ಭಾರತದಲ್ಲಿ ಸ್ತನ ಕ್ಯಾನ್ಸರ್‌: ಧೋರಣೆ, ವಾಸ್ತವ ಮತ್ತು ನಿಯಂತ್ರಣ

7

ಭಾರತದಲ್ಲಿ ಸ್ತನ ಕ್ಯಾನ್ಸರ್‌: ಧೋರಣೆ, ವಾಸ್ತವ ಮತ್ತು ನಿಯಂತ್ರಣ

Published:
Updated:

ಭಾರತೀಯ ಮಹಿಳೆಯರು ಎದುರಿಸುತ್ತಿರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್‌ ಮೊದಲ ಸ್ಥಾನದಲ್ಲಿದೆ. ಕ್ಯಾನ್ಸರ್‌ ಘಟಿಸುವಿಕೆ ಪ್ರಮಾಣ ಒಂದು ಲಕ್ಷಕ್ಕೆ 28.8 ರಷ್ಟಿದ್ದರೆ ಸಾಯುವವರ ಪ್ರಮಾಣ ಲಕ್ಷಕ್ಕೆ 12.7 ಇದೆ. ಮುನ್ನಂದಾಜು ವರದಿಯ ಪ್ರಕಾರ 2020ರಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್‌ ಸಂಭವಿಸುವ ಪ್ರಮಾಣವನ್ನು 1,79,900 ಇರಲಿದೆ ಎನ್ನಲಾಗಿದೆ. ಇಂಥ ಪರಿಸ್ಥಿತಿಯನ್ನು ಎದುರಿಸಲು ದೇಶದಲ್ಲಿ ಉತ್ತಮ ಆರೋಗ್ಯ ಜಾಗೃತಿ, ಸ್ತನ ಕ್ಯಾನ್ಸರ್‌ ಸ್ಕ್ರೀನಿಂಗ್‌ ಕಾರ್ಯಕ್ರಮಗಳು ಹಾಗೂ ಉತ್ತಮ ಚಿಕಿತ್ಸೆ ಲಭ್ಯತೆ ಮತ್ತು ಧನಾತ್ಮಕ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕಾಗ ಅಗತ್ಯವಿದೆ.

2008–12ರಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ ಶೇ 11.54ರಷ್ಟು ಹೆಚ್ಚಳಗೊಂಡಿದ್ದರೆ, ಕಾಯಿಲೆಯಿಂದ ಸಾಯುವವರ ಪ್ರಮಾಣ ಶೇ 13.82 ರಷ್ಟು ಹೆಚ್ಚಿದೆ. ಪಾಶ್ಚಿಮಾತ್ಯ ದೇಶಗಳ ಮಹಿಳೆಯರಿಗೆ ಹೋಲಿಸಿದರೆ ಭಾರತೀಯ ಮಹಿಳೆಯರಲ್ಲಿ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್‌ ಕಂಡುಬರುತ್ತಿದೆ. ಅಂದರೆ ಮುಟ್ಟು ನಿಲ್ಲುವ ಪೂರ್ವದಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಅಧ್ಯಯನವೊಂದರ ಪ್ರಕಾರ ಕಳೆದ 10 ವರ್ಷಗಳ ಅವಧಿಯಲ್ಲಿ 40–50 ರ ವಯೋಮಿತಿಯ ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಕಂಡುಬರುತ್ತಿದೆ. ಹಲವಾರು ಅಧ್ಯಯನ ವರದಿಗಳ ಪ್ರಕಾರ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸ್ತನ ಕ್ಯಾನ್ಸರ್‌ (carcinoma breast ) ಪ್ರಕರಣಗಳು ಮೊದಲ ಮತ್ತು 2ನೇ ಹಂತದಲ್ಲಿ ಪತ್ತೆಯಾದರೆ, ಭಾರತದಲ್ಲಿ ಶೇ 45.7ರಷ್ಟು ವರದಿಗಳು ಮುಂದುವರಿದ (ಮೂರನೇ ಮತ್ತು ಕೊನೆಯ) ಹಂತದಲ್ಲಿ ಪತ್ತೆಯಾಗುತ್ತಿದೆ.

ಜಾಗತಿಕ ಹೋಲಿಕೆ

2008ರಲ್ಲಿ ಅಮೆರಿಕದಲ್ಲಿ 1,82,000 ಸ್ತನ ಕ್ಯಾನ್ಸರ್‌ ಪ್ರಕರಣಗಳಲ್ಲಿ 40,000 ರೋಗಿಗಳು ಮೃತಪಟ್ಟಿದ್ದಾರೆ. ( 4.5:1ಪ್ರಮಾಣ. ಅಂದರೆ ಪ್ರತಿ 4.5 ಸ್ತನ ಕ್ಯಾನ್ಸರ್‌ ರೋಗಿಗಳಲ್ಲಿ ಒಬ್ಬರು ಸತ್ತಿದ್ದಾರೆ). ಭಾರತದಲ್ಲಿ ಚಿಕಿತ್ಸೆಗೊಳಪಟ್ಟ 1,15,000 ಮಹಿಳೆಯರಲ್ಲಿ 53,000 ರೋಗಿಗಳು ಮೃತಪಟ್ಟಿದ್ದಾರೆ. ಅಂದರೆ 2:1 ಪ್ರಮಾಣ. ಪ್ರತಿ ಇಬ್ಬರಲ್ಲಿ ಒಬ್ಬರು ಸಾಯುತ್ತಿರುವುದು ತುಂಬಾ ಕಳವಳಕಾರಿ ಸಂಗತಿ.

ಅಮೆರಿಕದಲ್ಲಿ ಪ್ರತಿ ಎಂಟರಲ್ಲಿ ಒಬ್ಬ ಮಹಿಳೆಗೆ ಆಕೆಯ ಜೀವಮಾನದಲ್ಲಿ ಸ್ತನ ಕ್ಯಾನ್ಸರ್‌ ಕಾಡಬಹುದು. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಆ ಪ್ರಮಾಣ ಕಡಿಮೆಯಿದೆ. ಪ್ರತಿ 30 ಮಹಿಳೆಯರಲ್ಲಿ ಒಬ್ಬರು ಸ್ತನ ಕ್ಯಾನ್ಸರ್‌ಗೆ ಈಡಾಗಬಹುದು.

ಕಾರಣಗಳು: ಮದುವೆ ವಯಸ್ಸು, ವಾಸಿಸುವ ಪರಿಸರ, ಮಕ್ಕಳಿಗೆ ಮೊಲೆಯುಣಿಸದಿರುವುದು, ಬೊಜ್ಜು, ಮಾದಕ ವಸ್ತು ಸೇವನೆ, ತಂಬಾಕು ಜಗಿಯುವಿಕೆ, ಧೂಮ್ರಪಾನ, ಅಗತ್ಯ ವ್ಯಾಯಾಮಗಳ ಕೊರತೆ, ಸರಿಯಲ್ಲದ ಆಹಾರ ಕ್ರಮ, ಪರಿಸರ ಮಾಲಿನ್ಯದ ಕಾರಣಗಳು ಭಾರತದಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳಾಗುತ್ತಿವೆ. ಯುವತಿಯರಲ್ಲಿ ಸ್ತನ ಕ್ಯಾನ್ಸರ್‌ ಕಂಡುಬರುತ್ತಿರುವುದಕ್ಕೆ ಸ್ಪಷ್ಟ ಕಾರಣಗಳಿಲ್ಲ.

ಕಾಯಿಲೆ ಪತ್ತೆ ತಡವಾಗುತ್ತಿರುವಲ್ಲಿ ಅನಕ್ಷರತೆ, ಕ್ಯಾನ್ಸರ್‌ ಕುರಿತು ತಿಳಿವಳಿಕೆ ಕೊರತೆ, ಆರ್ಥಿಕ ಸಮಸ್ಯೆ ಪ್ರಮುಖವಾಗಿವೆ. ಇವೆಲ್ಲ ಕಾರಣಗಳು ರೋಗಿಯ ಸಾವಿನ ಪ್ರಮಾಣ ಹೆಚ್ಚಲು ದಾರಿಯಾಗುತ್ತಿವೆ.

ಕ್ಯಾನ್ಸರ್‌ ಕುರಿತ ಜಾಗೃತಿ ಕಾರ್ಯಕ್ರಮಗಳ ಜೊತೆ ಸ್ವಯಂ ಪರೀಕ್ಷೆಯಿಂದ ಕ್ಯಾನ್ಸರ್‌ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಬಹುದು. ಆರಂಭಿಕ ಹಂತದಲ್ಲಿರುವ ಕ್ಯಾನ್ಸರನ್ನು ಚಿಕಿತ್ಸೆಗಳ ಮೂಲಕ ಸಂಪೂರ್ಣ ಗುಣಪಡಿಸಲು ಸಾಧ್ಯ. ಇದರಿಂದ ರೋಗಿಯ ಸಾವನ್ನು ತಡೆಯಲು ಸಾಧ್ಯ. ಶಿಸ್ತುಬದ್ಧ ಜೀವನ ಶೈಲಿಯಿಂದಲೂ ಕ್ಯಾನ್ಸರ್‌ನಿಂದ ದೂರವಿರಬಹುದು.

ಮುನ್ನಂದಾಜು (projection data) ಮಾಹಿತಿ ಪ್ರಕಾರ 2020ರಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳು ಹತ್ತಿರ ಹತ್ತಿರ ದುಪ್ಪಟ್ಟು ಆಗಲಿವೆ ಎನ್ನಲಾಗಿದೆ. ಅದಕ್ಕನುಗುಣವಾಗಿ ಅಗತ್ಯ ಸೂಕ್ತ ಚಿಕಿತ್ಸಾ ಸೌಲಭ್ಯಗಳನ್ನು ಪೂರೈಸಲು ಸಾಧ್ಯವಾಗದಿರಲೂಬಹುದು.

ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್‌ ಕುಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳು

ಭವಿಷ್ಯದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವನ್ನು ಕುಗ್ಗಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಘ–ಸಂಸ್ಥೆಗಳು, ಮಾಧ್ಯಮಗಳ ಪಾತ್ರ ಪ್ರಮುಖವೆನಿಸಲಿದೆ.

ಪ್ರಾದೇಶಿಕ ಭಾಷೆಯಲ್ಲಿ ಜಾಗೃತಿ ಆಂದೋಲನಗಳು ನಡೆಯುವುದರಿಂದ ಕ್ಯಾನ್ಸರ್‌ ಕುರಿತು ಪರಿಣಾಮಕಾರಿ ಅರಿವು ಮೂಡಿಸಲು ಸಾಧ್ಯ. ಮಗುವಿಗೆ ಎದೆಹಾಲು ಉಣಿಸುವುದರಿಂದ ಸ್ತನಕ್ಯಾನ್ಸರ್‌ಅನ್ನು ತಡೆಯಬಹುದು. ಜಾಗೃತಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪ್ರಸಿದ್ಧ ವ್ಯಕ್ತಿಗಳನ್ನು ಬಳಸಿಕೊಂಡಲ್ಲಿ ಆಂದೋಲನ ಹೆಚ್ಚು ಪರಿಣಾಮಕಾಗಿಯಾಗಿ ಮುನ್ನಡೆಯಲಿದೆ.

ಆಂದೋಲನವನ್ನು ಇನ್ನೂ ಬಲಪಡಿಸಲು ಕ್ಯಾನ್ಸರ್‌ ಸಂಬಂಧಿ ವೈದ್ಯಕೀಯ ಸಂಸ್ಥೆಗಳು ಸ್ತನ ಕ್ಯಾನ್ಸರ್‌ ತಪಾಸಣಾ ಶಿಬಿರಗಳು, ಪರೀಕ್ಷಾ ವಿಧಾನಗಳನ್ನು ಹಮ್ಮಿಕೊಳ್ಳುವುದು. ಇದರಿಂದ ಸ್ತನಗಳಲ್ಲಿ ಗಂಟುಗಳು ಪತ್ತೆಯಾದಲ್ಲಿ ಅಗತ್ಯ ಚಿಕಿತ್ಸೆಗಳನ್ನು ತುರ್ತಾಗಿ ಆರಂಭಿಕ ಹಂತದಲ್ಲೇ ಪಡೆಯಲು ಸಾಧ್ಯವಾಗಲಿದೆ.

30 ವರ್ಷ ದಾಟಿದ ಎಲ್ಲ ಮಹಿಳೆಯರೂ ಕಡ್ಡಾಯವಾಗಿ ಕ್ಯಾನ್ಸರ್‌ ಸ್ಕ್ರೀನಿಂಗ್‌ ಪರೀಕ್ಷೆಗೊಳಪಡಬೇಕು.  ಸ್ಥಳೀಯ ಕ್ಲಿನಿಕ್‌ಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವಕರ ಮೂಲಕ ಸ್ತನ ಪರೀಕ್ಷೆಗೆ ಸೌಲಭ್ಯ ಕಲ್ಪಿಸುವುದು. ಕ್ಯಾನ್ಸರ್‌ ಬಾಧೆಗೊಳಪಡುವ ಸ್ತನದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲು ಶಸ್ತ್ರಚಿಕಿತ್ಸಕರಿಗೆ ಅಗತ್ಯ ತರಬೇತಿ ಒದಗಿಸುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !