ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮ್ಮಿಶ್ರ ಸರ್ಕಾರ ಒಂದು ವರ್ಷ ಭದ್ರ’

Last Updated 15 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭೆ ಚುನಾವಣೆ ಆಗುವವರೆಗೂ ನನ್ನನ್ನು ‌ಮುಟ್ಟಲು ಯಾರಿಗೂ ಸಾಧ್ಯವಿಲ್ಲ. ಅಲ್ಲಿಯವರೆಗೆ ಈ ಸಮ್ಮಿಶ್ರ ಸರ್ಕಾರ ಸುಭದ್ರ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಲೆಕ್ಕಪರಿಶೋಧಕರ ಸಂಸ್ಥೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘15ನೇ ರಾಜ್ಯ ಮಟ್ಟದ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಿಷ್ಟ ಒಂದು ವರ್ಷ ನಾನು ಮುಖ್ಯಮಂತ್ರಿಯಾಗಿಯೇ ಇರುತ್ತೇನೆ. ಅಲ್ಲಿಯವರೆಗೆ ಸಮಯ ವ್ಯರ್ಥ ಮಾಡದೆ, ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತೇನೆ. ನನ್ನ ಕಾಲೆಳೆಯುವವರು ಇದ್ದೇ ಇರುತ್ತಾರೆ. ಅದಕ್ಕೆ ತಲೆಕಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

‘ರೈತರ ಸಾಲ ಮನ್ನಾ ಮಾಡದೇ ಓಡಿ ಹೋಗುವುದಿಲ್ಲ. ಆರ್ಥಿಕ ಶಿಸ್ತಿಗೆ ಯಾವುದೇ ತೊಂದರೆ ಆಗದಂತೆ ರೈತರ ಸಾಲ ಮನ್ನಾ, ಹಿರಿಯರಿಗೆ ಪಿಂಚಣಿ, ಯುವ ಸಮುದಾಯಕ್ಕೆ ಉದ್ಯೋಗ ಎಲ್ಲವನ್ನೂ ಅನುಷ್ಠಾನಕ್ಕೆ ತರುತ್ತೇನೆ’ ಎಂದರು.

‘ಅಭಿವೃದ್ಧಿ ಕೆಲಸಗಳಿಗೆ ಬೆಂಬಲವಾಗಿ ನಿಲ್ಲುವ ಅಧಿಕಾರಿಗಳಿಗೆ ಸಹಕಾರವಿ ರುತ್ತದೆ. ಹಣ ಮಾಡುವ ಅಧಿಕಾರಿಗಳನ್ನು ಬಿಗಿ ಮಾಡಲಾಗುವುದು. ಜನರ ತೆರಿಗೆ ಹಣ ದುರುಪಯೋಗವಾಗಬಾರದು ಎನ್ನುವುದು ನನ್ನ ಉದ್ದೇಶ’ ಎಂದು ಹೇಳಿದರು.

‘ಈ ಹಿಂದೆ, 20 ತಿಂಗಳು ಮುಖ್ಯಮಂತ್ರಿಯಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಆದರೆ, ಅದನ್ನು ಮಾರ್ಕೆಟಿಂಗ್‌ ಮಾಡಿಕೊಳ್ಳುವುದು ಗೊತ್ತಾಗಲಿಲ್ಲ. ಹೀಗಾಗಿ ನನ್ನ ಕೆಲಸಗಳು ಜನರಿಗೆ ಗೊತ್ತಾಗಲಿಲ್ಲ’ ಎಂದರು.

‘ಪ್ರಕೃತಿಯೂ ನನ್ನ ಜೊತೆಯಿದೆ. ಮಳೆಯಾದರೆ ಸಾಕು, ರೈತರ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ. ಸಾಲ ಮನ್ನಾ ಹೇಗೆ ಮಾಡಬೇಕು ಎನ್ನುವುದು ನನಗೆ ಗೊತ್ತಿದೆ. ಬ್ಯಾಂಕ್‌ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಷ್ಟು ಸಾಲವಿದೆ ಎನ್ನುವ ಮಾಹಿತಿಗಳನ್ನು ಪಡೆದಿದ್ದೇನೆ’ ಎಂದರು.

‘ಸಂಸ್ಥೆಗೆ ಕಟ್ಟಡ ಒದಗಿಸಿ’

‘ನಗರದಲ್ಲಿನ ಲೆಕ್ಕಪರಿಶೋಧಕರ ಸಂಸ್ಥೆಗೆ ಸ್ವಂತ ಕಟ್ಟಡವಿಲ್ಲ. ಭೋಗ್ಯದ ಅವಧಿ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸರ್ಕಾರ ನೆರವು ನೀಡಬೇಕು’ ಎಂದು ಶಾಖೆ ಅಧ್ಯಕ್ಷ ಶ್ರವಣ್‌ ಗುಡುತ್ತೂರ್‌, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ
ದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ‘ಭೋಗ್ಯ ನೀಡಿರುವ ಜಾಗದಲ್ಲಿ ನೀವು ಕಟ್ಟಡ ನಿರ್ಮಿಸಿದ್ದೀರಿ. ಅದನ್ನು ನಿಮಗೆ ಕೊಡಿಸುವ ಬಗ್ಗೆ ಕಾನೂನಿನಲ್ಲಿ ಅವಕಾಶವಿದ್ದರೆ, ಖಂಡಿತವಾಗಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಸಮಿತಿ ರಚನೆ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು (ಸಿಎಂಪಿ)ರೂಪಿಸಲು ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯಲ್ಲಿ ವೀರಪ್ಪಮೊಯಿಲಿ, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌, ಎಚ್‌.ಡಿ.ರೇವಣ್ಣ, ಎಸ್‌.ಸುಬ್ರಮಣ್ಯ ಇದ್ದಾರೆ ಎಂದು ಜೆಡಿಎಸ್‌– ಕಾಂಗ್ರೆಸ್‌ ಸಮನ್ವಯ ಸಮಿತಿ ಸಂಚಾಲಕ ಡ್ಯಾನಿಷ್‌ ಅಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT