ದೀಪಾವಳಿಗೆ ಖರೀದಿ ಭರಾಟೆ

7
ಬಗೆಬಗೆ ಹಣತೆಗಳು ಮಾರಾಟಕ್ಕೆ, ಅಂಗಡಿಗಳಲ್ಲಿ ಭಾರಿ ರಿಯಾಯಿತಿ

ದೀಪಾವಳಿಗೆ ಖರೀದಿ ಭರಾಟೆ

Published:
Updated:
Deccan Herald

ಮೈಸೂರು: ದೀಪಗಳ ಹಬ್ಬ ದೀಪಾವಳಿಗೆ ಭರ್ಜರಿ ಸಿದ್ಧತೆ ನಡೆದಿದೆ. ಬಗೆಬಗೆ ವಿನ್ಯಾಸದ ಹಣತೆಗಳು ಮಾರುಕಟ್ಟೆಗೆ ಬಂದಿವೆ. ಅವುಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ.

ತುಳಸಿಕಟ್ಟೆ ಆಕಾರದ ದೀಪಗಳು, ವಿವಿಧ ಬಗೆಯ ಹಣತೆಗಳು, ಲ್ಯಾಂಪ್‌ಗಳಿಗೆ ದರ ಹೆಚ್ಚಿದೆ. ಇದರ ಜತೆಗೆ, ಗಾಳಿಯಿಂದ ದೀಪವು ಆರಿ ಹೋಗದಂತೆ ಮಣ್ಣಿನ ಮುಚ್ಚಳ ಇರುವ ದೀಪಗಳಿಗೂ ಹೆಚ್ಚಿನ ದರ ಇದೆ. ಇನ್ನು ಸಾಮಾನ್ಯ ಹಣತೆಗಳು ಅಗ್ಗವಾಗಿಯೇ ಲಭ್ಯವಾಗುತ್ತಿವೆ. ಇವುಗಳ ಆಕಾರ, ವಿನ್ಯಾಸಕ್ಕೆ ತಕ್ಕಂತೆ ಬೆಲೆ ಇದೆ.

ಬಹುತೇಕ ಕಡೆ ಮಣ್ಣಿನ ಹಣತೆಗಳು ಸಿಗುತ್ತಿವೆ. ಕೆಲವೆಡೆ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ನಿಂದ ತಯಾರಿಸಿದ ಹಣತೆಗಳೂ ಮಾರಾಟಕ್ಕಿವೆ. ಗೂಡಿನಾಕಾರದ ದೀಪಗಳು, ಕಂಬಗಳಿರುವ ಎತ್ತರದ ಹಣತೆಗಳು, ಗಾಜಿನ ಬುರುಡೆ ಇರುವ, ಮಣ್ಣಿನ ಬುರುಡೆ ಹೊಂದಿರುವ ದೀಪಗಳು, ದೊಡ್ಡದಾದ ಹಣತೆಗಳು ಕಣ್ಮನ ಸೆಳೆಯುತ್ತಿವೆ.

ಶಿವರಾಮಪೇಟೆ ಸೇರಿದಂತೆ ನಗರದ ಅಲ್ಲಲ್ಲಿ ಗೂಡುದೀಪಗಳು ಮಾರಾಟಕ್ಕಿವೆ. ಮನೆಯ ಹೊರಾಂಗಣ ಹಾಗೂ ಹಜಾರದಲ್ಲಿ ಇಂಥ ದೀಪಗಳನ್ನು ತೂಗುಹಾಕಿ ಅದರ ಒಳಗೆ ವಿದ್ಯುತ್ ಬಲ್ಬ್‌ಗಳನ್ನು ಹಾಕಬಹುದಾಗಿದೆ.

ಆಕಾಶಬುಟ್ಟಿಗಳ ಮಾರಾಟವೂ ಚುರುಕು ಪಡೆದಿದೆ. ದೀಪ ಉರಿಸಿ ಪ್ಯಾರಾಚೂಟ್‌ನಂತೆ ಆಕಾಶದಲ್ಲಿ ಹಾರಿ ಬಿಡುವಂತಹ ಇವುಗಳು ಮಹಿಳೆಯರಿಗೆ, ಯುವತಿಯರಿಗೆ ಅಚ್ಚುಮೆಚ್ಚು. ಹೆಚ್ಚಾಗಿ ಮಹಿಳೆಯರು ಇವುಗಳ ಖರೀದಿಯಲ್ಲಿ ತೊಡಗಿದ್ದರು.

ಒಂದೆಡೆ ದೀಪಗಳ ಖರೀದಿ ಭರಾಟೆ ಇದ್ದರೆ ಮತ್ತೊಂದೆಡೆ ಪಟಾಕಿಗಳ ಖರೀದಿಯೂ ನಿಧಾನವಾಗಿ ಚುರುಕು ಪಡೆಯುತ್ತಿದೆ. ಜೆ.ಕೆ.ಮೈದಾನ, ಜೆಎಲ್‌ಬಿ ರಸ್ತೆ ಸೇರಿದಂತೆ ನಗರದ ಕೆಲವೇ ಕಡೆ ಪಟಾಕಿ ಮಾರಾಟ ಮಾಡುವ ಮಳಿಗೆಗಳು ಇವೆ. ಇಲ್ಲಿ ಸೋಮವಾರ ಸಂಜೆ ವಹಿವಾಟು ಗರಿಗೆದರಿತ್ತು.

ಎಲೆಕ್ಟ್ರಾನಿಕ್ಸ್ ಹಾಗೂ ಜವಳಿ ಅಂಗಡಿಗಳಲ್ಲಿ ಭರ್ಜರಿ ರಿಯಾಯಿತಿಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ತೀವ್ರ ಪೈಪೋಟಿಯೇ ನಡೆದಿದೆ. ಮಾಲ್‌ಗಳಲ್ಲಿ, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಾರಾಟ ಮಾಡುವ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಭಾರಿ ರಿಯಾಯಿತಿಗಳನ್ನು ವಿವಿಧ ವಸ್ತುಗಳಿಗೆ ನೀಡಲಾಗಿದೆ. ವಹಿವಾಟು ಕಳೆಗಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !