ಗುರುವಾರ , ನವೆಂಬರ್ 21, 2019
27 °C
ಡಿಎಲ್‌ ಸಿಗದಿದ್ದರೆ ರಾಮದಾಸ್‌ ಮನೆಗೆ ಹೋಗುವೆ ಎಂದ ಕ್ಯಾಬ್ ಚಾಲಕ

ಅರ್ಜಿ ಕೊಟ್ಟೀವಿ; ಕಾದು ನೋಡ್ತೀವಿ...

Published:
Updated:
Prajavani

ಮೈಸೂರು: ನಿರೀಕ್ಷೆಗೂ ಮೀರಿದ ಜನಸಾಗರ. ನಗರದಲ್ಲಿನ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮಂಗಳವಾರ ಎಲ್ಲೆಡೆ ಜನದಟ್ಟಣೆ. ಜಾಗ ಸಿಕ್ಕೆಡೆ ಕೂತು ಅರ್ಜಿ ತುಂಬಿಸುವುದು, ತುಂಬುವುದೇ ಗೋಚರಿಸಿತು.

ಎಲ್ಲರ ಕೈಯಲ್ಲೂ ಆಧಾರ್‌ ಕಾರ್ಡ್‌, ಮತದಾನದ ಗುರುತಿನ ಚೀಟಿ, ವಿದ್ಯಾಭ್ಯಾಸದ ವರ್ಗಾವಣೆ ಪ್ರಮಾಣ ಪತ್ರದ (ಟಿಸಿ) ಜೆರಾಕ್ಸ್‌ ಪ್ರತಿಗಳು. ಎರಡೆರೆಡು ಭಾವಚಿತ್ರಗಳು...

ಎಲ್ಲರದ್ದೂ ಒಂದೇ ಪ್ರಶ್ನೆ. ಅರ್ಜಿಯನ್ನು ಎಲ್ಲಿ ? ಯಾರಿಗೆ ಕೊಡಬೇಕು ? ಕೊಟ್ಟ ನಂತರವೂ ತಪ್ಪದಾಯಿತು ಪ್ರಶ್ನಾವಳಿ. ಯಾರೋ ಇಸ್ಕೊಂಡ್ರು. ಏನ್ ಮಾಡ್ತಾರೋ ಗೊತ್ತಿಲ್ಲ. ನಮ್ ಮೊಬೈಲ್ ನಂಬರ್ ತಗೊಂಡ್ವಾರೆ. ಮೆಸೇಜ್ ಬರುತ್ತೆ ಅಂದಿದ್ದಾರೆ. ನಿರೀಕ್ಷೆಯಂತೆ ಡಿಎಲ್‌ ಸಿಕ್ಕರೆ ಶಾಸಕ ಎಸ್‌.ಎ.ರಾಮದಾಸ್‌ಗೆ ಒಳ್ಳೆ ಹೆಸರು. ಇಲ್ಲದಿದ್ದರೆ ಕೆಟ್ಟ ಹೆಸರು ಮಾತ್ರ ಕಟ್ಟಿಟ್ಟ ಬುತ್ತಿ ಎಂದು ‘ಪ್ರಜಾವಾಣಿ’ ಬಳಿ ಪ್ರತಿಕ್ರಿಯಿಸಿದವರು ಹಲವರು.

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಶಾಸಕ ಎಸ್‌.ಎ.ರಾಮದಾಸ್‌ ಆಯೋಜಿಸಿದ್ದ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದವರಿಗೂ ಡಿಎಲ್‌ ವಿತರಿಸುವ ಹಾಗೂ ಉಚಿತವಾಗಿ ಡಿಎಲ್‌ ಪಡೆಯಲಿಕ್ಕಾಗಿ ನೋಂದಾಯಿಸಿಕೊಳ್ಳುವ ಸಮಾರಂಭದಲ್ಲಿ ಭಾಗವಹಿಸಿದ್ದ ನಗರವೂ ಸೇರಿದಂತೆ ಜಿಲ್ಲೆ, ನೆರೆಹೊರೆ ಜಿಲ್ಲೆಯ ಜನರಿಂದ ವಿಭಿನ್ನ ಅಭಿಪ್ರಾಯ ವ್ಯಕ್ತವಾಯಿತು. ಪ್ರತಿಭಟನೆಯೂ ದಾಖಲಾಯ್ತು.

‘ಡಿಎಲ್‌ ಮಾಡಿಸಿಕೊಳ್ಳಬೇಕು ಅಂದ್ರೇ ಕನಿಷ್ಠ ₹ 2500–₹ 3000 ಕೇಳ್ತ್ವಾರೆ. ಮೂರ್ನಾಲ್ಕು ವರ್ಷದಿಂದ ಸ್ಕೂಟಿ ಓಡಿಸುತ್ತಿರುವೆ. ಡಿಎಲ್‌ ಇಲ್ಲದಿದ್ದಕ್ಕೆ ಮನೆ ಬಳಿಯೇ ಓಡಾಡುತ್ತಿದ್ದೆ. ಉಚಿತವಾಗಿ ಕೊಡ್ತ್ವಾರೆ ಅಂತ ಇಲ್ಲಿಗೆ ಬಂದಿರುವೆ. ನಮ್ ಅರ್ಜಿ ಯಾರ್ ಇಸ್ಕೊಂಡ್ರು ಅಂತಾನೇ ಗೊತ್ತಾಗಲಿಲ್ಲ. ನನಗೆ ಡಿಎಲ್‌ ಸಿಕ್ಕರೆ ಬಹಳ ಒಳ್ಳೇದಾಗುತ್ತೆ’ ಎಂದು ಕನಕಗಿರಿಯ ಗೃಹಿಣಿ ಶ್ರೀದೇವಿ ಹೇಳಿದರು.

‘ನನ್ನ ಗೂಡ್ಸ್‌ ಗಾಡಿಯನ್ನು 2004ರಲ್ಲಿ ಗೌರಿ–ಗಣೇಶ ಹಬ್ಬದ ದಿನ ಆರ್‌ಟಿಒ ಸೀಜ್‌ ಮಾಡಿದ್ದರು. ಅದು ಬೆಂಕಿಗೆ ಸುಟ್ಟೋಯ್ತು. ನನ್ನ ಕಾಲು ಮುರಿದಿತ್ತು. 1981ರಲ್ಲೇ ನನ್ನ ಬಳಿ ಡಿಎಲ್‌ ಇತ್ತು. ಇದೀಗ ರಿನಿವಲ್‌ಗಾಗಿ ಅರ್ಜಿ ಕೊಟ್ಟಿರುವೆ. ಒಂದ್‌ ವೇಳೆ ಡಿಎಲ್‌ ಬರದಿದ್ದರೆ ರಾಮದಾಸ್ ಮನೆಗೆ ಹೋಗಿ ಯಾಕಣ್ಣ ನನ್ನ ಡಿಎಲ್ ಬಂದಿಲ್ಲ ? ಎಂದು ಕೇಳುವೆ’ ಎಂದು ಕ್ಯಾಬ್‌ ಡ್ರೈವರ್ ಜಯಣ್ಣ ತಿಳಿಸಿದರು.

‘ಎಂಟ್‌ ವರ್ಷದ ಹಿಂದೆ ನನ್ನ ಡಿಎಲ್ ಸುಟ್ಟು ಹೋಗಿತ್ತು. ಆಗ ಒಂದಷ್ಟ್ ದಿನ ಗಾರೆ ಕೆಲಸಕ್ಕೆ ಹೋಗ್ತಿದ್ದೆ. ಈಚೆಗೆ ಮತ್ತೆ ಆಟೊ ಓಡಿಸಲು ಮುಂದಾದೆ. ಪೊಲೀಸರು ಹಿಡಿದು ದಂಡ ಹಾಕಿದಾಗ ಸುಮ್ನೆ ಕಟ್ತಿದ್ದೆ. ಉಚಿತವಾಗಿ ಡಿಎಲ್ ಕೊಡಿಸುತ್ತಾರೆ ಎಂದು ಒಂದು ದಿನದ ಕೆಲಸ ಬಿಟ್ಟು ಬಂದಿರುವೆ’ ಎಂದು ಬನ್ನಿಮಂಟಪದ ಫಯಾಜ್ ಹೇಳಿದರು.

ಪ್ರತಿಕ್ರಿಯಿಸಿ (+)