ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಕ್ತ ಪ್ರಾಣಿಗಳ ಆಶ್ರಯತಾಣ ಪಿಎಫ್‌ಎ

Last Updated 28 ಮೇ 2019, 6:47 IST
ಅಕ್ಷರ ಗಾತ್ರ

ಮನುಷ್ಯದ ಜೊತೆ ಒಡನಾಟ ಹಾಗೂ ಆಪ್ತತೆಯಿಂದ ವರ್ತಿಸುವ ಪ್ರಾಣಿಗಳಲ್ಲಿ ನಾಯಿಗೆ ಅಗ್ರಸ್ಥಾನ. ಸಾಮಾನ್ಯವಾಗಿ ಸಾಕಿದ ನಾಯಿಯ ಲಾಲನೆ–ಪಾಲನೆ ವಿಚಾರದಲ್ಲಿ ಹೆಚ್ಚಿನ ನಿಗಾವಹಿಸಿದರೂ, ಬೀದಿನಾಯಿಗಳ ವಿಚಾರದಲ್ಲಿ ಜನಸಾಮಾನ್ಯರಿಗೆ ಅಕ್ಕರೆಗಿಂತ ಆಕ್ರೋಶವೇ ಹೆಚ್ಚು. ಇಂತಹ ಬೀದಿನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಜೊತೆಗೆ ಅನಾರೋಗ್ಯ, ಅಪಘಾತ ಉಂಟಾದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಅವುಗಳ ಆರೈಕೆಯಲ್ಲಿ ತೊಡಗಿದೆ ‘ಪೀಪಲ್‌ ಫಾರ್‌ ಆ್ಯನಿಮಲ್’ ಸಂಸ್ಥೆ.

2009ರಲ್ಲಿ ಈ ಸಂಸ್ಥೆ ಆರಂಭವಾಗಿದ್ದು, ಮ್ಯಾನೇಜಿಂಗ್‌ ಟ್ರಸ್ಟಿಯಾಗಿ ಸವಿತಾ ನಾಗಭೂಷಣ್‌ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ: ಬೀದಿನಾಯಿಗಳ ಉಪಟಳ ಮಿತಿಮೀರಿದ ವೇಳೆ ಜನರೇ ಕೆಲವೊಮ್ಮೆ ಅವುಗಳನ್ನು ಕೊಂದ ಉದಾಹರಣೆಗಳಿವೆ. ಇದರ ಬದಲಾಗಿ, ಇಂತಹ ನಾಯಿಗಳನ್ನು ಸೆರೆಹಿಡಿದು ಅವುಗಳನ್ನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ಸಮಸ್ಯೆ ಉಲ್ಬಣಿಸದಂತೆ ತಡೆಯಬಹುದು. ಪಾಲಿಕೆ ಸಹಯೋಗದೊಂದಿಗೆ ಈ ಕೇಂದ್ರದಲ್ಲಿ ಬೀದಿನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವರ್ಷಪೂರ್ತಿ ನಡೆಸಲಾಗುತ್ತಿದೆ.

ಚಿಕಿತ್ಸಾ ವಿಧಾನ: ಬೀದಿನಾಯಿಗಳು ಉಪಟಳ ಇರುವ ಪ್ರದೇಶಗಳಿಗೆ ತೆರಳುವ ಇಲ್ಲಿನ ಸಿಬ್ಬಂದಿ ‘ವಿಶೇಷ ನೆಟ್‌‘ ಬಳಸಿ, ಅವುಗಳನ್ನು ಹಿಡಿದು, ಅವುಗಳನ್ನು ಸಂಸ್ಥೆಯ ವಾಹನದ ಮೂಲಕ ಕೇಂದ್ರಕ್ಕೆ ಕರೆತರುತ್ತಾರೆ. ಬಳಿಕ ನಾಯಿಯ ವಿವರ, ಅದನ್ನು ಸೆರೆಹಿಡಿದ ಜಾಗ, ಲಿಂಗ, ಸಿಬ್ಬಂದಿಯ ಮಾಹಿತಿಯನ್ನು ದಾಖಲಿಸಲಾಗುತ್ತದೆ.

ಕೇಂದ್ರಕ್ಕೆ ಕರೆತಂದ ಕೆಲಗಂಟೆಗಳ ನಂತರ ಅವುಗಳ ಆಗಿನ ಆರೋಗ್ಯದ ಸ್ಥಿತಿ ತಪಾಸಣೆ ನಡೆಸಲಾಗುತ್ತದೆ. ನಂತರ, ಖಾಲಿ ಹೊಟ್ಟೆಯಲ್ಲಿ ‘ಅರಿವಳಿಕೆ ಚುಚ್ಚುಮದ್ದು’ ನೀಡಿ, ನುರಿತ ತಜ್ಞವೈದ್ಯರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಇದಾದ ಎರಡರಿಂದ ಮೂರು ದಿನಗಳ ಕಾಲ ಅವುಗಳು ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ. ಈ ಕಾರಣಕ್ಕಾಗಿ, ಇದೇ ಕೇಂದ್ರದಲ್ಲಿ ಅವುಗಳನ್ನು ಅತ್ಯಂತ ವ್ಯವಸ್ಥಿತವಾಗಿ ಇಟ್ಟುಕೊಳ್ಳಲಾಗುತ್ತದೆ. ಕೆಲವೊಂದು ನಾಯಿಗಳು ಶಸ್ತ್ರಚಿಕಿತ್ಸೆಯಿಂದ ವಿಪರೀತ ವೇದನೆ ಅನುಭವಿಸಿ, ಬೊಗಳುತ್ತಲೇ ಇರುತ್ತವೆ. ನೋವು ಶಮನಗೊಂಡ ನಂತರ ಸಹಜ ಸ್ಥಿತಿಯಿಂದ ವರ್ತಿಸುತ್ತವೆ, ಅಲ್ಲದೇ ಅವುಗಳ ಆಕ್ರಮಣಕಾರಿ ಪ್ರವೃತ್ತಿಯೂ ಮೊದಲಿಗಿಂತಲೂ ತೀವ್ರ ಕಡಿಮೆಯಾಗುತ್ತದೆ ಎಂದು ಇಲ್ಲಿನ ಸಿಬ್ಬಂದಿ ವಿವರಿಸುತ್ತಾರೆ.

ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ, ಕರೆತಂದ ನಾಯಿಯನ್ನು ಮತ್ತೆ ಅದೇ ಸ್ಥಳಕ್ಕೆ ಬಿಡಲಾಗುತ್ತದೆ. ವಾಹನದ ಮೇಲೆ ನಿಗಾ ಇಡುವುದಕ್ಕಾಗಿ ಜಿಪಿಎಸ್‌ ವ್ಯವಸ್ಥೆ ಕೂಡ ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ಪ್ರತಿ ನಾಯಿಯ ಕಿವಿಯ ಮೇಲೂ, ವಿಶೇಷ ಗುರುತು ಮಾಡಲಾಗುತ್ತದೆ. ಈ ಗುರುತು ಹೊಂದಿರುವ ನಾಯಿಯನ್ನು ಇಲ್ಲಿನ ಸಿಬ್ಬಂದಿ ಮತ್ತೆ ಹಿಡಿಯುವುದಿಲ್ಲ.

ಸ್ವಚ್ಛತೆಗೂ ಆದ್ಯತೆ: ಎರಡೂವರೆ ಎಕರೆ ವಿಸ್ತೀರ್ಣದಲ್ಲಿ ಈ ಕೇಂದ್ರವಿದ್ದು, ಸ್ವಚ್ಛತೆಗೂ ಗರಿಷ್ಠ ಆದ್ಯತೆ ನೀಡಲಾಗಿದೆ. ಈ ಕಾರಣದಿಂದ, ಸುಮಾರು 150ಕ್ಕೂ ಹೆಚ್ಚಿನ ಬೀದಿ ಹಾಗೂ ಕಾಯಿಲೆ ಹೊಂದಿರುವ ನಾಯಿಗಳಿದ್ದರೂ ದುರ್ವಾಸನೆ ಬರುವುದಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಅಪಘಾತಕ್ಕೆ ಒಳಗಾದರೆ, ಅವುಗಳಿಗೆ ಇಲ್ಲಿಗೆ ಕರೆತಂದು ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ. ಈ ಕೇಂದ್ರದಿಂದ ಬೀದಿ ನಾಯಿಮರಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಅಲ್ಲದೇ ಸಾಕಿದ ನಾಯಿಗಳಲ್ಲಿ ಕಂಡುಬರುವ ಅನಾರೋಗ್ಯಕ್ಕೂ ಚಿಕಿತ್ಸೆ ಕಲ್ಪಿಸಲಾಗುತ್ತದೆ. ಕೋತಿ, ಪಕ್ಷಿಗಳು, ಬೆಕ್ಕು, ಕುದುರೆ, ಹಸುಗಳಿಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಈ ಕೇಂದ್ರದಲ್ಲಿದೆ.

ಏನೇನಿದೆ: ಹೊರರೋಗಿ ವಿಭಾಗ, ಅಲ್ಟ್ರಾಸೌಂಡ್‌ ವ್ಯವಸ್ಥೆ, ಎಕ್ಸರೇ, ಸ್ಕ್ಯಾನಿಂಗ್‌, ರಕ್ತಪರೀಕ್ಷೆ, ಶಸ್ತ್ರಚಿಕಿತ್ಸೆ ವಿಭಾಗ, ಡಯಾಗ್ನೋಸ್ಟಿಕ್‌ ಪ್ರಯೋಗಾಲಯ, ಚುಚ್ಚುಮದ್ದು, ಆ್ಯಂಬುಲೆನ್ಸ್‌ ವ್ಯವಸ್ಥೆ ಈ ಕೇಂದ್ರದಲ್ಲಿದೆ. ಮನೆಯಲ್ಲಿ ಸಾಕುವ ನಾಯಿಗೂ ಕಾಯಿಲೆ ಕಂಡುಬಂದರೆ, ಇಲ್ಲಿಗೆ ಕರೆತಂದು ಚಿಕಿತ್ಸೆ ನೀಡಬಹುದು. ಇದಕ್ಕೆ ನಿಗದಿತ ಶುಲ್ಕ ವಿಧಿಸಲಾಗುತ್ತದೆ. ನಗರದಲ್ಲಿ ಬೇರೆ ಕೇಂದ್ರಗಳಿಗೆ ಹೋಲಿಸಿದರೆ, ಇಲ್ಲಿನ ಶುಲ್ಕ ಕಡಿಮೆ ಎಂಬುದು ಇಲ್ಲಿನ ಮ್ಯಾನೇಜರ್‌ ಪ್ರಿಯಾ ಅವರ ಮಾತು.

ನೀವು ನೆರವು ನೀಡಬಹುದು: ಸ್ವಯಂಸೇವಾ ಸಂಸ್ಥೆ ನಡೆಸುವ ಈ ಕೇಂದ್ರವೂ ಸಂ‍ಪೂರ್ಣ ದೇಣಿಗೆಯಿಂದಲೇ ನಡೆಯಬೇಕು. ಈ ಕಾರಣದಿಂದ, ಸಾರ್ವಜನಿಕರು ಇಲ್ಲಿನ ಸೇವೆಯನ್ನು ಗಮನಿಸಿ, ನೆರವು ನೀಡಬಹುದಾಗಿದೆ.

ಮಾಹಿತಿಗೆ www.pfamysore.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT