ಚುನಾವಣಾ ಆಯೋಗದ ಎಡವಟ್ಟು: ಒಂದೇ ಮನೆಯ ಸದಸ್ಯರು ಬೇರೆ ವಾರ್ಡ್‌ ಮತದಾರರು!

7
ಮತದಾನದಿಂದ ವಂಚಿತರಾದ ಹಲವು ಮಂದಿ

ಚುನಾವಣಾ ಆಯೋಗದ ಎಡವಟ್ಟು: ಒಂದೇ ಮನೆಯ ಸದಸ್ಯರು ಬೇರೆ ವಾರ್ಡ್‌ ಮತದಾರರು!

Published:
Updated:
Deccan Herald

ಮೈಸೂರು: ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಜನರು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಮತದಾನ ಮಾಡಿರುವುದಕ್ಕೆ ಪ್ರಮುಖವಾಗಿ ಚುನಾವಣಾ ಆಯೋಗದ ಎಡವಟ್ಟು ಕಾರಣ ಎಂಬ ಸಂಗತಿ ಬೆಳಕಿಗೆ ಬರತೊಡಗಿದೆ.

ಒಂದೇ ಕುಟುಂಬದ ಹಲವರ ಹೆಸರು ಬೇರೆ ಬೇರೆ ಮತಗಟ್ಟೆಯಲ್ಲಿ ಸೇರಿದ್ದರಿಂದ ಅವರೆಲ್ಲ ಮತದಾನದಿಂದ ದೂರವೇ ಉಳಿಯಬೇಕಾಗಿದೆ. ವಿಶೇಷವಾಗಿ ಒಂದೇ ಮನೆಯ ಮತದಾರರು ಬೇರೆ ಬೇರೆ ವಾರ್ಡ್‌ನ ಮತಗಟ್ಟೆಯಲ್ಲಿ ಹೆಸರು ಸೇರಿ ಗೊಂದಲಕ್ಕೆ ಎಡೆ ಮಾಡಿದೆ.

ಲಕ್ಷ್ಮಿಪುರಂನ ಮಾಲ್ಗುಡಿ ವಸತಿ ಸಮುಚ್ಚಯದ ಸುಮಾರು 30ಕ್ಕೂ ಅಧಿಕ ಮಂದಿಯ ಹೆಸರು ಇದೇ ರೀತಿ ಬೇರೆ ವಾರ್ಡಿನ ಮತಗಟ್ಟೆಗಳಲ್ಲಿ ಸೇರಿದ್ದರಿಂದ ಅವರೆಲ್ಲರೂ ಮತದಾನದಿಂದ ವಂಚಿತರಾದರು. ಇವರಲ್ಲಿ ರವಿಕುಮಾರ್ ದಂಪತಿ ಮಾತ್ರ ಹತ್ತಾರು ಮತಗಟ್ಟೆಗಳನ್ನು ಸುತ್ತಿ ಕೊನೆಗೂ ಮತ ಹಾಕಿದ್ದಾರೆ.‌

ಪತಿ ರವಿಕುಮಾರ್ ಅವರ ಮತಗಟ್ಟೆ 49ನೇ ವಾರ್ಡ್‌ನ (ಲಕ್ಷ್ಮಿಪುರಂ) ವಾಣಿವಿಲಾಸ ರಸ್ತೆ ದಕ್ಷಿಣ ವಿಭಾಗದಲ್ಲಿನ ನಂಜುಮಳಿಗೆ ಸಮೀಪದ ಗೋಪಾಲಸ್ವಾಮಿ ಶಿಶುವಿಹಾರ ಕೇಂದ್ರದಲ್ಲಿದೆ. ಇವರ ಮನೆ ಸಂಖ್ಯೆ 909/1ಟಿಎಫ್ 401. ಆದರೆ, ಅವರ ಪತ್ನಿ ಪಿ.ಲಾವಣ್ಯ ಅವರ ಹೆಸರು ಈ ವಾರ್ಡ್‌ನಲ್ಲಿ ಇಲ್ಲದೇ 56ನೇ ವಾರ್ಡ್ (ಕೃಷ್ಣಮೂರ್ತಿಪುರಂ) ಶಾರದಾ ವಿಲಾಸ ಕಾಲೇಜಿನ ಮತಗಟ್ಟೆಯಲ್ಲಿದೆ. ಒಂದೇ ಮನೆಯ ಮತದಾರರು ಬೇರೆ ಬೇರೆ ವಾರ್ಡ್‌ಗಳಿಗೆ ಸೇರ್ಪಡೆ ಮಾಡಿದ್ದಾದರೂ ಏಕೆ ಎಂಬುದು ರವಿಕುಮಾರ್ ಅವರ ಪ್ರಶ್ನೆ.

ಇನ್ನು ಇವರ ಎಪಿಕ್ ಸಂಖ್ಯೆಯನ್ನು ನಮೂದಿಸಿ ವೆಬ್‌ಸೈಟ್‌ನಲ್ಲಿ ಹುಡುಕಿದರೆ ಮತ್ತಷ್ಟು ಗೊಂದಲಕ್ಕೀಡಾಗಬೇಕಾಗುತ್ತದೆ. http://ceokarnatakatemp.kar.nic.in ವೆಬ್‌ಸೈಟ್‌ನಲ್ಲಿ ಇಬ್ಬರ ಹೆಸರುಗಳೂ ಮೊದಲಿನಂತೆ ಗೋಪಾಲಸ್ವಾಮಿ ಶಿಶುವಿಹಾರ ಕೇಂದ್ರದಲ್ಲೇ ಇದೆ. ಆದರೆ, ಪಾಲಿಕೆ ನೀಡಿರುವ sumukha.info ವೆಬ್‌ಸೈಟ್‌ನಲ್ಲಿ ಇಬ್ಬರ ಹೆಸರನ್ನೂ ಬೇರೆ ಬೇರೆ ವಾರ್ಡಿಗೆ ಸೇರಿಸಲಾಗಿದೆ.

ಇದೇ ರೀತಿ ಹಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾದ ಪ್ರಕರಣಗಳು ಮತದಾನದ ದಿನ ಕಂಡು ಬಂದಿದ್ದವು. ವಿಶೇಷವಾಗಿ ಮರಿಮಲ್ಲಪ್ಪ ಕಾಲೇಜಿನ ಮತಗಟ್ಟೆಯಲ್ಲಿ ಹಲವು ಮಂದಿ ತಮ್ಮ ಹೆಸರು ವಿಧಾನಸಭಾ ಚುನಾವಣೆಯ ವೇಳೆ ಇಲ್ಲೇ ಇತ್ತು, ಈಗ ಏಕೆ ಪಕ್ಕದ ಮತಗಟ್ಟೆಗೆ ಸೇರ್ಪಡೆ ಮಾಡಿದ್ದೀರಿ ಎಂದು ಮತಗಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೂ ಉಂಟು.

ಮತದಾರರ ಸಂಖ್ಯೆ ಹೆಚ್ಚಳವಾಗಿ ಬೇರೊಂದು ಮತಗಟ್ಟೆಗೆ ಸೇರ್ಪಡೆಗೊಳಿಸಿದ್ದರೆ ಸರಿ ಎನ್ನಬಹುದಿತ್ತು. ಆದರೆ, ವಾರ್ಡನ್ನೇ ಬದಲಿಸಿದರೆ, ಅದೂ ಒಂದೇ ಮನೆಯವರನ್ನೇ ಬೇರೆ ಬೇರೆ ವಾರ್ಡಿಗೆ ಹಾಕಿದರೆ ಹೇಗೆ? ವಿಧಾನಸಭಾ ಚುನಾವಣೆಯ ನಂತರ ಈ ಬದಲಾವಣೆ ನಡೆದದ್ದಾರೂ ಏಕೆ? ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಮತದಾರರ ಪಟ್ಟಿಯಲ್ಲಿನ ದೋಷದಿಂದಾಗಿಯೇ ಈ ಬಾರಿ ಮತದಾನದ ಪ್ರಮಾಣ ತೀರಾ ಕಡಿಮೆಯಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !