ಎಂಬಿಬಿಎಸ್‌ ಮಾತ್ರವಲ್ಲ; ಹಲವು ಕೋರ್ಸ್‌ಗಳಿವೆ…

ಭಾನುವಾರ, ಜೂನ್ 16, 2019
22 °C

ಎಂಬಿಬಿಎಸ್‌ ಮಾತ್ರವಲ್ಲ; ಹಲವು ಕೋರ್ಸ್‌ಗಳಿವೆ…

Published:
Updated:

ಮೈಸೂರು: ‘ಕೇವಲ ಎಂಬಿಬಿಎಸ್‌ ಮಾಡಬೇಕೆಂದು ಜೋತು ಬೀಳಬೇಡಿ. ಎಂಬಿಬಿಎಸ್‌ ಅಲ್ಲದೆ ಹಲವಾರು ವಿನೂತನ ಕೋರ್ಸ್‌ಗಳಿವೆ. ಈ ಕೋರ್ಸ್‌ ಮಾಡಿದವರಿಗೂ ಉತ್ತಮ ಅವಕಾಶಗಳಿವೆ’

–ಹೀಗೆಂದು ಮಹತ್ವದ ಸಲಹೆ ನೀಡಿದ್ದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ.ಎಸ್‌.ಎನ್‌.ಮಂಜುನಾಥ್‌.

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತು ಮಾತನಾಡಿ, ‘ನರ್ಸಿಂಗ್‌ ಕ್ಷೇತ್ರದಲ್ಲಿ ಹೆಚ್ಚಿನ ಸಿಬ್ಬಂದಿಯ ಅವಶ್ಯವಿದೆ. ಆಯುರ್ವೇದದಲ್ಲಿ ಪದವಿ ಪಡೆದವರಿಗೆ ಈಗ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಯೋಗ ಶಿಕ್ಷಣ ಪಡೆದವರಿಗೆ ಅಪಾರ ಬೇಡಿಕೆ ಇದೆ. ದಂತ ವೈದ್ಯಕೀಯ ಕ್ಷೇತ್ರದಲ್ಲಿ ಮುಂದೆ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ವಾಕ್‌ ಮತ್ತು ಶ್ರವಣ ಕೋರ್ಸ್‌ಗಳು, ಡಯಟಿಷಿಯನ್‌, ಫಾರೆನ್ಸಿಕ್‌ ಸೈನ್ಸ್‌ ಕೋರ್ಸ್‌ಗಳಿಗೂ ಬೇಡಿಕೆ ಇದೆ’ ಎಂದರು.

ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳನ್ನು ನಗಿಸುತ್ತಾ ವಿಚಾರ ಮಂಡಿಸುತ್ತಾ ಹೋದರು. ಕಾರ್ಯಕ್ರಮ ಮುಗಿದ ಬಳಿಕವೂ ಜನರು ಸುತ್ತುವರಿದು ಕೆಲ ಗೊಂದಲ ಬಗೆಹರಿಸಿಕೊಂಡರು.

ಪ್ರಶ್ನೆ–ಉತ್ತರ:

* ಶೇ 10ರಷ್ಟು ವೈದ್ಯಕೀಯ ಕಾಲೇಜುಗಳು ಮಾತ್ರ ಚೆನ್ನಾಗಿವೆ ಎಂದು ಹೇಳಿದಿರಿ. ಉಳಿದವು ಚೆನ್ನಾಗಿಲ್ಲವೇ?

ಅಷ್ಟೊಂದು ಚೆನ್ನಾಗಿಲ್ಲ ಎಂದಷ್ಟೇ ಹೇಳಿದೆ. ದಕ್ಷಿಣ ಭಾರತದ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳಿವೆ, ಗುಣಮಟ್ಟದಿಂದ ಕೂಡಿವೆ. ಕರ್ನಾಟದಲ್ಲೂ ಉತ್ತಮ ಕಾಲೇಜುಗಳಿವೆ. ಇದೇ ಮಾತನ್ನು ಉತ್ತರ ಭಾರತದ ವೈದ್ಯಕೀಯ ಕಾಲೇಜುಗಳ ವಿಚಾರದಲ್ಲಿ ಹೇಳಲು ಸಾಧ್ಯವಿಲ್ಲ. ಬೆಂಗಳೂರು ವೈದ್ಯಕೀಯ ಕಾಲೇಜು, ಸೇಂಟ್‌ ಜಾನ್‌ ವೈದ್ಯಕೀಯ ಕಾಲೇಜು, ಮೈಸೂರು ವೈದ್ಯಕೀಯ ಕಾಲೇಜು ಅತ್ಯುತ್ತಮವಾಗಿವೆ.

* ದಂತ ವೈದ್ಯಕೀಯ ಕ್ಷೇತ್ರದಲ್ಲಿರುವ ಅವಕಾಶಗಳೇನು?

ದಂತಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಹೀಗಾಗಿ, ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ, ಉತ್ತಮ ದಂತ ವೈದ್ಯ ಎನಿಸಿಕೊಳ್ಳಬೇಕು ಅಷ್ಟೆ.

* ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು (ಎಐಐಎಂಎಸ್) ಹೇಗಿವೆ?

ದೇಶದಲ್ಲಿ 10 ಎಐಐಎಂಎಸ್‌ ಇವೆ. ದೆಹಲಿಯಲ್ಲಿರುವ ಸಂಸ್ಥೆ ಚೆನ್ನಾಗಿದೆ. ಉಳಿದವು ಈಗ ಸುಧಾರಿಸುತ್ತಿವೆ. ಆದರೆ, ಯಾವುದೇ ಎಐಐಎಂಎಸ್‌ಗಳಲ್ಲಿ ಸೀಟು ಸಿಕ್ಕರೂ ಆಯ್ಕೆ ಮಾಡಿಕೊಳ್ಳಿ.

* ಪ್ಯಾರಾ ಮೆಡಿಕಲ್‌ ಕೋರ್ಸ್‌ ಮಾಡಲು ನೀಟ್‌ ಬರೆಯಬೇಕಾ?

ಅಗತ್ಯವಿಲ್ಲ. ಅಂಕಗಳ ಮೇಲೆ ಸೀಟು ಪಡೆಯಬಹುದು.

* ಮಗಳು ನೀಟ್‌ ಬರೆದಿಲ್ಲ. ಏನು ಮಾಡಬೇಕು?

ನೀಟ್‌ ಬರೆಯದೇ ವೈದ್ಯಕೀಯ ಕೋರ್ಸ್‌ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ವಾಕ್‌ ಮತ್ತು ಶ್ರವಣ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು.

* ವೈದ್ಯಕೀಯ ಕಾಲೇಜುಗಳ ಆಯ್ಕೆ ಹೇಗಿರಬೇಕು?

ಮೊದಲು ಎಐಐಎಂಎಸ್‌, ನಂತರ ಸರ್ಕಾರಿ ಕಾಲೇಜುಗಳು, ಬಳಿಕ ಖಾಸಗಿ ಕಾಲೇಜುಗಳ ಆಯ್ಕೆ ಮಾಡಿಕೊಳ್ಳಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !