ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಬೆಂಗಳೂರು, ಕೇರಳದಲ್ಲಿ ಕೆಲಸ ಮಾಡುತ್ತಿರುವವರ ದುಂಬಾಲು ಬಿದ್ದ ರಾಜಕಾರಣಿಗಳು
Last Updated 3 ಮೇ 2019, 18:10 IST
ಅಕ್ಷರ ಗಾತ್ರ

ಮೈಸೂರು: ಬಹಿರಂಗ ಪ್ರಚಾರ ಅಂತ್ಯಗೊಂಡ ಬೆನ್ನಲ್ಲೆ ಜಿಲ್ಲೆಯಿಂದ ಬೇರೆ ಬೇರೆ ಊರುಗಳಿಗೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು, ನೌಕರರನ್ನು ಮತದಾನ ಮಾಡುವಂತೆ ರಾಜಕಾರಣಿಗಳು ದೂರವಾಣಿ ಮೂಲಕ ದುಂಬಾಲು ಬೀಳುತ್ತಿದ್ದಾರೆ. ಒಂದು ದಿನದಮಟ್ಟಿಗೆ ಕ್ಷೇತ್ರಕ್ಕೆ ಬಂದು ತಮ್ಮ ಪಕ್ಷದವರಿಗೆ ಮತದಾನ ಮಾಡುವಂತೆ ಓಲೈಸುವ ಕಾರ್ಯ ಆರಂಭವಾಗಿದೆ.

ಈಗಾಗಲೇ ಒಂದೆರಡು ಬಾರಿ ದೂರವಾಣಿ ಮೂಲಕ ಮಾತನಾಡಿರುವ ಪಕ್ಷಗಳ ಬೂತ್‌ಮಟ್ಟದ ಮುಖಂಡರು ಈಗ ಈ ಕಾರ್ಯವನ್ನು ಬಿರುಸುಗೊಳಿಸಿದ್ದಾರೆ. ಮತದಾನದ ದಿನ ಶತಾಯಗತಾಯ ಬರಲೇಬೇಕು ಎಂದು ಸ್ಥಳೀಯ ರಾಜಕಾರಣಿಗಳು ಒತ್ತಾಯಿಸುತ್ತಿದ್ದಾರೆ.

ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಯುವಜನರು ಪಟ್ಟಣಗಳಿಗೆ ವಲಸೆ ಬಂದು ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಒಂದು ಊರಿನಿಂದ ಒಬ್ಬರು ಒಂದು ಕಾರ್ಖಾನೆಗೋ, ಒಂದು ಗ್ರಾರ್ಮೆಂಟ್ಸ್‌ಗೋ ಬಂದರೆಂದರೆ ಮುಗಿಯಿತು. ಕೆಲವೇ ವರ್ಷಗಳಲ್ಲಿ ಇವರ ಹಾದಿಯನ್ನು ಇನ್ನುಳಿದ ನಿರುದ್ಯೋಗಿ ಯುವಕ ಮತ್ತು ಯುವತಿಯರು ತುಳಿಯುತ್ತಾರೆ. ಕನಿಷ್ಠ 10 ಮಂದಿ ಒಂದೇ ಊರಿನಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಸಂಸಾರವನ್ನು ಸೇರಿಸಿದರೇ 25ಕ್ಕೂ ಹೆಚ್ಚು ಮತಗಳನ್ನು ಒಂದೇ ಬಾರಿಗೆ ಸೆಳೆಯಬಹುದು ಎನ್ನುವುದು ರಾಜಕಾರಣಿಗಳ ಲೆಕ್ಕಾಚಾರ.‌

ಮೈಸೂರು ಗ್ರಾಮಾಂತರ, ಹುಣಸೂರು, ತಿ.ನರಸೀಪುರ, ನಂಜನಗೂಡು, ಸರಗೂರು, ಎಚ್.ಡಿ.ಕೋಟೆ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಹೆಚ್ಚಿನವರು ಬೆಂಗಳೂರಿಗೆ ಉದ್ಯೋಗ ಅರಸಿ ಹೋಗಿದ್ದಾರೆ. ಇಲ್ಲೆಲ್ಲ ಗ್ರಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ.

ಪ್ರತಿ ತಿಂಗಳಿಗೊಮ್ಮೆ ಗ್ರಾಮಕ್ಕೆ ಬಂದು ತಾವು ಸೇರಿದರುವ ಸ್ತ್ರೀ ಶಕ್ತಿ ಸಂಘಗಳು, ಪುರುಷರ ಸ್ವಸಹಾಯ ಸಂಘಗಳಲ್ಲಿ ತೆಗೆದುಕೊಂಡಿರುವ ಸಾಲಗಳಿಗೆ ಕಂತು ಪಾವತಿಸುತ್ತಾರೆ. ಇಂತಹ ಸಂಘಗಳಿಂದ ಸಾಲ ಪಡೆಯುವುದಕ್ಕಾಗಿಯಾದರೂ ಇವರು ಮತದಾರರ ಚೀಟಿಯಿಂದ ಹೆಸರನ್ನು ತಾವು ಕೆಲಸ ಮಾಡುವ ಊರಿಗೆ ವರ್ಗಾಯಿಸುವುದಿಲ್ಲ. ಇಂತಹ ವಲಸಿಗರನ್ನು ಸೆಳೆಯುವ ಕಾರ್ಯ ಚುರುಕು ಪಡೆದಿದೆ.

ಬಗೆಬಗೆ ಆಮಿಷಗಳು!
ವಲಸಿಗರು ಬಂದು ಹೋಗುವುದಕ್ಕಾಗಿ ಹಲವು ಅಮಿಷಗಳನ್ನು ಒಡ್ಡಲಾಗುತ್ತಿದೆ. ಬರುವ ಮತ್ತು ಹೋಗುವ ಪ್ರಯಾಣ ಭತ್ಯೆಯನ್ನು ಭರಿಸುವ ಭರವಸೆ ನೀಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಮತಗಳು ಇದ್ದಲ್ಲಿ ಅಂತಹ ಗುಂಪಿಗೆ ಕೆಲವೊಂದು ಗೃಹೋಪಯೋಗಿ ವಸ್ತುಗಳನ್ನು ನೀಡುವ ಆಮಿಷ ಒಡ್ಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT