ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಂದರೆ, ಕಿರುಕುಳ ತಪ್ಪಿಸಿ, ಸೌಲಭ್ಯ ಕಲ್ಪಿಸಿ: ಅಲ್ಪಸಂಖ್ಯಾತರ ಆಗ್ರಹ

Last Updated 24 ಆಗಸ್ಟ್ 2022, 10:50 IST
ಅಕ್ಷರ ಗಾತ್ರ

ಮೈಸೂರು: ಜಾತಿ–ಆದಾಯ ಪ್ರಮಾಣಪತ್ರ, ವಿದ್ಯಾರ್ಥಿವೇತನ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕು. ಪ್ರತ್ಯೇಕ ಸ್ಮಶಾನ ಭೂಮಿ ಒದಗಿಸಬೇಕು. ಸೌಲಭ್ಯಕ್ಕಾಗಿ ಅಲೆದಾಡಿಸಬಾರದು. ಪಾಸ್ಟರ್‌ಗಳಿಗೆ ಕಿರುಕುಳ ಕೊಡುವುದನ್ನು ತಡೆಯಬೇಕು. ಬಸದಿಗಳ ಗಡಿ ಸಮೀಕ್ಷೆ ನಡೆಸಿ ರಕ್ಷಿಸಬೇಕು. ತಾಲ್ಲೂಕುಗಳಲ್ಲಿ ಕ್ರೈಸ್ತರಿಗೆ ಸಮುದಾಯ ಭವನ ನಿರ್ಮಿಸಬೇಕು.

– ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಇಲ್ಲಿನ ಜಿ.ಪಂ ಸಭಾಂಗಣದಲ್ಲಿ ಬುಧವಾರ ನಡೆಸಿದ ‘ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗೆ ಕೋಮು ಸೌಹಾರ್ದ ಸಭೆ’ಯಲ್ಲಿ ಕೇಳಿಬಂದ ಒತ್ತಾಯಗಳಿವು.

ಹಲವು ಕುಂದುಕೊರತೆಗಳನ್ನು ಮಂಡಿಸಿದ ಅಲ್ಪಸಂಖ್ಯಾತರು ಅವುಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.

ಚಾಮುಂಡೇಶ್ವರಿ ದೇಗುಲ ಜೈನರದ್ದು:

ಜೈನ ಸಮುದಾಯದ ಮುಖಂಡ ಸುರೇಶ್‌ಕುಮಾರ್‌ ಜೈನ್ ಮಾತನಾಡಿ, ‘ಜೈನರಲ್ಲಿ ದಿಗಂಬರ ಹಾಗೂ ಶ್ವೇತಾಂಬರರಲ್ಲಿ ಉಪಜಾತಿಗಳಿವೆ. ಆದರೆ, ಅದು ನಮೂದಾಗುತ್ತಿಲ್ಲ. ಆದ್ದರಿಂದ, ಜನಗಣತಿ ನಮೂನೆಯಲ್ಲೇ ಉಪ ಜಾತಿಗಳನ್ನು ನಮೂದಿಸಬೇಕು. ದಿಗಂಬರ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮೈಸೂರಿನಲ್ಲಿ ಜೈನರಿಗೆ ಪ್ರತ್ಯೇಕ ಸ್ಮಶಾನ ಭೂಮಿ ಇಲ್ಲ. ಸರ್ಕಾರದಿಂದ ಜಾಗ ಒದಗಿಸಿದರೆ, ಸಮಾಜದಿಂದಲೇ ನಿರ್ವಹಣೆ ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

‘ಜೈನರ ಬಸದಿ, ದೇವಸ್ಥಾನ ಮೊದಲಾದ ಆಸ್ತಿಗಳ ಗಡಿ ಸಮೀಕ್ಷೆ ನಡೆಸಬೇಕು. ಎಷ್ಟೋ ಜಾಗಗಳು ನಮಗೇ ಸೇರಿದ್ದರೂ ಬಹುಸಂಖ್ಯಾತರ ಮುಂದೆ ನಾವು ಮಾತನಾಡಲಾಗದ ಸ್ಥಿತಿ ಇದೆ. ಚಾಮುಂಡಿಬೆಟ್ಟದ ದೇವಸ್ಥಾನ ಜೈನರಿಗೆ ಸೇರಿದ್ದು. ಹೀಗೆ ಅನೇಕ ನಿದರ್ಶನಗಳಿವೆ’ ಎಂದರು.

ಸಮೀಕ್ಷೆಗೆ ಸೂಚನೆ:

ಪ್ರತಿಕ್ರಿಯಿಸಿದ ಅಧ್ಯಕ್ಷ ಅಜೀಂ, ‘ಜನಗಣತಿ ನಮೂನೆಯಲ್ಲಿ ಉಪ ಜಾತಿ ನಮೂದಿಸುವಂತೆ ಸೂಚಿಸಲಾಗುವುದು. ಸ್ಮಶಾನಗಳಿಗೆ ಜಾಗ ಕೊಡಬೇಕು. ಇಲ್ಲದಿದ್ದರೆ ಖರೀದಿಸಿಕೊಡಬೇಕು ಎಂದು ತಹಶೀಲ್ದಾರ್‌ಗಳಿಗೆ ಸರ್ಕಾರ ಆದೇಶಿಸಿದೆ. ಬಸದಿಗಳ ಗಡಿ ಸಮೀಕ್ಷೆಗೂ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಬೌದ್ಧ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಆಹಾರ ಅನುದಾನ ಒದಗಿಸಬೇಕು. ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯಲ್ಲಿ ಸ್ಥಳೀಯರು ಅತಿ ವೇಗದಿಂದ ವಾಹನ ಚಲಾಯಿಸುತ್ತಾರೆ. ಇದರಿಂದ ಅನಾಹುತಗಳು ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಟಿಬೆಟಿಯನ್ ನಿರಾಶ್ರಿತರ ಕ್ಯಾಂಪ್‌ನ ಪ್ರತಿನಿಧಿಗಳು ಕೋರಿದರು.

‘ಮೈಸೂರಿನ ಮಹಾಬೋಧಿ ಶಾಲೆಯಲ್ಲಿ ಸದ್ಯ ಎಸ್ಸೆಸ್ಸೆಲ್ಸಿವರೆಗಷ್ಟೆ ಶಿಕ್ಷಣ ನೀಡಲಾಗುತ್ತಿದೆ. ಅಲ್ಲಿ 17 ರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರು ಎಸ್ಸೆಸ್ಸೆಲ್ಸಿ ನಂತರ ನಮ್ಮಲ್ಲಿ ಶಿಕ್ಷಣ ಮುಂದುವರಿಸಲಾಗುತ್ತಿಲ್ಲ. ಇದರಿಂದ ಮೊಟಕುಗೊಳಿಸುವವರೇ ಅಧಿಕ. ಇದನ್ನು ತಪ್ಪಿಸಲು ಪಿಯು ಹಾಗೂ ಪದವಿ ಶಿಕ್ಷಣ ಒದಗಿಸಲು ಅವಕಾಶ ಕಲ್ಪಿಸಬೇಕು. ವಿದ್ಯಾರ್ಥಿವೇತನಕ್ಕೆ ಅಲ್ಪಸಂಖ್ಯಾತರ ಪ್ರಮಾಣಪತ್ರ ಪಡೆಯಲು ಇರುವ ತೊಡಕುಗಳನ್ನು ನಿವಾರಿಸಬೇಕು’ ಎಂದು ಒತ್ತಾಯಿಸಿದರು.

ಅನುದಾನ ಒದಗಿಸಿ:

‘ಮೈಸೂರಿನ ಗುರುದ್ವಾರದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು’ ಎಂದು ಸಿಖ್‌ ಮುಖಂಡರು ಕೋರಿದರು.

‘ಮತಾಂತರ ನಿಷೇಧ ಕಾಯ್ದೆ ಜಾರಿಯಾದ್ದರಿಂದ ನಮಗೆ ಬಹಳ ತೊಂದರೆಯಾಗಿದೆ. ಇಬ್ಬರು ಪಾಸ್ಟರ್‌ಗಳು ಮಾತನಾಡುತ್ತಿದ್ದರೆ, ಪ್ರಾರ್ಥನೆ ಮಾಡುತ್ತಿದ್ದರೆ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಕಿರುಕುಳ ಕೊಡಲಾಗುತ್ತಿದೆ. ಇದನ್ನು ತಡೆಯಬೇಕು’ ಎಂದು ಪಾಸ್ಟರ್‌ಗಳು ಮನವಿ ಮಾಡಿದರು.

‘ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಆಯೋಗ ಮೊದಲಾದ ಕಚೇರಿಗಳಲ್ಲಿ ಒಂದು ಧರ್ಮದವರಷ್ಟೆ ಅಧಿಕಾರಿಗಳು ಹಾಗೂ ನೌಕರರು ಇರುತ್ತಾರೆ. ಕ್ರೈಸ್ತ, ಜೈನ, ಸಿಖ್, ಪಾರ್ಸಿ ಮೊದಲಾದವರ ಪ್ರಾತಿನಿಧ್ಯ ಸಿಕ್ಕಿಲ್ಲ. ಅಧ್ಯಕ್ಷರ ನೇಮಕದ ವಿಚಾರದಲ್ಲೂ ಹೀಗೆಯೇ ಆಗಿದೆ. ಆವರ್ತನ ರೀತಿಯಲ್ಲಿ ಅವಕಾಶ ದೊರೆಯಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳ ವಿಷಯದಲ್ಲೂ ಹೀಗೆಯೇ ಆಗಬೇಕು’ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಅನಿಲ್‌ ಥಾಮಸ್‌ ಒತ್ತಾಯಿಸಿದರು.

ಲಂಚ ಮುಕ್ತಗೊಳಿಸಿ:

‘ನಿಸ್ವಾರ್ಥ ಸೇವೆ ಮಾಡುತ್ತಿರುವ ಕ್ರೈಸ್ತ ಸಂಘ–ಸಂಸ್ಥೆಗಳವರು ಸೌಲಭ್ಯ ಪಡೆಯಬೇಕಾದರೆ ಕಚೇರಿಗಳಿಗೆ ಅಲೆಯಬೇಕಾದ ಸ್ಥಿತಿ ಇದೆ. ಇದು ತಪ್ಪಬೇಕು. ನಿಸ್ವಾರ್ಥ ಸೇವೆಯನ್ನು ಅಗೌರವಿಸದೆ ಅಧಿಕಾರಿಗಳೇ ಹೋಗಿ ಸೌಲಭ್ಯ ಕಲ್ಪಿಸುವಂತಾಗಬೇಕು. ಈಗಿನದ್ದು ಬಿಜೆಪಿ ಸರ್ಕಾರ, ಕ್ರೈಸ್ತರಿಗೆ ಆದ್ಯತೆ ಕೊಡಲಾಗುವುದಿಲ್ಲ ಎನ್ನುವ ಉತ್ತರವನ್ನು ಅಧಿಕಾರಿಯೊಬ್ಬರು ನೀಡಿದ್ದಾರೆ. ಇಂಥದ್ದು ಸರಿಯಲ್ಲ. ಕಚೇರಿಗಳನ್ನು ಲಂಚದಿಂದ ಮುಕ್ತಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಸಮಸ್ಯೆಗಳಿದ್ದಲ್ಲಿ ನೇರವಾಗಿ ಆಯೋಗದ ಕಚೇರಿ ಸಂಪರ್ಕಿಸಬೇಕು. ಸೌಹಾರ್ದ ಕಾಪಾಡಿಕೊಳ್ಳಬೇಕು. ಪೊಲೀಸ್ ಭದ್ರತೆ ಬೇಕಿದ್ದಲ್ಲಿ ನೇರವಾಗಿ ನನ್ನನ್ನೇ ಸಂಪರ್ಕಿಸಿ’ ಎಂದು ಅಧ್ಯಕ್ಷ ಅಜೀಂ ಕೋರಿದರು.

ಆಯೋಗದ ಕಾರ್ಯದರ್ಶಿ ಸಲ್ಮಾ ಫಿರ್ದೋಸ್ ಇದ್ದರು.

ಕುಂದು ಕೊರತೆಗಳು...

* ಮೈಸೂರಿನ ಜಾಕಿ ಕ್ವಾರ್ಟಸ್‌ನಲ್ಲಿರುವ ಮಸೀದಿಗೆ ಹೊರಗಿನವರು ಬರಬಾರದು. ಇದು ಅಶ್ವಾರೋಹಿ ದಳಕ್ಕೆ ಸೇರಿದ್ದು ಎನ್ನುತ್ತಿದ್ದಾರೆ. ನವೀಕರಣಕ್ಕೂ ಅಡ್ಡಿಪಡಿಸುತ್ತಿದ್ದಾರೆ. ವಕ್ಫ್‌ ಬೋರ್ಡ್‌ ಹೆಸರಲ್ಲಿದ್ದರೂ ತೊಂದರೆ ಕೊಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.

* ಕೃಷ್ಣರಾಜ ಕ್ಷೇತ್ರದಲ್ಲಿ 18ಸಾವಿರ ಮುಸ್ಲಿಮರಿದ್ದು, ಕೇವಲ ಇಬ್ಬರಿಗೆ ಮಾತ್ರವೇ ಸರ್ಕಾರದಿಂದ ಸಹಾಯಧನ ಸಿಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸಬೇಕು.

* ಮುಸ್ಲಿಮರು ಜಾತಿ, ಆದಾಯ ಪ್ರಮಾಣಪತ್ರ ಕೇಳಿದರೆ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಕೇಳುವುದು ಅವೈಜ್ಞಾನಿಕವಾಗಿದ್ದು, ಇದರಿಂದ ಆಗುತ್ತಿರುವ ತೊಂದರೆ ನಿವಾರಿಸಬೇಕು.

* ವಿದ್ಯಾರ್ಥಿವೇತನಕ್ಕೆ ಬ್ಯಾಂಕ್‌ ಖಾತೆ ಮಾಡಿಸುವಾಗಲೂ ₹ 1ಸಾವಿರ ಠೇವಣಿ ಇಡಬೇಕು ಎನ್ನಲಾಗುತ್ತಿದೆ. ಪ್ಯಾನ್‌ ಕಾರ್ಡ್‌ ಕೇಳಲಾಗುತ್ತಿದೆ. ಈ ಸಮಸ್ಯೆ ನಿವಾರಿಸಬೇಕು. ಶಿಕ್ಷಣ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕು. ಸಾಲ ಪಡೆಯುವಾಗ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT