ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿಬೆಟ್ಟಕ್ಕೆ ಪ್ರಾಧಿಕಾರ; ಹೆಚ್ಚಿದ ಕೂಗು

ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆ ಸಾಧ್ಯತೆ
Last Updated 13 ಜುಲೈ 2022, 13:41 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ವಿಶ್ವವಿಖ್ಯಾತ ಶ್ರದ್ಧಾ ಕೇಂದ್ರವಾದ ಚಾಮುಂಡಿ ಬೆಟ್ಟಕ್ಕೊಂದು ಪ್ರತ್ಯೇಕ ಪ್ರಾಧಿಕಾರದ ಅಗತ್ಯವಿದೆ ಎಂಬ ಕೂಗು ಬಲವಾಗಿ ಕೇಳಿಬಂದಿದೆ.

ಶಾಸಕ ಜಿ.ಟಿ. ದೇವೇಗೌಡ ಅವರು, ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ಒಕ್ಕೊರಲ ಆಗ್ರಹ ಕೇಳಿಬರುತ್ತಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅದಕ್ಕೆ ಸಂಸದ ಪ್ರತಾಪ ಸಿಂಹ ಮೊದಲಾದವರು ಕೂಡ ದನಿಗೂಡಿಸಿದ್ದಾರೆ. ಇದರೊಂದಿಗೆ ಪ್ರಾಧಿಕಾರದ ಚರ್ಚೆಯು ಮತ್ತಷ್ಟು ಮುನ್ನೆಲೆಗೆ ಬಂದಿದೆ.

ಬೆಟ್ಟವನ್ನು ಬೆಟ್ಟವನ್ನಾಗಿಯೇ ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತ್ವರಿತವಾಗಿ ಕೈಗೊಳ್ಳುವುದಕ್ಕೆ ಪೂರಕವಾದ ವ್ಯವಸ್ಥೆಯನ್ನು ಪ್ರಾಧಿಕಾರ ಹೊಂದಿರಬೇಕು ಎನ್ನುವುದು ಪ್ರಜ್ಞಾವಂತರ ಒತ್ತಾಯವಾಗಿದೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದ ಅಭಿವೃದ್ಧಿ ಮತ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲು ರಚಿಸಿದಂತೆ ಇಲ್ಲೂ ಸ್ವತಂತ್ರವಾದ ಶಾಸನಬದ್ಧ ಪ್ರಾಧಿಕಾರ ಬೇಕು ಎನ್ನುವುದು ಆಗ್ರಹವಾಗಿದೆ. ಚಾಮುಂಡಿ ಬೆಟ್ಟ ಉಳಿಸಿ ಸಮಿತಿಯೂ ದನಿಗೂಡಿಸಿದೆ. ಈ ವಿಷಯವು ಶೀಘ್ರದಲ್ಲೇ ನಡೆಯಲಿರುವ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯೂ ಇದೆ.

ತ್ವರಿತವಾಗಿ ಸ್ಪಂದಿಸಲು

‘ಚಾಮುಂಡಿ ಬೆಟ್ಟಕ್ಕೆ ತನ್ನದೇ ಆದ ಆರ್ಥಿಕ ಸಂಪನ್ಮೂಲವಿದೆ. ವರಮಾನವೂ ಬರುತ್ತಿದೆ. ಹೀಗಿದ್ದರೂ ಏನಾದರೂ ಕೆಲಸ ಕೈಗೊಳ್ಳುವುದಕ್ಕೆ ಸ್ವತಂತ್ರವಾಗಿ ನಿರ್ಧಾರ ಮಾಡುವುದು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಸರ್ಕಾರದ ಹಂತದಲ್ಲಿಯೇ ಚರ್ಚೆಯಾಗಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸಲು ಸ್ವತಂತ್ರ ಅಸ್ತಿತ್ವವನ್ನು ಪ್ರಾಧಿಕಾರದ ಮೂಲಕ ಕಲ್ಪಿಸಬೇಕು ಎನ್ನುವುದು ನನ್ನ ಒತ್ತಾಯವಾಗಿದೆ’ ಎನ್ನುತ್ತಾರೆ ಜಿ.ಟಿ. ದೇವೇಗೌಡರು.

‘ಅಭಿವೃದ್ಧಿಯೊಂದಿಗೆ ಸಂರಕ್ಷಣೆಗೂ ಗಮನ ನೀಡಬಹುದಾಗಿದೆ. ಬೆಟ್ಟದಲ್ಲಿ ನಂದಿ ಮಾರ್ಗದ ರಸ್ತೆಯಲ್ಲಿ ಮಣ್ಣು ಕುಸಿದಿತ್ತು. ಇದಾಗಿ ಹಲವು ತಿಂಗಳುಗಳೇ ಕಳೆದಿದ್ದರೂ ದುರಸ್ತಿಗೆ ಕ್ರಮವಾಗಲಿಲ್ಲ. ಈಚೆಗೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಪ್ರಾಧಿಕಾರ ರಚನೆಯಾದಲ್ಲಿ ಇಂತಹ ವಿಳಂಬಗಳನ್ನು ತಪ್ಪಿಸಬಹುದು. ಪ್ರಾಧಿಕಾರದ ಸಭೆಯಲ್ಲೇ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದು. ಪ್ರಾಧಿಕಾರದಲ್ಲಿ ಸರ್ಕಾರದ ಪ್ರತಿನಿಧಿಗಳೊಂದಿಗೆ ಸ್ಥಳೀಯ ಪರಿಸರ ಪ್ರೇಮಿಗಳು, ಸಂಘ–ಸಂಸ್ಥೆಗಳ ಪ್ರಮುಖರನ್ನೂ ಒಳಗೊಳಿಸಿಕೊಳ್ಳಬೇಕು. ಇದರಿಂದ ಸ್ವತಂತ್ರ ಅಸ್ತಿತ್ವವನ್ನು ನೀಡಿದಂತಾಗುತ್ತದೆ. ಹಾನಿಯಾದಾಗ ತಕ್ಷಣಕ್ಕೆ ಸ್ಪಂದಿಸಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಬೆಟ್ಟವಿರುವುದು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದಕ್ಕಲ್ಲ. ಅಲ್ಲಿಗೆ ಭಕ್ತರಷ್ಟೆ ಬರುತ್ತಾರೆ. ಆದ್ದರಿಂದ ಅದನ್ನು ಧಾರ್ಮಿಕ ತಾಣವನ್ನಾಗಿಯೇ ಉಳಿಸಿಕೊಳ್ಳಲು ನಿಯಮಿತವಾಗಿ ಚರ್ಚಿಸಿ ಕ್ರಮ ವಹಿಸುವ ಕೆಲಸವನ್ನು ಪ್ರಾಧಿಕಾರದಲ್ಲಿ ಮಾಡಬೇಕಾಗುತ್ತದೆ’ ಎನ್ನುತ್ತಾರೆ ಅವರು.

ಹಲವು ಏಜೆನ್ಸಿಗಳ ಬದಲಿಗೆ

ಬೆಟ್ಟವು ಸದ್ಯ ಮುಜರಾಯಿ ಇಲಾಖೆಗೆ ಸೇರಿದೆ. ಬೆಟ್ಟದ ಆಡಳಿತವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ಪ್ರವಾಸೋದ್ಯಮ ಇಲಾಖೆಗೂ ಸೇರುತ್ತದೆ. ಹೀಗೆ... ಹಲವು ಏಜೆನ್ಸಿಗಳು ನಿರ್ವಹಣೆ ಮಾಡುತ್ತಿರುವುದರಿಂದ ಸಮನ್ವಯದ ಕೊರತೆ ಉಂಟಾಗುತ್ತಿದೆ. ಇದು ತಪ್ಪುವಂತಾಗಬೇಕು. ಇಡೀ ನಿಯಂತ್ರಣವು ಒಂದು ಆಡಳಿತದ ವ್ಯಾಪ್ತಿಗೆ ಬರಬೇಕು. ಬೆಟ್ಟದ ಸಮಗ್ರ ನಿರ್ವಹಣೆ ನಿಟ್ಟಿನಲ್ಲಿ ಪ್ರಾಧಿಕಾರ ಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಬೆಟ್ಟದಲ್ಲಿ ಕಟ್ಟಡಗಳನ್ನು ಕಟ್ಟುವುದರಿಂದ ತುಂಬಾ ಅಪಾಯಕಾರಿಯಾಗಿದೆ. ಅದನ್ನು ತಡೆಯುವ ಕೆಲಸವೂ ಆಗಬೇಕು. ಬೇಲಿ ಹಾಕಬೇಕು. ಮಳೆ ನೀರು ಸಂಗ್ರಹಕ್ಕೂ ಕ್ರಮ ವಹಿಸಬೇಕು.

ಪರಶುರಾಮೇಗೌಡ, ಸಂಸ್ಥಾಪಕ ಸದಸ್ಯ, ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಸಮಿತಿ, ಮೈಸೂರು

ಏನು ಮಾಡಬಾರದೆನ್ನುವುದೂ ಇರಬೇಕು

ಬೆಟ್ಟಕ್ಕೆ ಶಾಸನಬದ್ಧ ಪ್ರಾಧಿಕಾರ ಅಗತ್ಯವಿದೆ. ಇದನ್ನು ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ಆ ಕಾನೂನಿನಲ್ಲಿ ಬೆಟ್ಟದಲ್ಲಿ ಏನೇನು ಮಾಡಬೇಕು, ಏನೇನು ಮಾಡಬಾರದು ಎನ್ನುವುದನ್ನು ಸ್ಪಷ್ಟವಾಗಿ ಬರೆದಿರಬೇಕು. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಕೆಲಸವೂ ನಡೆಯಬೇಕು. ಪ್ರವಾಸಿ ತಾಣವಾಗಿಸುವ ಅಥವಾ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ಕೊಡುವ ಅಭಿವೃದ್ಧಿ ಆಗಬಾರದು. ಬೆಟ್ಟವನ್ನು ಪ್ರಾಕೃತಿಕವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ ರಚನಾತ್ಮಕ ಚಟುವಟಿಕೆಗಳಿಗೆ ಅವಕಾಶ ಇರಬೇಕು.

ಸುಧೀರ್‌ ಒಂಬತ್ಕೆರೆ,ನಿವೃತ್ತ ಮೇಜರ್‌ ಜನರಲ್‌, ಮೈಸೂರು

ಸಭೆಯಲ್ಲಿ ಪ್ರಸ್ತಾವ

ಚಾಮುಂಡಿ ಬೆಟ್ಟಕ್ಕೆ ಪ್ರತ್ಯೇಕ ಪ್ರಾಧಿಕಾರದ ಬಗ್ಗೆ ಜಿ.ಟಿ. ದೇವೇಗೌಡರು ಸೇರಿದಂತೆ ಹಲವರು ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉನ್ನತ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು.

–ಎಸ್‌.ಟಿ. ಸೋಮಶೇಖರ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT