ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜಪಡೆ ಮೈಮೇಲೆ ವರ್ಣರಂಜಿತ ಚಿತ್ರ ಬಿಡಿಸುವವರು ಯಾರು ಗೊತ್ತೇ?

ಹುಣಸೂರಿನ ನಾಗಲಿಂಗಪ್ಪ ಬಡಿಗೇರಿ ಸಹೋದರರಿಂದ ಅಲಂಕಾರ
Last Updated 13 ಅಕ್ಟೋಬರ್ 2021, 20:35 IST
ಅಕ್ಷರ ಗಾತ್ರ

ಹುಣಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಮೈಮೇಲೆ ವರ್ಣರಂಜಿತ ಚಿತ್ರಗಳನ್ನು ಅರಳಿಸಲು ಹುಣಸೂರಿನ ನಾಗಲಿಂಗಪ್ಪ ಬಡಿಗೇರಿ ಮತ್ತು ಸಹೋದರರು ಸಜ್ಜಾಗಿದ್ದಾರೆ.

ಚಿತ್ರಕಲಾವಿದರಾದ ನಾಗಲಿಂಗಪ್ಪ ಬಡಿಗೇರಿ, ಅಣ್ಣ ನಾರಾಯಣ ಬಡಿಗೇರಿ, ತಮ್ಮ ಅರುಣ್ ಬಡಿಗೇರಿ, ಸ್ನೇಹಿತರಾದ ಮಧು, ರವಿ 2004ರಿಂದ ನಿರಂತರವಾಗಿ ಗಜಪಡೆಯ ದೇಹದ ಮೇಲೆ ಸಾಂಪ್ರದಾಯಿಕ ಚಿತ್ರಕಲೆ ಬಿಡಿಸಿ ಗಮನ ಸೆಳೆದಿದ್ದಾರೆ.

ಅವರು ಆನೆಗಳ ದೇಹಗಾತ್ರಕ್ಕೆ ಅನುಗುಣವಾಗಿ ಚಿತ್ರ ಬಿಡಿಸುವುದೇ ವಿಶೇಷ. ಮುಖದ ಮಧ್ಯದಲ್ಲಿ ಗಂಡಭೇರುಂಡ, ಹಣೆ ಭಾಗಕ್ಕೆ ನಾಮ, ಕಿವಿಗೆಶಂಖ ಮತ್ತು ಚಕ್ರ, ಸೊಂಡಲಿಗೆ ಹೂ ಬಳಿಗೆ ಹಾರುವ ಪಕ್ಷಿ, ದಂತದ ಮೇಲ್ಭಾಗ, ನಾಲ್ಕು ಕಾಲುಗಳು ಮತ್ತು ಬಾಲ ಸೇರಿದಂತೆ ಅವುಗಳ ಅಕ್ಕಪಕ್ಕದಲ್ಲಿ ವಿವಿಧ ಚಿತ್ತಾರಗಳನ್ನು ಬಿಡಿಸುತ್ತಾರೆ.

‘ಆನೆಗಳಿಗೆ ಸ್ನಾನ ಮಾಡಿಸಿದ ಬಳಿಕ ಸಂಪೂರ್ಣವಾಗಿ ದೇಹ ಒಣಗಲು ಬಿಡುತ್ತೇವೆ. ಆನೆ ಮೈ ಮೇಲಿನ ಬಿಳಿ ಚುಕ್ಕಿಗಳನ್ನು ಕಪ್ಪು ಬಣದಿಂದ ಮುಚ್ಚುತ್ತೇವೆ. ಆ ಚುಕ್ಕಿಗಳು ಸೊಂಡಿಲು ಮತ್ತು ಕಿವಿ ಭಾಗದಲ್ಲಿ ಹೆಚ್ಚಾಗಿರುತ್ತವೆ. ಪ್ರತಿ ಆನೆಯ ಗಾತ್ರಕ್ಕೆ ತಕ್ಕಂತೆ ಚಿತ್ರಗಳು ಹಾಗೂ ಬಣ್ಣಗಳನ್ನು ಬಳಸುತ್ತೇವೆ. ಬಣ್ಣ ಬಳಿಯಲು ಬೊಂಬಿನಿಂದ ಮಾಡಿದ ವಿಶೇಷ ‘ಬ್ರಷ್’ ಬಳಸುತ್ತೇವೆ’ ಎಂದು ನಾಗಲಿಂಗಪ್ಪ ಬಡಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನೆಗಳ ಮೈಮೇಲೆ ಚಿತ್ರ ಅರಳಿಸುವುದೇ ವಿಶೇಷ ಅನುಭವ. ಬಿಳಿ ಹಾಳೆ ಮೇಲೆ ಕುಂಚದಿಂದ ಚಿತ್ರ ಬಿಡಿಸುವುದು ಸುಲಭ. ಜೀವಂತ ಆನೆ ಮೇಲೆ ಚಿತ್ತಾರ ಬಿಡಿಸಬೇಕಾದರೆ ಅದಕ್ಕೆ ಹೊಂದಿಕೊಳ್ಳಬೇಕು. ಅಂಬಾರಿ ಹೊರುವ ಆನೆಯನ್ನು ಐವರು ಕಲಾವಿದರು ಶೃಂಗರಿಸಲು ಕನಿಷ್ಠ 3ರಿಂದ 4 ಗಂಟೆ ಬೇಕಾಗುತ್ತದೆ. ಆನೆ ಹಾಗೂ ಮಾವುತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅದನ್ನು ಮಾಡಬೇಕು’ ಎಂದು ಹೇಳಿದರು.

‘ಆನೆಗಳು ಗಂಭೀರವಾಗಿ ವರ್ತಿಸುತ್ತವೆ. ಅರ್ಜುನ ಆನೆ ಬಹಳ ತುಂಟ. 2020ರಲ್ಲಿ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನ ಮೇಲಿತ್ತು. ಅದಕ್ಕೆ ಚಿತ್ರಕಲೆ ಮಾಡಿದ್ದು ಸ್ಮರಣೀಯ’ ಎಂದರು.

ಬೆಳಗಿನ ಜಾವದಿಂದಲೇ ಅಲಂಕಾರ!

ಗಜಪಡೆಗೆ ಅಲಂಕಾರ ಮಾಡುವ ಕೆಲಸ ಜಂಬೂಸವಾರಿಯ ದಿನ ಬೆಳಗಿನ ಜಾವ 3 ಗಂಟೆಗೆ ಆರಂಭವಾಗುತ್ತದೆ. ಬೆಳಿಗ್ಗೆ 10 ಗಂಟೆಯ ಒಳಗೆ ಎಲ್ಲ ಆನೆಗಳನ್ನು ಸಂಪೂರ್ಣವಾಗಿ ಅಲಂಕರಿಸಲಾಗುತ್ತದೆ.

‘ನೈಸರ್ಗಿಕವಾಗಿ ಸಿದ್ಧಪಡಿಸಿದ ವಿವಿಧ ಬಣ್ಣಗಳಿಂದ ಆನೆಗಳನ್ನು ಅಲಂಕರಿಸಲಾಗುತ್ತದೆ. ಅದಕ್ಕಾಗಿ 5ರಿಂದ 7 ಕೆ.ಜಿ. ಬಣ್ಣ ಬಳಸುತ್ತೇವೆ. ಬಣ್ಣದ ಪುಡಿಯನ್ನು ಮರದ ಅರಗಿಗೆ (ಅಂಟು) ಮಿಶ್ರಣ ಮಾಡಿ 3ರಿಂದ 4 ದಿನ ನೆನೆ ಹಾಕಿ ಹದ ಮಾಡಲಾಗುತ್ತದೆ. ಬಳಿಕ, ಆನೆಗಳ ಮೈ ಮೇಲೆ ಬಳಿಯಲಾಗುತ್ತದೆ. ಮರದ ಅಂಟು ಮಿಶ್ರಣದಿಂದ ಆನೆ ಮೈ ಮೇಲೆ ಬಣ್ಣವು ಒಂದು ವಾರವಾದರೂ ಉಳಿಯುತ್ತದೆ’ ಎಂದು ನಾಗಲಿಂಗಪ್ಪ ಬಡಿಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT