ಹೊಸ ರೂಪದಲ್ಲಿ ದಸರಾ ವೆಬ್‌ತಾಣ

7
ಸಾರ್ವಜನಿಕರ ಚಿತ್ರಗಳಿಗೂ ಈ ಬಾರಿ ವೇದಿಕೆ, ಹೊಚ್ಚ ಹೊಸ ಆಯ್ಕೆಗಳು

ಹೊಸ ರೂಪದಲ್ಲಿ ದಸರಾ ವೆಬ್‌ತಾಣ

Published:
Updated:
Deccan Herald

ಮೈಸೂರು: ಮೈಸೂರು ದಸರಾ ವೆಬ್‌ಸೈಟ್‌ ಈ ಬಾರಿ ಆಕರ್ಷಕವಾಗಿ ವಿನ್ಯಾಸಗೊಂಡಿದೆ. ಕಳೆದ ಬಾರಿ ಇದ್ದ ಸಮಸ್ಯೆಗಳನ್ನು ನಿವಾರಿಸಿರುವ ತಂತ್ರಜ್ಞರು ಬಳಕೆದಾರರ ಸ್ನೇಹಿ ವೆಬ್‌ಸೈಟ್‌ ಆಗಿ ರೂಪಿಸುವ ಪ್ರಯತ್ನ ನಡೆಸಿದ್ದಾರೆ. ಬಳಕೆದಾರರೊಂದಿಗೆ ಸಂವಹನ ನಡೆಸುವಂಥ ವ್ಯವಸ್ಥೆಯೂ ಇದೆ.

ಪ್ರತಿ ವರ್ಷ ದಸರಾ ವೆಬ್‌ಸೈಟ್‌ ಕೆಲವು ಲೋಪಗಳು ಇರುತ್ತಿದ್ದವು. ಆದರೆ, ಈ ಬಾರಿ ಸ್ವಲ್ಪ ತಡವಾಗಿಯಾದರೂ ವೆಬ್‌ಸೈಟ್ ಅನಾವರಣಗೊಂಡಿದೆ.

ವೆಬ್‌ಸೈಟ್‌ನಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಿವೆ. ಎರಡರಲ್ಲೂ ಸಮಗ್ರ ಮಾಹಿತಿಯ ಹೂರಣವಿದೆ. ಮೈಸೂರನ್ನು ಆಳಿದ ಒಡೆಯರ್ ರಾಜವಂಶಸ್ಥರ ಕುರಿತ ಸಂಕ್ಷಿಪ್ತ ಇತಿಹಾಸ, ಮೈಸೂರು ನಗರ ಕುರಿತ ಮಾಹಿತಿಗಳೂ ಇವೆ. ಗತಕಾಲದ ದಸರಾ ಮಹೋತ್ಸವ ಕುರಿತ ವಿವರಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನೂ ಮಾಡಲಾಗಿದೆ. ಮೈಸೂರಿನ ವಿಶೇಷಗಳೆನಿಸಿದ ಮೈಸೂರು ಪೇಟ, ಮಸಾಲಾ ದೋಸಾ, ಅಗರಬತ್ತಿ, ಮೈಸೂರು ಪಾಕ್, ಗಂಧದೆಣ್ಣೆ, ವೀಳ್ಯದೆಲೆ, ಗಂಜೀಫಾ ಕಲೆ, ಮಲ್ಲಿಗೆ, ಸಾಂಪ್ರದಾಯಿಕ ಚಿತ್ರಕಲೆ, ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪು ಮೊದಲಾದ ವಸ್ತುಗಳ ಮಾಹಿತಿಯೂ ಲಭ್ಯವಿದೆ.

ದಸರಾ ಉಪಸಮಿತಿಯ ಸದಸ್ಯರ ಸಮಗ್ರ ಮಾಹಿತಿ, ಅವರ ಮೊಬೈಲ್ ಸಂಖ್ಯೆಗಳೂ ಇವೆ. ಮೈಸೂರಿನ ಪ್ರವಾಸಿತಾಣಗಳ ಮಾಹಿತಿಯಂತೂ ಪ್ರವಾಸಿಗರಿಗೆ ದಾರಿದೀಪದಂತೆ ಇದೆ. ನಗರದಲ್ಲಿರುವ ದೇವರಾಜ ಮಾರುಕಟ್ಟೆ, ದೊಡ್ಡಗಡಿಯಾರ, ರೇಸ್‌ಕೋರ್ಸ್‌, ಜಯಲಕ್ಷ್ಮಿವಿಲಾಸ ಅರಮನೆ, ಕುಕ್ಕರಹಳ್ಳಿಕೆರೆ, ಕಾರಂಜಿಕೆರೆ, ಲಿಂಗಾಂಬುಧಿ ಕೆರೆ, ವಸ್ತುಸಂಗ್ರಹಾಲಯಗಳು, ಸೆಂಟ್ ಫಿಲೊಮಿನಾ ಚರ್ಚ್ ಸೇರಿದಂತೆ ಮೈಸೂರು ಸುತ್ತಮುತ್ತಲಿರುವ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಎರಡೂ ಭಾಷೆಗಳಲ್ಲಿ ಇದೆ. ಇದರಿಂದ ಪ್ರವಾಸಿಗರು ಎಲ್ಲೆಲ್ಲಿ ಹೋಗಬೇಕು ಎಂದು ಯೋಜನೆ ರೂಪಿಸಲು ಸಹಕಾರಿಯಾಗಿದೆ.

ಚಿತ್ರಗಳ ಗ್ಯಾಲರಿಯೂ ಸುಲಲಿತವಾಗಿ ತೆರೆದುಕೊಳ್ಳುತ್ತದೆ. ಸದ್ಯ, ಈ ಬಾರಿಯ ಗಜಪಯಣದ 12 ಚಿತ್ರಗಳಷ್ಟೇ ಇದೆ. ಉಳಿದಂತೆ, ಹಿಂದಿನ ವರ್ಷಗಳ ದಸರೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಕಾರ್ಯಕ್ರಮಗಳ ವಿವರಗಳು, ನಡೆಯುವ ಸ್ಥಳಗಳನ್ನು ಗೂಗಲ್‌ ಮ್ಯಾಪ್‌ನಲ್ಲಿ ತೋರಿಸಿರುವುದು ಸ್ಥಳದ ಹುಡುಕಾಟಕ್ಕೆ ಅನುಕೂಲವಾಗಿದೆ.

ದಸರಾ ಗೋಲ್ಡ್‌ ಕಾರ್ಡ್‌ನ್ನು ಖರೀದಿಸುವ ಸೌಲಭ್ಯವೂ ಇಲ್ಲಿದೆ. ಅನೇಕ ಉಪಯುಕ್ತ ಪ್ರಶ್ನಾವಳಿಗಳೂ ಇವೆ. ದಸರೆಯಲ್ಲಿ ಪಾಲ್ಗೊಳ್ಳುವ ಎಲ್ಲ ಆನೆಗಳ ಮಾಹಿತಿ ಚಿತ್ರಸಮೇತ ಇದೆ.

ಸಹಾಯವಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ, ಅರಮನೆ, ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಸಂಪರ್ಕ ಸಂಖ್ಯೆಗಳಷ್ಟೆ ಇದೆ. ಆಸ್ಪತ್ರೆಗಳು, ರಕ್ತನಿಧಿಗಳು, ಪೊಲೀಸ್ ಠಾಣೆಗಳು, ಅಗ್ನಿಶಾಮಕಪಡೆ, ಮಹಿಳೆ, ಮಕ್ಕಳು ಹಾಗೂ ಹಿರಿಯರ ಸಹಾಯವಾಣಿ ಸಂಖ್ಯೆಗಳು ಇಲ್ಲಿ ಇಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !