ಸೋಮವಾರ, ಅಕ್ಟೋಬರ್ 18, 2021
24 °C
ನವರಾತ್ರಿಯ ರಂಗು, ಸಾಂಸ್ಕೃತಿಕ ಸಮಾಗಮ l 411ನೇ ದಸರೆಗೆ ಚಾಮುಂಡಿಬೆಟ್ಟದಲ್ಲಿ ಇಂದು ಚಾಲನೆ l ಸಂಜೆ ಅರಮನೆಯಲ್ಲಿ ಸಂಗೀತದ ಸಂಭ್ರಮ

ನಾಡಹಬ್ಬಕ್ಕೆ ಇಂದು ಸಂಭ್ರಮದ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮುಗಿಲಲ್ಲಿ ಮೋಡ–ಬಿಸಿಲಿನ ಚಿನ್ನಾಟ ನಡೆಯುತ್ತಿದ್ದರೆ, ಇತ್ತ ಭುವಿಯಲ್ಲಿ ನವರಾತ್ರಿಯ ರಂಗು–ಸಾಂಸ್ಕೃತಿಕ ಸಮಾಗಮ!

ಎಲ್ಲರ ಚಿತ್ತ ಸಾಂಸ್ಕೃತಿಕ ನಗರಿಯತ್ತ ಹರಿದಿದ್ದು, ಗುರುವಾರದಿಂದ ಭರ್ತಿ ಒಂಬತ್ತು ದಿನ ತರಹೇವಾರಿ ದೃಶ್ಯಗಳು ಅರಮನೆಗಳ ನಗರಿಯಲ್ಲಿ ಮೇಳೈಸಲಿವೆ. 411ನೇ ದಸರಾ ಮಹೋತ್ಸವಕ್ಕೆ ಮೆರುಗು ತುಂಬಲಿವೆ.

ಅರಮನೆ, ಚಾಮುಂಡಿಬೆಟ್ಟ, ಕಲಾಮಂದಿರ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಸೀಮಿತವಾಗಿ ದಸರೆ ನಡೆಯುತ್ತಿದೆ. ಆದರೆ ಕೋವಿಡ್‌ನಿಂದ ಬೇಸತ್ತ ಜನರ ಮನಸ್ಸಿಗೆ ಮುದ ನೀಡಲು, ಸಂಜೆಗಳನ್ನು ಸುಂದರವಾಗಿಸಲು ದೀಪಾಲಂಕಾರ ಸಿದ್ಧವಾಗಿದೆ.

ನಾಡಿನ ಪ್ರಮುಖ ಧಾರ್ಮಿಕ–ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಗುರುವಾರ ಬೆಳಿಗ್ಗೆ 8.15ರಿಂದ 8.45ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಪಾಲ್ಗೊಳ್ಳಲಿದ್ದಾರೆ. ಕೋವಿಡ್‌ ನಿರ್ಬಂಧ ಇರುವುದರಿಂದ ಉದ್ಘಾಟನಾ ಕಾರ್ಯಕ್ರಮಕ್ಕೆ 400 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ವರ್ಚುವಲ್‌ ಆಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ: ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಹೆಸರಾಂತ ಮೃದಂಗ ಕಲಾವಿದ ಎ.ವಿ.ಆನಂದ್‌ ಅವರಿಗೆ ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬಳಿಕ ಬೆಂಗಳೂರಿನ ಪ್ರಭಾತ್‌ ಕಲಾವಿದರು ಕರ್ನಾಟಕ ವೈಭವ ನೃತ್ಯ ರೂಪಕ ಪ್ರಸ್ತುತಪಡಿಸಲಿದ್ದಾರೆ.

ಉತ್ಸವ ಮೂರ್ತಿ ಸಿದ್ಧ: ದಸರಾ ಉದ್ಘಾಟನೆ ಹಾಗೂ ಜಂಬೂಸವಾರಿ ‌ಕಾರ್ಯಗಳಿಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಾಮುಂಡಿಬೆಟ್ಟದಲ್ಲಿ ಶುದ್ಧೀಕರಣಗೊಳಿಸಲಾಗಿದೆ. ಪಂಚಲೋಹದಿಂದ ನಿರ್ಮಿಸಿರುವ ಮೂರ್ತಿಯನ್ನು ಅರಮನೆಯಿಂದ ದಸರಾ ಕಾರ್ಯಕ್ಕಾಗಿ ಇಲ್ಲಿಗೆ ತರಲಾಗಿದೆ.

ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಬೆಳಿಗ್ಗೆ ಉತ್ಸವ ಮೂರ್ತಿಯನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಿ ಬೆಳ್ಳಿ ರಥದಲ್ಲಿ ಇಡಲಾಗುತ್ತದೆ. ಮೊದಲು ದೀಪ ಬೆಳಗುವ ಮೂಲಕ ಚಾಲನೆ ನೀಡಲಾಗುತ್ತದೆ. ಬಳಿ ಪುಷ್ಪಾರ್ಚನೆ ಮಾಡಲಾಗುತ್ತದೆ. ಅದಕ್ಕಾಗಿ ದೇಗುಲದ ಆವರಣದಲ್ಲಿ ವಾಟರ್‌ಪ್ರೂಫ್‌ ವೇದಿಕೆ ನಿರ್ಮಿಸಲಾಗಿದೆ.

ಬಳಿಕ ವಿಜಯದಶಮಿ ದಿನ ಅಂದರೆ ಅ.15ರಂದು ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ತರಲಾಗುತ್ತದೆ. ಅಂದು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯೊಳಗೆ ಪ್ರತಿಷ್ಠಾಪನೆ ಮಾಡಿ, ಅಭಿಮನ್ಯು ಆನೆ ಮೂಲಕ ಮೆರವಣಿಗೆ ಮಾಡಿಸಲಾಗುತ್ತದೆ. ಈ ಬಾರಿಯೂ ಅರಮನೆ ಆವರಣದಲ್ಲೇ ಜಂಬೂಸವಾರಿ ನಡೆಯಲಿದೆ.

ದೀಕ್ಷಿತ್‌ ನೇತೃತ್ವದಲ್ಲಿ ನಿತ್ಯ ಪೂಜೆ: ‘ಬೆಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆದಿದೆ. ಮೊದಲ ದಿನ ದೇಗುಲದ ಒಳಗಡೆ ಚಾಮುಂಡೇಶ್ವರಿ ತಾಯಿಗೆ ಬ್ರಾಹ್ಮಿ ಅಲಂಕಾರ ಮಾಡಲಾಗುವುದು. ಬೆಳಿಗ್ಗೆ ವಿಶೇಷ ಪೂಜೆ ನಡೆಯಲಿದೆ’ ಎಂದು ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ರಾಹ್ಮಿ ಎಂದರೆ ಸಪ್ತಮಾತೃಕೆಯಲ್ಲಿ ಮೊದಲನೇ ದೇವರು. ಬಳಿಕ ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ,ಇಂದ್ರಾಣಿ, ಚಾಮುಂಡಿಗೆ ಅಲಂಕಾರ ಹಾಕಿ ಪೂಜೆ ನೆರವೇರಿಸಲಿದ್ದೇವೆ. ಏಳೂ ದಿನ ಏಳು ಅಲಂಕಾರ ಮಾಡಲಾಗುವುದು. ವಿಶೇಷವಾಗಿ ಯಂತ್ರಾರ್ಚನೆ ಮಾಡಲಾಗುವುದು’ ಎಂದರು.

ಅರಮನೆಯಲ್ಲಿ ಖಾಸಗಿ ದರ್ಬಾರ್‌: ಶರನ್ನವರಾತ್ರಿ ಆಚರಣೆ ಪ್ರಯುಕ್ತ ಅರಮನೆಯಲ್ಲಿ ಗುರುವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಏಳನೇ ಬಾರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಬೆಳಿಗ್ಗೆ 5.30ರಿಂದ 1.30ವರೆಗೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮೊದಲು ಸಿಂಹಾಸನಕ್ಕೆ ಸಿಂಹದ ಮೂರ್ತಿ ಜೋಡಿಸುವ ಕಾರ್ಯ ನಡೆಯಲಿದೆ. ಕಂಕಣಧಾರಣೆ, ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ಬಳಿಕ, ಯದುವೀರ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಪ್ರವೇಶಕ್ಕೆ ನಿರ್ಬಂಧ: ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಸು ವುದರಿಂದ ಗುರುವಾರ ಅರಮನೆ ಪ್ರವೇಶಕ್ಕೆ ಪ್ರವಾಸಿಗರಿಗೆ ಸೀಮಿತ ಅವಧಿಯ ನಿರ್ಬಂಧ ವಿಧಿಸಲಾಗಿದೆ. ಖಾಸಗಿ ದರ್ಬಾರ್‌ ನಡೆಯಲಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರವೇಶವಿರುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.