ಸೋಮವಾರ, ನವೆಂಬರ್ 18, 2019
25 °C

ಬಗಲಲ್ಲಿ ಕುಳಿತ ಮಿನಿಯೇಚರ್‌, ಗುರ್‌ ಎಂದ ಗ್ರೇಟ್‌ ಡೇನ್

Published:
Updated:
Prajavani

ರೈತರು, ಎರಡು ಎತ್ತಿನ ಬೆಲೆ ₹2 ರಿಂದ 5 ಲಕ್ಷ ಅಂದರೆ ‘ಅಬ್ಬಾ’ ಎನ್ನುತ್ತಾರೆ. ಆದರೆ, ನಾಯಿ ಬೆಲೆ ಲಕ್ಷದಿಂದ ಕೋಟಿ ದಾಟಿದೆ.

ಆಳೆತ್ತರ ಹುಲಿಯಂತೆ ಕಾಣುವ ಗ್ರೇಟ್‌ ಡೇನ್, ಡಬ್ಲೂ ಡಬ್ಲೂಎಫ್ ಹಾಗೂ ಸುಮೋ ಪೈಲ್ವಾನ್‌ನಂತೆ ಕಾಣುವ ಸೇಂಟ್‌ ಬರ್ನಾಡ್, ಬೇಟೆಗೆ ಹವಣಿಸುವಂತೆ ಕ್ಷಣವೂ ನಿಂತ ಜಾಗದಲ್ಲಿ ನಿಲ್ಲದ ರ‍್ಯಾಟ್ ವಿಲ್ಲರ್, ಕಪ್ಪು–ಬಿಳಿ ಬಣ್ಣದಲ್ಲಿ ಸ್ವಲ್ಪ ಸೌಮ್ಯವೂ ಅಂದವಾಗಿ ಕಾಣುವ ಜೊತೆಗೆ ವೇಗವಾಗಿ ಓಡುವ ಬೀಗಲ್, ಲ್ಯಾಬ್ರಡಾರ್, ಜರ್ಮನ್‌ ಶಫರ್ಡ್, ಕುಂಯ್‌, ಕುಂಯ್‌ ಎನ್ನುತ್ತಾ ಮಾಲೀಕರನ ತೋಳಿನಲ್ಲಿ ಕೂಡುವ ಮಿನಿಚರ್ ಪಿಂಚ್, ಮುದ್ದು ಮುದ್ದಾಗಿ ಕಾಣುವ ಟಾಯ್ ಪಮೋರಿಯನ್, ಉದ್ದ ಕೂದಲಿನ ಯಾರ್ಕ್‌ ಸೆಟ್‌ ಪೆರಿಯರ್ ಹೀಗೆಿ 36 ತಳಿಯ 250ಕ್ಕೂ ಹೆಚ್ಚು ಶ್ವಾನಗಳು ದೇಶದ ವಿವಿಧೆಡೆಯಿಂದ ಮೈಸೂರಿಗೆ ಬಂದಿದ್ದವು.

ಮೈಸೂರಿನ ಕೆನೈನ್ ಕ್ಲಬ್ ‌ಭಾನುವಾರ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 6ನೇ ರಾಷ್ಟ್ರಮಟ್ಟದ ಶ್ವಾನ ಸ್ಪರ್ಧೆಯಲ್ಲಿ ಕಂಡ ದೃಶ್ಯಗಳಿವು.

 ನಿಲ್ಲುವುದು, ಓಡುವುದು, ಮಾಲೀಕನ ಮಾತನ್ನು ಹೇಗೆ ಕೇಳುತ್ತದೆ. ಯಾವ ತಳಿ, ಸಾಧನೆಗಳ ಬಗ್ಗೆ ತಿಳಿಯುತ್ತಾ ಅಂಕಗಳನ್ನು ನೋಟ್‌ ಮಾಡಿಕೊಳ್ಳುತ್ತಿದ್ದ ತೀರ್ಪುಗಾರರತ್ತ ಎಲ್ಲರ ಕಣ್ಣು ನೆಟ್ಟಿತ್ತು.

ನರಿ ಮರಿಯಂತೆ ಕಾಣುವ, ಹೆದರಿಕೆ ಹುಟ್ಟಿಸುವ ಮಿನಿಯೇಚರ್‌ ಪಿಂಚ್, ಉದ್ದ ಕೂದಲಿನ ಜೂಲವನ್ನು ಬಿಟ್ಟುಕೊಂಡು ಮಾಲೀಕನ ಆರೈಕೆಯಲ್ಲಿ ನೋಡುಗರಿಗೆ ಪೋಸ್‌ ಕೊಡುತ್ತಾ ಟೇಬಲ್‌ ಮೇಲೆ ಕೂಡುವ ನಿಲ್ಲುವ ಯಾರ್ಕ್ ಶೇರ್‌ ಪೆರಿಯಾರ್, ಚೀನಾದಿಂದ ತಂದ ಚೌ ಚೌ, ಟೈಗರ್‌ ಹೆಡ್‌ ಟಿಬೆಟನ್. ತಟ್ಟೆಯಲ್ಲಿದ್ದ ಆಹಾರವನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸಿ ಇನ್ನಷ್ಟು ಬೇಕು ಎನ್ನುತ್ತಿದ್ದ ಗ್ರೇಟ್‌ ಡೇನ್.

ಮಡಿಕೇರಿ, ಬೆಂಗಳೂರು, ತಮಿಳುನಾಡು, ಮಹಾರಾಷ್ಟ್ರ, ನವದೆಹಲಿ, ಕೋಲ್ಕತ್ತ, ಚಂಡೀಗಡ, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದಲೂ ಕರೆತರಲಾಗಿತ್ತು.

ಎನ್‌.ಆರ್.ಮೊಹಲ್ಲಾದ ಬಾಬು ಅವರು ಜರ್ಮನ್‌ ಶಫರ್ಡ್ ತಳಿಯ ಡಾನ್‌, ಟೈಸನ್‌ ಮತ್ತು ಸಿಂಬಾ ಎಂಬ ಹೆಸರಿನ ಎಂಬ ಮೂರು ಶ್ವಾನ ತಂದಿದ್ದರು. ಇವರಲ್ಲಿ ಹತ್ತಾರು ಬಗೆಯ ಶ್ವಾನಗಳಿದ್ದು, ತಳಿ ವೃದ್ಧಿ ಮಾಡುತ್ತಾರೆ.

ತಿಳಿ ಕಿತ್ತಳೆ ಬಣ್ಣದ ಮುದ್ದಾದ ಟಾಯ್‌ ಪಮೋರಿಯನ್ ತಂದಿದ್ದ ಬೆಂಗಳೂರಿನ ಚಂದ್ರಕಾಂತ ಅವರು, ಶೋದಲ್ಲಿ ಸಾಧನೆ ಮಾಡಿದ ಶ್ವಾನಗಳ ತಳಿ ವೃದ್ಧಿ ಮಾಡುತ್ತೇವೆ. ‘ನೈಟ್ ಮ್ಯಾಜಿಕ್‌ ಕೆನೈನ್’ ಎಂಬುದು ನಮ್ಮ ಸಂಸ್ಥೆ ಹೆಸರು ಎಂದರು.

ನಾಲ್ಕಾರು ತಳಿಯ ಶ್ವಾನಗಳನ್ನು ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದು ಇಂದಿನ ಸ್ಪರ್ಧೆಗೆ ಸೈಬೇರಿಯನ್ ಹಸ್ಕಿ ತಳಿಯನ್ನು ತಂದಿದ್ದಾಗಿ ಮೈಸೂರಿನ ನೈನಾ ಗೌಡ ಹೇಳಿದರು.

ಐಷಾರಾಮಿ ಜೀವನ ನಡೆಸುವ ಶ್ವಾನಗಳ ಮಧ್ಯೆ ಮೂಲತಃ ವಿಜಯಪುರದವರಾದ ಮೈಸೂರು ರಾಮಕೃಷ್ಣನಗರದ ನಿವಾಸಿ ಮಲ್ಲಿಕಾರ್ಜುನ ಅವರು ತಂದ ದೇಸಿ ಹಾಗೂ ರಾಜ್ಯದ ಹೆಮ್ಮೆಯ ತಳಿ ಮುಧೋಳ ಹಾಂಡ್‌ ಮೂರು ಶ್ವಾನಗಳು ಬಿಸಿಲಿಗೆ ಜಗ್ಗದೆ ಮಾಲೀಕನ ಸುತ್ತ ಕಾವಲುಗಾರರಂತೆ ಸುತ್ತುತ್ತಿದ್ದವು.

ದುಬಾರಿ ಬೆಲೆ: ವಿಶಿಷ್ಟ ತಳಿಯ ಮರಿಗಳಿಗೆ ₹30 ಸಾವಿರದಿಂದ ₹30 ಲಕ್ಷವರೆಗೆ ಬೆಲೆ. ಅವು ಐದಾರು ತಿಂಗಳು ಕಳೆದರೆ ಈ ಬೆಲೆ ಮೂರರಿಂದ ಆರು ಪಟ್ಟು ಹೆಚ್ಚಳವಾಗುತ್ತದೆ. ಟಾಯ್ ಪಮೋರಿಯನ್‌ ಬೆಲೆ ಕೇಳಿದರೆ ಅಬ್ಬಬ್ಬಾ ಎನಿಸುತ್ತದೆ. ಏಕೆಂದರೆ ಅದಕ್ಕೆ ಕನಿಷ್ಠ ₹1.5 ಲಕ್ಷ. ಟೈಗರ್ ಹೆಡ್ ಚೀನಾ ತಳಿ, ಶೋಕಿಗಾಗಿ ಸಾಕುವುದು ಇದರ ಬೆಲೆ ₹20 ಲಕ್ಷವಂತೆ. ಒಂದು ಶ್ವಾನ ಆರೈಕೆಗೆ ತಿಂಗಳಿಗೆ 20 ರಿಂದ 25 ಸಾವಿರ ಖರ್ಚು ಎಂದು ಮಾಲೀಕರು ಹೇಳಿದ್ದನ್ನು ಕೇಳಿದಾಗ, ಇದೆಂಥಾ ಕಾಲವಯ್ಯ ಎನ್ನುವಂತಾಯಿತು.

ಉತ್ತಮ ಆರೈಕೆ: ಉತ್ತಮ ತಳಿಯ ನಾಯಿಗಳಿಗೆ ಪೌಷ್ಟಿಕ ಆಹಾರ, ವ್ಯವಸ್ಥಿತ ಆರೈಕೆ ಸಿಗುತ್ತಿತ್ತು. ಹವಾನಿಯಂತ್ರಿತ ವಾಹನ, ವಾಹನದಿಂದ ಹೊರ ತಂದರೆ ಪಂಜರ, ಸುತ್ತಲೂ ಏರ್‌ ಕೂಲರ್, ಬಿಸಿಲಿನ ತಾಪ ಕಡಿಮೆ ಮಾಡಲು ಗುಣಮಟ್ಟದ ಐಸ್‌ಕ್ರೀಮ್, ಮೈಗೆ ನೀರು ಚಿಮುಕಿಸಿ ಆರೈಕೆ ಮಾಡುತ್ತಿದ್ದರು.

‘ಉತ್ತರ ಭಾರತದಲ್ಲಿ ಹಾಗೂ ಮುಂಬೈನಲ್ಲಿ ದೊಡ್ಡ ಥೇಟರ್‌ನ ವಿಶಾಲ ರಿಂಗ್‌ನಲ್ಲಿ ಶ್ವಾನ ಪ್ರದರ್ಶನ ನಡೆಸುತ್ತಾರೆ. ಇಲ್ಲಿ ನಾವು ಅತ್ಯಂತ ಕಡಿಮೆ ವೆಚ್ಚದಲ್ಲಿ ವ್ಯವಸ್ಥೆ ಮಾಡಿದ್ದೆವು. ವಿವಿಧ ರಾಜ್ಯಗಳ ಶ್ವಾನ ಮಾಲೀಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಉತ್ತರ ಪ್ರದೇಶದ ಕೆ.ಕೆ.ತ್ರಿವೇದಿ ಹಾಗೂ ಬೆಂಗಳೂರಿನ ಪ್ರೀತಂ ಅವರ ತೀರ್ಪನ್ನು ಮೆಚ್ಚಿಕೊಂಡರು ಎಂದು ಹೇಳುತ್ತಾರೆ ಕೆನೈನ್ ಕ್ಲಬ್‌ ಅಧ್ಯಕ್ಷ ಬಿ.ಪಿ.ಮಂಜುನಾಥ್.

ಪ್ರತಿಕ್ರಿಯಿಸಿ (+)