ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರೇ, ಹಳ್ಳಿಗಳಲ್ಲಿ ಸೇವೆ ಮಾಡಿ

ಜೆಎಸ್‌ಎಸ್‌ ಅಕಾಡೆಮಿಯ 11ನೇ ಘಟಿಕೋತ್ಸವದಲ್ಲಿ ಸಚಿವ ಡಾ.ಕೆ.ಸುಧಾಕರ್‌ ಮನವಿ
Last Updated 12 ನವೆಂಬರ್ 2020, 5:57 IST
ಅಕ್ಷರ ಗಾತ್ರ

ಮೈಸೂರು: ‘ದೇಶದ ಶೇ 70 ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಶೇ 70 ರಷ್ಟು ವೈದ್ಯರು ನಗರಗಳಲ್ಲಿ ನೆಲೆಸಲು ಬಯಸುತ್ತಾರೆ. ಹೀಗಾಗಿ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ವ್ಯಾಸಂಗ ಪೂರ್ಣಗೊಳಿಸಿದ ನಂತರ ಮಾನವೀಯತೆ ನೆಲೆಗಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಒಂದು ವರ್ಷವಾದರೂ ಸೇವೆ ಸಲ್ಲಿಸಬೇಕು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಬುಧವಾರ ಸುತ್ತೂರು ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ 11ನೇ ಘಟಿಕೋ ತ್ಸವದಲ್ಲಿ ಅವರು ಮಾತನಾಡಿದರು.

ಜಗತ್ತಿನ ಯಾವುದೇ ಮೂಲೆ ಗಾದರೂ ಹೋಗಿ ಶಿಕ್ಷಣ, ತರಬೇತಿ, ಕೌಶಲ, ಜ್ಞಾನ ಪಡೆಯಿರಿ. ಆದರೆ, ತಮ್ಮ ಸೇವೆಯನ್ನು ಮಾತೃಭೂಮಿಗೆ ಮೀಸ ಲಿಡಿ ಎಂದು ಕಿವಿಮಾತು ಹೇಳಿದರು.

‘ಸಾರ್ವಜನಿಕರ ಆರೋಗ್ಯದ ಕುರಿತು ವೈದ್ಯರು ಕಾಳಜಿ ವಹಿಸಬೇಕು. ಸಮುದಾಯವನ್ನು ಶಿಕ್ಷಣಭರಿತವಾಗಿ ಮಾಡಿ ಅವರಿಗೆ ಜೀವನ ಶೈಲಿಯ ಕುರಿತು ಅರಿವು ಮೂಡಿಸಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.ವೈದ್ಯೋ ನಾರಾಯಣೋ ಹರಿ ಎಂದು ವೈದ್ಯರನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ಅಂಥ ದೇವರನ್ನು ಸೃಷ್ಟಿ ಮಾಡುವ ಈ ಸಂಸ್ಥೆಗಳೇ ದೇವಾಲಯ ಎಂದು ನಾನು ಭಾವಿಸುತ್ತೇನೆ. ನಡೆದಾಡುವ ದೇವರು ಸ್ವಾಮೀಜಿಯ ವಿಶೇಷ ಆಶೀರ್ವಾದ ಎಲ್ಲರಿಗೂ ಜೀವನದುದ್ದಕ್ಕೂ ರಕ್ಷಾ ಕವಚವಾಗಿರಲಿದೆ’ ಎಂದು ಆಶಿಸಿದರು.

‌‘ರಾಜ್ಯದಲ್ಲಿ 12ಸಾವಿರ ಮಂದಿಗೆ ಒಬ್ಬ ವೈದ್ಯರಿದ್ದಾರೆ. ಸಾವಿರ ಜನರಿಗೆ ಒಂದು ಹಾಸಿಗೆ ಸೌಲಭ್ಯವಿದೆ. ಸಾವಿರ ಜನರಿಗೆ ಒಬ್ಬ ವೈದ್ಯ ಹಾಗೂ ಒಂದು ಸಾವಿರ ಮಂದಿಗೆ 2.7 ಹಾಸಿಗೆ ಇರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 150 ವೈದ್ಯಕೀಯ ಕಾಲೇಜು ಆರಂಭಿಸಲು ಅನುಮತಿ ನೀಡಿದ್ದಾರೆ. ಸ್ನಾತಕೋತ್ತರ ಪದವಿಗೆ ಹೊಸದಾಗಿ 17 ಸಾವಿರ ಸೀಟುಗಳನ್ನು ಸೇರಿಸಲಾಗಿದೆ. ಇವೆಲ್ಲಾ ಕ್ರಮಗಳಿಂದ ಆರೋಗ್ಯ ಕ್ಷೇತ್ರ ಬಲವಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಕೊರತೆ ಇದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸಬೇಕು. ವೈದ್ಯಕೀಯ ಕೋರ್ಸ್‌ಗಳ ಜೊತೆಗೆ ಪ್ಯಾರಾ ಮೆಡಿಕಲ್‌, ನರ್ಸಿಂಗ್‌ ಕೋರ್ಸ್‌ಗಳಿಗೂ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ಆರೋಗ್ಯ ಕ್ಷೇತ್ರ, ಸಂಶೋಧನೆಯಲ್ಲಿ ಜೆಎಸ್‌ಎಸ್‌ ಸಂಸ್ಥೆಯು ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಇದು ನಳಂದ, ತಕ್ಷಶಿಲಾ ಮಾದರಿಯಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಕೋವಿಡ್‌ ವಿರುದ್ಧದ ಹೋರಾಟದಲ್ಲೂ ಜೆಎಸ್‌ಎಸ್‌ ಸಂಸ್ಥೆಯುಸರ್ಕಾರದೊಂದಿಗೆ ಕೈ ಜೋಡಿಸಿದೆ’ ಎಂದು ಶ್ಲಾಘಿಸಿದರು.

‘ಗುಣಮಟ್ಟ ಹಾಗೂ ಕಡಿಮೆ ದರದ ಚಿಕಿತ್ಸೆ ನೀಡುವ ಗುರಿ ನಮ್ಮ ಸರ್ಕಾರಕ್ಕಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ, ರಾಜ್ಯದ 1.5 ಕೋಟಿ ಕುಟುಂಬಗಳಿಗೆ ಪ್ರಯೋಜನ ದೊರೆಯುತ್ತಿದೆ’ ಎಂದು ನುಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಪ್ರೊ–ಚಾನ್ಸಲರ್ ಡಾ.ಬಿ.ಸುರೇಶ್, ಅಕಾಡೆಮಿಯ ಕುಲಪತಿ ಡಾ.ಸುರಿಂದರ್ ಸಿಂಗ್, ಕುಲಸಚಿವ ಡಾ.ಬಿ.ಮಂಜುನಾಥ್‌, ಪರೀಕ್ಷಾ ವಿಭಾಗದ ನಿಯಂತ್ರಕ ಡಾ.ಆರ್‌.ಸುಧೀಂದ್ರ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT