ಶನಿವಾರ, ಆಗಸ್ಟ್ 17, 2019
24 °C
‘ಡ್ರಾಮಾ ಮಾಸ್ಟರ್’ ಎಂದೇ ಖ್ಯಾತಿ ಪಡೆದ ದೇಸಿ ಸಾಧಕ

ನಾಟಕದ ಮೇಷ್ಟ್ರಾದ ಕೃಷಿಕ

Published:
Updated:
Prajavani

ಬಿಳಿಕೆರೆ: ದನ ಮೇಯಿಸುವುದು, ಕೃಷಿ ಚಟುವಟಿಕೆ ಜೊತೆಗೆ ಸಂಗೀತ ಕಲಿತು, ನಾಟಕವನ್ನು ನಿರ್ದೇಶನ ಮಾಡುವ ಮೂಲಕ ಹೋಬಳಿಯಲ್ಲಿ ಉತ್ತಮ ಕಲಾವಿದರಾಗಿ ಹೆಸರು ಪಡೆದವರು ಪಿ.ಕಾಳನಾಯಕ.

‘ಡ್ರಾಮಾ ಮಾಸ್ಟರ್’ ಎಂದು ಜನಪ್ರಿಯರಾದ ಇವರು, ಓದಿದ್ದು 4ನೇ ತರಗತಿ. ದನ ಮೇಯಿಸುತ್ತಿದ್ದ ಕಾಳನಾಯಕ, ನಂತರ ವ್ಯವಸಾಯ ಮಾಡತೊಡಗಿದರು. ಇದರ ಮಧ್ಯೆ, ಸಂಗೀತ ಕಲಿತು ನಾಟಕವನ್ನೂ ಕಲಿಸುವಷ್ಟರಮಟ್ಟಿಗೆ ಬೆಳೆದದ್ದು ಅವರ ಸಾಧನೆ.

ಬಿಳಿಕೆರೆ ಗ್ರಾಮದಲ್ಲಿ ಪುಟ್ಟ ನಾಯಕ ಮತ್ತು ಸಿದ್ದಮ್ಮ ಅವರ ಪುತ್ರನಾಗಿ 1938ರ ಜುಲೈ 1ರಂದು ಜನಿಸಿದ ಇವರು, ಕೂಲಿ ಮಠದಲ್ಲಿ 4ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. ಕೌಟುಂಬಿಕ ಕಾರಣಗಳಿಂದ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು ದನ ಮೇಯಿಸುವ ಕೆಲಸದಲ್ಲಿ ತೊಡಗಿಕೊಂಡರು. ಜತೆಗೆ, ಬೇಸಾಯ ವನ್ನೂ ಮಾಡತೊಡಗಿದರು. ಆದರೆ, ಕಲಿತ ಅಕ್ಷರಗಳನ್ನು ಮಾತ್ರ ಮರೆಯಲಿಲ್ಲ. ತಮ್ಮ ಗ್ರಾಮಕ್ಕೆ ಬಂದ ಸಂಗೀತ ಶಿಕ್ಷಕ ಕೇಶವಮೂರ್ತಿ ಅವರ ಬಳಿ ತೆರಳಿ, ತನಗೆ ಸಂಗೀತ ಕಲಿಸು ವಂತೆ ಕೇಳಿಕೊಂಡರು. ತಮ್ಮ 16ನೇ ವಯಸ್ಸಿನಲ್ಲಿ ಸಂಗೀತ ಕಲಿಯಲು ಆರಂಭಿಸಿದರು.

ಸಂಗೀತ, ನಟನೆಯಲ್ಲಿ ಆಸಕ್ತಿ ಹೊಂದಿದ ಇವರು 1965ರಲ್ಲಿ ಗ್ರಾಮ ದೇವತೆಯ ಹಬ್ಬದ ವಿಶೇಷವಾಗಿ ಮೊದಲ ಬಾರಿಗೆ ‘ದಾನಶೂರ ಕರ್ಣ’ ಎಂಬ ನಾಟಕ ನಿರ್ದೇಶನ ಮಾಡಿದರು. ಇದರಿಂದ ಪ್ರೇರಿತರಾದ ಕಾಳನಾಯಕ ಅವರು ಹುಣಸೂರು ಸೀಮೆಯ
ಹಲವು ಹಳ್ಳಿಗಳಲ್ಲಿ ಶಬರ ಶಂಕರ ವಿಲಾಸ, ಪ್ರಹ್ಲಾದ ಚರಿತೆ, ಸತ್ಯಮೂರ್ತಿ, ಶಿವಭಕ್ತ ಚಂಡಾಸುರ, ಸಂಪೂರ್ಣ ರಾಮಾಯಣ, ದ್ರೌಪದಿ ಸ್ವಯಂವರ ಎಂಬ 65ಕ್ಕೂ ಹೆಚ್ಚು ಜನಪ್ರಿಯ ನಾಟಕಗಳನ್ನು ನಿರ್ದೇಶನ ಮಾಡಿದರು. ನಂತರ, ಆಸ್ತಮಾ ಬೇನೆಗೆ ತುತ್ತಾದ ಇವರು ತಮ್ಮ 75ನೇ ವಯಸ್ಸಿನಲ್ಲಿಯೂ ‘ರಾಮಾಂಜನೇಯ ಯುದ್ಧ’ ನಾಟಕವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ಕುಮಾರ್ ಅರಸೇಗೌಡರ ರಂಗಭೂಮಿ ಕಲಾವಿದರ ಸಂಘದಿಂದ ಅಭಿನಂದನಾ ಫಲಕ ನೀಡಿ ಗೌರವಿಸಲಾಯಿತು. ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ.

ಇಂದಿನ ನಾಟಕಗಳಲ್ಲಿ ಅಶ್ಲೀಲ ಸಂಭಾಷಣೆ

ಪೌರಾಣಿಕ ನಾಟಕಗಳು ಇಂದಿಗೂ ತಮ್ಮ ವರ್ಚಸ್ಸನ್ನು ಕಳೆದುಕೊಂಡಿಲ್ಲ. ಜನರಿಗೆ ಅಲ್ಲಿನ ಪಾತ್ರಗಳ ಮಹತ್ವ ಮತ್ತು ಪ್ರಭಾವ ಬೀರಿಸುವುದು ಮುಖ್ಯವಾಗಿರುತ್ತದೆ. ಕರ್ಣನ ತ್ಯಾಗ, ಕೃಷ್ಣನ ತಾಳ್ಮೆ, ಕೌರವನ ಸ್ನೇಹ ಇವೆಲ್ಲ ಜನರಿಗೆ ಅರ್ಥ ಮಾಡಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು ನಾಟಕದ ಉದ್ದೇಶವಾಗಿರಬೇಕು. ಆದರೆ, ಇಂದು ಕೆಲ ಸಾಮಾಜಿಕ ನಾಟಕಗಳಲ್ಲಿ ಅಶ್ಲೀಲ ಸಂಭಾಷಣೆಗಳೇ ಇರುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಡ್ರಾಮಾ ಮಾಸ್ಟರ್ ಪಿ.ಕಾಳನಾಯಕ.

 

Post Comments (+)