ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ 48 ಗಂಟೆ ಇರುವಾಗ ‘ಚಾರಿತ್ರ್ಯವಧೆ’ ಆರೋಪ: ಜಿಲ್ಲಾಧಿಕಾರಿಗೆ ಸಿಂಹ ದೂರು

Last Updated 3 ಮೇ 2019, 18:10 IST
ಅಕ್ಷರ ಗಾತ್ರ

ಮೈಸೂರು: ‘ಕೆಲವು ವ್ಯಕ್ತಿಗಳು ಮತ್ತು ಮಾಧ್ಯಮಗಳು ಮತದಾನಕ್ಕೆ 48 ಗಂಟೆಗಳಿರುವಾಗ ನನ್ನ ಚಾರಿತ್ರ್ಯವಧೆ ಮಾಡುತ್ತಿವೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಮೈಸೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಅಭಿರಾಂ ಜಿ.ಶಂಕರ್ ಅವರಿಗೆ ಬುಧವಾರ ದೂರು ನೀಡಿದ್ದಾರೆ.

ಇದಕ್ಕೂ ಮುನ್ನ ಯುವತಿಯೊಬ್ದರು ‘ನನ್ನ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡು ಪ್ರತಾಪ ಸಿಂಹ ಅವರೊಂದಿಗೆ ನಡೆದಿದೆ ಎನ್ನಲಾದ ಸಂಭಾಷಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಇದರಿಂದ ನನ್ನ ಚಾರಿತ್ರ್ಯವಧೆಯಾಗಿದ್ದು, ಇದನ್ನು ತಡೆಯಬೇಕು’ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

ಮತದಾನಕ್ಕೆ ಒಂದು ದಿನ ಇರುವಂತೆ ಬುಧವಾರ ಪ್ರತಾಪಸಿಂಹ ಧ್ವನಿಯನ್ನು ಹೋಲುವ, ಯುವತಿಯ ಜತೆ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೊ ಕ್ಲಿಪಿಂಗ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ‘ವೈರಲ್’ ಆಗಿದ್ದವು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರತಾಪ ಸಿಂಹ, ‘ಚುನಾವಣೆಗೆ 48 ಗಂಟೆಗಳ ಮುನ್ನ ಅಭ್ಯರ್ಥಿಯ ತೇಜೋವಧೆ ಅಥವಾ ಮಾನಹಾನಿಕರವಾದ ಯಾವುದೇ ಸುದ್ದಿ ಪ್ರಕಟಿಸಬಾರದು ಎಂದು ನೀತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ. ಗೆಲ್ಲಲು ಆಗದೇ ಪುಕ್ಕಲುತನದಿಂದ ಹೀಗೆ ಮಾಡಲಾಗಿದೆ. ಇದರ ಹಿಂದಿನ ಉದ್ದೇಶ ಏನು ಎಂಬುದು ಎಂತಹವರಿಗಾದರೂ ತಿಳಿಯುತ್ತದೆ’ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ‘ಮೇಲ್ನೋಟಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ 126 ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಮತದಾನಕ್ಕೆ 48 ಗಂಟೆಗಳಿಗೂ ಮುನ್ನ ಪ್ರತಾಪ ಸಿಂಹ ಅವರಿಗೆ ತೇಜೋವಧೆಯಾಗುವಂತೆ ಸುದ್ದಿ ಪ್ರಕಟಿಸಿದ ಮಾಧ್ಯಮಗಳು ಹಾಗೂ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT