ಮಂಗಳವಾರ, ಡಿಸೆಂಬರ್ 7, 2021
23 °C

ಸಿದ್ದರಾಮಯ್ಯ ಆಡುವ ಮಾತು ಕೇಳಲು ಅಸಹ್ಯವಾಗುತ್ತೆ; ಸಂಸದ ವಿ.ಶ್ರೀನಿವಾಸಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹೀನಾಯವಾಗಿ ತನ್ನನ್ನು ಸೋಲಿಸಿದವನನ್ನೇ (ಜಿ.ಟಿ.ದೇವೇಗೌಡ) ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆ ತಂದು ನಾಯಕನನ್ನಾಗಿ ಮಾಡಲು ಮುಂದಾಗಿದ್ದಾನೆ ಸಿದ್ದರಾಮಯ್ಯ...’

‘ಉಪ ಚುನಾವಣೆಯ ಕಣ ರಂಗೇರಿದ್ದು, ಸಿಂದಗಿ, ಹಾನಗಲ್‌ನಲ್ಲಿ ಪ್ರಚಾರ ನಡೆಸೋದು ಬಿಟ್ಟು, ಮೈಸೂರು ಹೊರವಲಯದ ರಮ್ಮನಹಳ್ಳಿಯಲ್ಲಿ ರೋಡ್‌ ಶೋ ನಡೆಸುತ್ತಿದ್ದಾನೆ ಕುಮಾರಸ್ವಾಮಿ... ಇವರ್‍ಯಾವ ಸೀಮೆಯ ನಾಯಕರು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಸೋಮವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಉಪ ಚುನಾವಣಾ ಕಣದಲ್ಲಿ ಸಿದ್ದರಾಮಯ್ಯ ಆಡುತ್ತಿರುವ ಮಾತುಗಳನ್ನು ಕೇಳಿದರೆ ಅಸಹ್ಯವಾಗುತ್ತೆ. ಆತ ಮುಖ್ಯಮಂತ್ರಿಯಾಗಿದ್ದಾಗ ನಡೆದ ನಂಜನಗೂಡು, ಗುಂಡ್ಲುಪೇಟೆಯ ಉಪ ಚುನಾವಣೆಯಲ್ಲಿ ಬೂತ್‌ ಬಳಿಯೇ ಪೊಲೀಸರ ಸಮ್ಮುಖ ದುಡ್ಡು ಹಂಚಿದ್ದನ್ನು ನಾನಿನ್ನು ಮರೆತಿಲ್ಲ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

‘ನಂಜನಗೂಡಿನಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇರಲಿಲ್ಲ. ಜೆಡಿಎಸ್‌ನವರ ಜೊತೆಗೂಡಿ ಆ ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರು. ಜೆಡಿಎಸ್‌ನವರು ಕಾಂಗ್ರೆಸ್‌ಗೆ ಸಹಕರಿಸಲು ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿಲ್ಲ. ಆ ಚುನಾವಣೆ ನನ್ನ ಬದುಕಿನುದ್ದಕ್ಕೂ ಚುಚ್ಚುತ್ತಿದೆ’ ಎಂದು ಪ್ರಸಾದ್‌ ಹರಿಹಾಯ್ದರು.

‘ಹತಾಶೆಯಿಂದ ಸಿದ್ದರಾಮಯ್ಯ ಏನೇನೋ ಮಾತನಾಡುತ್ತಿದ್ದಾನೆ. ಉಪಕಾರ ಸ್ಮರಣೆಯಿಲ್ಲದವ. ನನ್ನ ಮನೆ ಬಾಗಿಲಿಗೆ ಬಂದಿದ್ದನ್ನು ಎಲ್ಲೂ ಹೇಳಿಕೊಳ್ಳದವ. ಖರ್ಗೆಯಿಂದ ಹಿಡಿದು ಎಲ್ಲರಿಗೂ ಈತನ ಮೇಲೆ ಅಸಮಾಧಾನವಿದೆ. ಈತನನ್ನು ಯಾರೂ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸಿಲ್ಲ. ಊಹಾಪೋಹವಷ್ಟೇ. ಕಾಂಗ್ರೆಸ್‌ ದಿವಾಳಿಯಾಗಿದೆ. ರಾಹುಲ್‌ ಗಾಂಧಿಯ ನಾಯಕತ್ವವನ್ನು ಯಾರೊಪ್ಕೊತಾರೆ’ ಎಂದು ಸಂಸದರು ವಾಗ್ದಾಳಿ ನಡೆಸಿದರು.

‘ಬಾದಾಮಿಯಲ್ಲಿ ಗೆಲ್ಲದಿದ್ದರೇ ಸಿದ್ದರಾಮನಹುಂಡಿಗೋ, ಕಾಟೂರು ತೋಟಕ್ಕೋ, ಬೆಂಗಳೂರಿನ ವಿಜಯನಗರದ ಮನೆಗೋ ಹೋಗಬೇಕಿತ್ತು. ಅಲ್ಪಮತಗಳ ಅಂತರದಿಂದ ಗೆದ್ದು ಏನು ಮಾತನಾಡುತ್ತಿದ್ದೀರಿ? ರಾಜೀವ್‌ಗಾಂಧಿ ನಂತರ ಪಕ್ಷವೊಂದಕ್ಕೆ ಸಂಪೂರ್ಣ ಬಹುಮತ ಗಳಿಸಿಕೊಟ್ಟ ವ್ಯಕ್ತಿ ಮೋದಿ. ಇತಿಹಾಸ ನಿರ್ಮಿಸಿದ ವ್ಯಕ್ತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತೀರಾ? ಮೊದಲು ಕಾಂಗ್ರೆಸ್‌ ಕಟ್ಟಿಕೊಳ್ಳಿ. ನಿಮ್ಮನ್ನು, ಡಿಕೆಶಿಯನ್ನು ನೋಡಿ ಯಾರು ಮತ ಹಾಕ್ತಾರೆ?’ ಎಂದು ಶ್ರೀನಿವಾಸ ಪ್ರಸಾದ್‌ ಲೇವಡಿ ಮಾಡಿದರು.

ಜೆಡಿಎಸ್‌ ಪಕ್ಷವಲ್ಲ, ಕಂಪನಿ

‘ನಿಮ್ಮದು ಪಕ್ಷವಲ್ಲ, ಕಂಪನಿ. ನಿಖಿಲ್‌, ಪ್ರಜ್ವಲ್‌, ಅನಿತಾ, ಭವಾನಿ ಸಾಕಲ್ವಾ. ಎಂದಾದರೂ ಎರಡನೇ ಸ್ಥಾನಕ್ಕೆ ಬಂದು ಮುಖ್ಯಮಂತ್ರಿಯಾಗಿದ್ದೀರಾ?’ ಎಂದು ಶ್ರೀನಿವಾಸಪ್ರಸಾದ್‌, ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದರು.

‘ನಿಮ್ಮ ಪಕ್ಷ ಏನು? ಎಲ್ಲೆಲ್ಲಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅದರ ಇತಿಮಿತಿಯಲ್ಲೇ ಮಾತನಾಡಿ. ಬೆಂಕಿ ಹಾಕಿದ ಕಡೆ ಮೈ ಕಾಯಿಸಿಕೊಳ್ಳಿ. ಜೆಡಿಎಸ್‌ ಶಕ್ತಿ ಏನೆಂಬುದು ದೇವೇಗೌಡರಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ರಾಜಕೀಯ ಬೆಳವಣಿಗೆಗೆ ಕಾಯುತ್ತಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು