ಮಂಗಳವಾರ, ನವೆಂಬರ್ 19, 2019
29 °C
ಪ್ರತ್ಯೇಕ ಪ್ರಕರಣಗಳಲ್ಲಿ ಚಾಮರಾಜನಗರ ಜಿಲ್ಲೆಯ ವಿವಿಧೆಡೆಯ ಕಳ್ಳರ ಬಂಧನ

ಜಿಂಕೆ ಬೇಟೆ: ಮಾಂಸ ಸಮೇತ ಆರೋಪಿ ಬಂಧನ

Published:
Updated:
Prajavani

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ ಜಿಂಕೆಯ ಮಾಂಸ, ಕೊಂಬು, ತಲೆ, ಕಾಲು, ಚರ್ಮ ಮಾರಾಟಕ್ಕೆ ಯತ್ನಿಸಿದ್ದ ಆರೋಪಿಯನ್ನು ಜಿಲ್ಲಾ ಅರಣ್ಯ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿ ಹೋಬಳಿಯ ಬಾಗಲಿ ಗ್ರಾಮದ ಶಂಕರ (28) ಬಂಧಿತ.

ಈತ ಜಿಂಕೆಯನ್ನು ಬೇಟೆಯಾಡಿ, ಮಾಂಸ ಇನ್ನಿತರೆ ಪದಾರ್ಥ ಮಾರಾಟ ಮಾಡಲು ಮುಂದಾದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರ ದಳದ ಪೊಲೀಸ್ ಸಿಬ್ಬಂದಿ ಮಾಲಿನ ಸಮೇತ ಆರೋಪಿಯನ್ನು ಬಂಧಿಸಿದೆ ಎಂಬುದು ತಿಳಿದು ಬಂದಿದೆ.

ಖೋಟಾ ನೋಟು: ಮೂವರ ಬಂಧನ

ಮಂಡಿ ಮೊಹಲ್ಲಾದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ₹ 500, ₹ 2000 ಮುಖಬೆಲೆಯ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಂಡಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕುರುಬಗೇರಿಯ ಗುರುಸ್ವಾಮಿ (33), ರವಿಶಂಕರ್ ಅಲಿಯಾಸ್‌ ಶಂಕರ್ (23), ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಚಿಕ್ಕಮರಳಿ ಗ್ರಾಮದ ಮಹೇಶ (23) ಬಂಧಿತರು.

ಈ ಮೂವರನ್ನು ವಶಕ್ಕೆ ಪಡೆದ ಪೊಲೀಸರು ₹ 2000 ಮುಖಬೆಲೆಯ 16, ₹ 500 ಮುಖಬೆಲೆಯ 17 ಖೋಟಾ ನೋಟುಗಳನ್ನು (₹ 40,500 ಮೊತ್ತದ ಖೋಟಾನೋಟು) ವಶಪಡಿಸಿಕೊಳ್ಳಲಾಗಿದೆ ಎಂದು ಮಂಡಿ ಪೊಲೀಸರು ತಿಳಿಸಿದ್ದಾರೆ.

ಹಣ ತುಂಬುವ ಯಂತ್ರ ಕಳವು ಯತ್ನ: ಬಂಧನ

ನಗರದ ಅಶೋಕ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಪಕ್ಕದಲ್ಲಿದ್ದ ಹಣ ತುಂಬುವ ಯಂತ್ರವನ್ನು ಕಳವು ಮಾಡಲು ಯತ್ನಿಸಿದ್ದ ಕಳ್ಳನನ್ನು ಲಷ್ಕರ್‌ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ನೆನ್ನೆಕಟ್ಟೆ ಗ್ರಾಮದ ನಾಗೇಶ್ ಅಲಿಯಾಸ್ ಮೂಗ ಬಂಧಿತ.

ರಾತ್ರಿ ಗಸ್ತಿನಲ್ಲಿದ್ದ ಲಷ್ಕರ್ ಠಾಣೆಯ ಪೊಲೀಸರು ಅಶೋಕ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಕಳವಿನ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ನಾಗೇಶ್‌ ವಿಚಾರಣೆ ಸಂದರ್ಭ ಮೂಗನಂತೆ ನಟಿಸಿದ್ದ. ಈತನ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂಜು: ₹ 2.53 ಲಕ್ಷ ವಶ

ನಗರದ ದೇವರಾಜ ಮೊಹಲ್ಲಾದ ಸೀಬಯ್ಯ ರಸ್ತೆಯಲ್ಲಿರುವ ಪ್ರೀತಿ ಹೋಂ ಲಾಡ್ಜ್‌ನಲ್ಲಿ ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ 13 ಜೂಜುಕೋರರನ್ನು ಬಂಧಿಸಿದ ದೇವರಾಜ ಪೊಲೀಸ್ ಠಾಣೆಯ ಪೊಲೀಸರು, ಬಂಧಿತರಿಂದ ₹ 2,53,170 ನಗದು, 12 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಟ್ಟೆ ಅಂಗಡಿಗೆ ಬೆಂಕಿ: ಅಪಾರ ನಷ್ಟ

ನಗರದ ಹೆಬ್ಬಾಳು ಸೂರ್ಯಬೇಕರಿ ವೃತ್ತದಲ್ಲಿ ಶುಕ್ರವಾರ ತಡರಾತ್ರಿ ಬಟ್ಟೆ ಅಂಗಡಿಯೊಂದು ಶಾರ್ಟ್‌ ಸರ್ಕೀಟ್‌ನಿಂದ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ನ್ಯೂ ಬಾಂಬೆ ಬಜಾರ್ ಹೆಸರಿನ ತಾತ್ಕಾಲಿಕ ಜವಳಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲ ಹೊತ್ತಿನಲ್ಲೇ ಲಕ್ಷ, ಲಕ್ಷ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ.

ಬಟ್ಟೆಗಳ ರಕ್ಷಣೆಗಾಗಿ ಅಂಗಡಿಯವರು ಹರಸಾಹಸ ಪಟ್ಟರೂ ಪ್ರಯೋಜನವಾಗಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಒಂದು ತಾಸಿಗೂ ಹೆಚ್ಚಿನ ಅವಧಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)