ಭಾನುವಾರ, ನವೆಂಬರ್ 17, 2019
24 °C
‘ಜೈಲಿನ ಅನುಭವ ದಾಖಲಿಸುವೆ’

ಸಿದ್ದರಾಮಯ್ಯ ಕೈಕೆಳಗಿನ ಶಾಸಕ ನಾನು, ಹೈಕಮಾಂಡ್ ನಿರ್ದೇಶನ ಪಾಲಿಸುವೆ: ಡಿಕೆಶಿ

Published:
Updated:

ಮೈಸೂರು: ‘ಜೈಲಿನ ಅನುಭವವನ್ನು ದಾಖಲಿಸುವೆ’ ಎಂದು ಶಾಸಕ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಶುಕ್ರವಾರ ಇಲ್ಲಿ ತಿಳಿಸಿದರು.

ಚಾಮುಂಡೇಶ್ವರಿ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಕ್ಷದಲ್ಲಿ ಯಾವ ಬಣವೂ ಇಲ್ಲ. ಗುಂಪುಗಾರಿಕೆಯೂ ನಡೆದಿಲ್ಲ. ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಸಂಘರ್ಷವಿಲ್ಲ. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಅವರ ಕೈಕೆಳಗಿನ ಶಾಸಕ ನಾನು. ಸೋನಿಯಾ ಅವರ ಮಾರ್ಗದರ್ಶನದಂತೆ ಪಕ್ಷಕ್ಕಾಗಿ ಕೆಲಸ ಮಾಡುವೆ. ಉಪ ಚುನಾವಣೆಯಲ್ಲಿ ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸುವೆ. ನನಗೀಗ 58 ವರ್ಷ. ಇನ್ನೆರಡು ವರ್ಷಕ್ಕೆ ‘ಹಿರಿಯ’ನಾಗಲಿದ್ದು, ನನ್ನ ಭವಿಷ್ಯವನ್ನು ಹೈಕಮಾಂಡ್ ನಿರ್ಧರಿಸಲಿದೆ’ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನುಡಿದಂತೆ ನಡೆಯಲಿಲ್ಲ. ನಾನೊಬ್ಬ ರಾಜಕಾರಣಿ. ಕಾಲಚಕ್ರ ತಿರುಗಲಿದೆ. ಸಮಯ ಬರಬೇಕಷ್ಟೇ. ನ್ಯಾಯದ ತಕ್ಕಡಿಯೂ ಸದಾ ತೂಗುತ್ತಿರುತ್ತದೆ. 1985ರಿಂದಲೂ ಪಕ್ಷದ ನಿರ್ದೇಶನದಂತೆ ಕೆಲಸ ಮಾಡಿಕೊಂಡು ಹೋಗುತ್ತಿರುವೆ. ಮುಂದೆಯೂ ಅಷ್ಟೇ’ ಎಂದು ಹೇಳಿದರು.

‘ದುಃಖ ದೂರ ಮಾಡುವ ದುರ್ಗೆ ಸ್ವರೂಪಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ. ಸಂಕಷ್ಟದಲ್ಲಿದ್ದಾಗ ಪ್ರಾರ್ಥಿಸಿದ್ದೆ. ಪವಿತ್ರ ಶುಕ್ರವಾರ ದರ್ಶನ ಪಡೆದು ನಾಡಿನ ಶಾಂತಿಗಾಗಿ, ನನ್ನ ಕಷ್ಟ ನಿವಾರಣೆಗಾಗಿ, ಎಲ್ಲರ ಒಳಿತಿಗಾಗಿ ಬೇಡಿಕೊಂಡೆ’ ಎಂದರು.

ರಾಷ್ಟ್ರಪತಿಗೆ ದೂರು: ಅನರ್ಹ ಶಾಸಕರ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗೆ ದೂರು ಸಲ್ಲಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

‘ಈ ಬಗ್ಗೆ ಪಕ್ಷದ ಹೈಕಮಾಂಡ್‌ ಸೂಚನೆ ನೀಡಿದೆ. ರಾಷ್ಟ್ರಪತಿ, ಭೇಟಿಗೆ ಸಮಯ ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಅವರೊಂದಿಗೆ ನವದೆಹಲಿಗೆ ತೆರಳಲಾಗುವುದು’ ಎಂದು ಹೇಳಿದರು.

‘ಇ.ಡಿ (ಜಾರಿ ನಿರ್ದೇಶನಾಲಯ) ಹೇಗೆ ಬೇಕಾದರೂ ನಡೆದುಕೊಳ್ಳಬಹುದು. ಆದರೆ ಸಿಬಿಐ, ಕಾನೂನು ಮೀರಿ ಯಾರ ಮಾತನ್ನೂ ಕೇಳುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

**

ಪ್ರತಿ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಬರುವೆ. ನಾನು ಬಂದಾಗ ಡಿ.ಕೆ.ಶಿವಕುಮಾರ್ ಸಹ ದೇಗುಲದಲ್ಲಿದ್ದರು. ಜತೆಯಲ್ಲಿ ತೆರಳಿ ಪೂಜೆ ಸಲ್ಲಿಸಿದೆವು. ಇದಕ್ಕೇನು ವಿಶೇಷ ಅರ್ಥ ಕಲ್ಪಿಸಬೇಕಿಲ್ಲ
-ಜಿ.ಟಿ.ದೇವೇಗೌಡ, ಜೆಡಿಎಸ್ ಶಾಸಕ

**

ದೆಹಲಿಯಲ್ಲೇ ಡಿ.ಕೆ.ಶಿವಕುಮಾರ್ ಭೇಟಿಯಾಗಬೇಕಿತ್ತು. ಆದರೆ ಅಲ್ಲಿ ಸಮಯ ಸಿಗಲಿಲ್ಲ. ಮೈಸೂರಿನಲ್ಲಿ ಭೇಟಿಯಾಗಿ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದೆ
-ಸಾ.ರಾ.ಮಹೇಶ್, ಜೆಡಿಎಸ್ ಶಾಸಕ

**

ಡಿಕೆಶಿ ನಮ್ಮನ್ನೆಲ್ಲಾ ಬೆಳೆಸಿದ್ದಾರೆ. ನನಗೆ ಟಿಕೆಟ್ ಕೊಡಿಸುವ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಆ ಕೆಲಸ ಮಾಡಿದ್ದೇವೆ
-ಧ್ರುವನಾರಾಯಣ್, ಮಾಜಿ ಸಂಸದ

ಪ್ರತಿಕ್ರಿಯಿಸಿ (+)