ಶನಿವಾರ, ಅಕ್ಟೋಬರ್ 19, 2019
27 °C
ಐಟಿ ದಾಳಿಗೆ ಜೆಡಿಎಸ್ ವರಿಷ್ಠ

ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರಾ..? ಎಚ್‌.ಡಿ.ದೇವೇಗೌಡ ಗರಂ

Published:
Updated:

ಮೈಸೂರು: ‘ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರಾ..? ಸಾಚಾಗಳಾ..? ಎಲ್ಲರೂ ಪ್ರಾಮಾಣಿಕರಾ..? ಯಾರೂ ತಪ್ಪೇ ಮಾಡಿಲ್ವಾ..?’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಶುಕ್ರವಾರ ಇಲ್ಲಿ ಹರಿಹಾಯ್ದರು.

‘ಪ್ರಧಾನಿ ಮೋದಿ ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲಿಕ್ಕಾಗಿಯೇ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಇಲಾಖೆ ನಡೆಸಿರುವ ದಾಳಿಗೆ ಮಾಜಿ ಪ್ರಧಾನಮಂತ್ರಿ ಕಟುವಾಗಿ ಪ್ರತಿಕ್ರಿಯಿಸಿದರು.

‘ಇದೊಂದು ರಾಜಕೀಯ ಪ್ರೇರಿತ ದಾಳಿ. ತಮ್ಮ ಹಿತಕ್ಕಾಗಿಯೇ ಮೋದಿ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ದೇವೇಗೌಡ ದೂರಿದರು.

‘ಕಾಂಗ್ರೆಸ್‌ ಮುಖಂಡ ಜಿ.ಪರಮೇಶ್ವರ್ ನಿನ್ನೆ–ಮೊನ್ನೆ ಶ್ರೀಮಂತರಾದವರಲ್ಲ. ಐವತ್ತು ವರ್ಷದ ಹಿಂದೆಯೇ ಅವರ ತಂದೆ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಹಂತಹಂತವಾಗಿ ಸಂಪಾದಿಸಿದ್ದಾರೆ. ಹೊಸ ಪ್ರವೇಶಾತಿಯಲ್ಲಿ ಒಂದಿಷ್ಟು ವ್ಯತ್ಯಾಸ ಆಗಿರಬಹುದು. ದಿಢೀರನೆ ಸಹಸ್ರ, ಸಹಸ್ರ ಕೋಟಿ ಆಸ್ತಿ ಮಾಡಿಲ್ಲ’ ಎಂದು ಐಟಿ ದಾಳಿ ವಿರುದ್ಧ ಗುಡುಗಿದರು.

ಸ್ಥಳೀಯರಿಗೆ ಟಿಕೆಟ್‌: ‘ಹುಣಸೂರು ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್‌ ನೀಡಲಾಗುವುದು. ಪ್ರಜ್ವಲ್ ಈಗಾಗಲೇ ಸಂಸದನಿದ್ದಾನೆ. ನಿಖಿಲ್‌ ಸ್ಪರ್ಧಿಸಲ್ಲ. ಈ ಬಾರಿ ಹೊರಗಿನವರನ್ನು ಕರೆತರಲ್ಲ. ಆಕಾಂಕ್ಷಿಗಳು, ಕಾರ್ಯಕರ್ತರ ಸಭೆ ನಡೆಸಿ, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗುವುದು’ ಎಂದು ಎಚ್‌.ಡಿ.ದೇವೇಗೌಡ ಪುನರುಚ್ಚರಿಸಿದರು.

‘ಉಪ ಚುನಾವಣೆ ರಾಜ್ಯ ಸರ್ಕಾರದ ಆಯಸ್ಸು ನಿರ್ಧರಿಸಲಿದೆ. ಅದಕ್ಕೂ ಮುನ್ನ ಸುಪ್ರೀಂಕೋರ್ಟ್ ತೀರ್ಪು ಯಾವ ರೀತಿ ಬರಲಿದೆ ಎಂಬುದರ ಮೇಲೆ ಎಲ್ಲವೂ ನಿರ್ಧರಿತಗೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾನು ಅನರ್ಹನಲ್ಲ’ ಎಂದಿರುವ ಕೆ.ಆರ್‌.ಪೇಟೆಯ ನಾರಾಯಣಗೌಡ ಹೇಳಿಕೆ ಬಗ್ಗೆ ಪ್ರಶ್ನಿಸುತ್ತಿದ್ದಂತೆ, ಕೈಮುಗಿದ ದೇವೇಗೌಡ ದೊಡ್ಡವರ ಬಗ್ಗೆ ಮಾತನಾಡಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.

ಕಠಿಣ ಶಬ್ದಗಳಲ್ಲಿ ಪತ್ರ: ‘ವಿಧಾನಸಭಾ ಕಲಾಪ ನೇರ ಪ್ರಸಾರಕ್ಕೆ ಅವಕಾಶ ಕೊಡದೆ, ಮಾಧ್ಯಮ ಪ್ರವೇಶ ನಿಷೇಧಿಸಿದ ವಿಷಯದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಠಿಣ ಪದಗಳಲ್ಲಿ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದೇನೆ. ಇದೊಂದು ದುರ್ಘಟನೆ’ ಎಂದು ಮಾಜಿ ಪ್ರಧಾನಿ ತಿಳಿಸಿದರು.

Post Comments (+)