ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಿಸಲು ಆಗ್ರಹ

ಡಿ. 8ರಂದು ವಿಧಾನಸೌಧದ ಎದುರು ಪ್ರತಿಭಟನೆಗೆ ನಿರ್ಧಾರ– ಕುರುಬೂರು ಶಾಂತಕುಮಾರ್
Last Updated 2 ಡಿಸೆಂಬರ್ 2020, 10:33 IST
ಅಕ್ಷರ ಗಾತ್ರ

ಮೈಸೂರು: ಪ್ರತಿ ಟನ್‌ ಕಬ್ಬಿಗೆ ಈಗ ₹ 2,850 ಎಫ್‌ಆರ್‌ಪಿ ದರ ನಿಗದಿ ಮಾಡಲಾಗಿದೆ. ಇದನ್ನು ₹ 3,300ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಡಿ.8ರಂದು ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಇಲ್ಲಿಯವರೆಗೂ ಕಾಯದೇ ಬೇಡಿಕೆ ಈಡೇರಿಸಬೇಕು ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕೇಂದ್ರ ಸರ್ಕಾರ ನವದೆಹಲಿ ಸಮೀಪ ನಡೆಯುತ್ತಿರುವ ಪ್ರತಿಭಟನೆ ಕುರಿತು ನಿರ್ಲಕ್ಷ್ಯ ವಹಿಸಬಾರದು. ಮಾತುಕತೆಯಲ್ಲಿ ಚೌಕಾಸಿ ಮಾಡಬಾರದು. ಯಾವುದೇ ಪೂರ್ವಷರತ್ತುಗಳಿಲ್ಲದೇ ಮಾತುಕತೆ ನಡೆಸಿ, ಎಲ್ಲರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.‌

ಒಂದು ವೇಳೆ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸದೇ ಹೋದರೆ ರಾಜ್ಯದಲ್ಲಿ ‘ಜೈಲ್ ಭರೊ’ ಚಳವಳಿ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ಗುರುವಾರ ನಡೆಯಲಿರುವ ಮಾತುಕತೆಯನ್ನು ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದರು.

ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಕೇಂದ್ರ ಸರ್ಕಾರ ವ್ಯಾಪಾರಿ ಸಂಸ್ಥೆಯಂತಾಗಿದೆ. ರೈತರ ವಿಷಯದಲ್ಲಿ ಮರಣ ಶಾಸನಗಳನ್ನು ಜಾರಿಗೊಳಿಸುತ್ತಿದೆ ಎಂದು ಕಿಡಿಕಾರಿದರು.

ನಿಜಕ್ಕೂ ರೈತರ ಪ್ರತಿಭಟನೆಗಳು ಪ್ರಧಾನಿ ಮೋದಿಗೆ ಎಚ್ಚರಿಕೆ ಗಂಟೆಯಂತಿದೆ. ಇನ್ನಾದರೂ ಅರ್ಥ ಮಾಡಿಕೊಳ್ಳದೇ ಹೋದರೆ ಮುಂದೆ ಅವರ ಪಾಲಿಗೆ ದುರ್ದಿನಗಳು ಕಾದಿವೆ ಎಂದು ಎಚ್ಚರಿಕೆ ನೀಡಿದರು.

ಸಂಸದರು, ಶಾಸಕರು ರೈತರ ಪರ ದನಿ ಎತ್ತಿಲ್ಲ. ಇವರೇನು ಕಿವುಡರಾ, ಕುರುಡರಾ ಎಂದು ಪ್ರಶ್ನಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ರೈತ ಚಳವಳಿಯನ್ನು ಹಗುರವಾಗಿ ಟೀಕಿಸುವುದು ಯಾರಿಗೂ ಶೋಭೆ ತರುವಂತದ್ದಲ್ಲ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಹಾಗೂ ಗಳಿಗರಹುಂಡಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT