತ್ತಿಲ್ಲ ಮುಂದಿನ ಕ್ಷಣ ತಾನು ಎಲ್ಲಿ ಹೇಗೆ ಎಂದು...’ ಎಂದು ‘ಜೊತೆಗಷ್ಟು ಜೀವನ’ ಕವಿತೆಗೆ ಧ್ವನಿಯಾದರು. ‘ಮಸಣ ಯಾತ್ರೆ’ಯ ಹೊತ್ತಿನ ಮನಸ್ಥಿತಿಯನ್ನು, ಸಾವೆಂಬ ಅನಿವಾರ್ಯವನ್ನು ಡಾ.ಲೋಕೇಶ್ ಹೇಳಿದರೆ, ನಟ ರವಿಪ್ರಸಾದ್ ಪ್ರತಿಭೆಯನ್ನು ಹಿಸುಕುವ ನಯವಾದ ಕ್ರೌರ್ಯವನ್ನು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT