ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗೇಶ್ವರ್‌ ವಿರುದ್ಧ ಹೇಳಿಕೆ ನಿಲ್ಲಿಸಿ: ಹುಣಸೂರು ಒಕ್ಕಲಿಗರ ಸಂಘದ ತಾಕೀತು

ಅಡಗೂರು ಎಚ್.ವಿಶ್ವನಾಥ್‌ಗೆ ಎಚ್.ಕೆ.ಅಣ್ಣೇಗೌಡ ತಾಕೀತು
Last Updated 17 ಜನವರಿ 2021, 13:55 IST
ಅಕ್ಷರ ಗಾತ್ರ

ಮೈಸೂರು: ಸಚಿವ ಸಿ.ಪಿ.ಯೋಗೇಶ್ವರ್‌ ವಿರುದ್ಧ ಹೇಳಿಕೆ ನೀಡುವುದನ್ನು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್‌ ನಿಲ್ಲಿಸಬೇಕು ಎಂದು ಹುಣಸೂರು ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಕೆ.ಅಣ್ಣೇಗೌಡ ತಾಕೀತು ಮಾಡಿದ್ದಾರೆ.

‘ಐದು ಬಾರಿ ಶಾಸಕರಾಗಿರುವ ಯೋಗೇಶ್ವರ್‌ ಒಕ್ಕಲಿಗ ಸಮುದಾಯದ ಮುಖಂಡರು. ಅವರ ಸಾಮರ್ಥ್ಯ ಹಾಗೂ ಪಕ್ಷಕ್ಕಾಗಿ ದುಡಿದಿರುವುದನ್ನು ಗಮನಿಸಿಯೇ ಸಚಿವ ಸ್ಥಾನ ನೀಡಲಾಗಿದೆ. ಹುಣಸೂರು ಉಪಚುನಾವಣೆಯಲ್ಲೂ ಅವರು ಶ್ರಮಿಸಿದ್ದರು. ಅಂತಹವರ ವಿರುದ್ಧ ವಿಶ್ವನಾಥ್‌ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇನ್ನು ಮುಂದೆ ಇಂತಹ ಹೇಳಿಕೆಗಳನ್ನು ನೀಡಿದರೆ, ನಿಮ್ಮ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಸಂಘದ ನಿರ್ದೇಶಕ ನಾಗರಾಜ್ ಮಾತನಾಡಿ, ‘ಈ ಹಿಂದಿನ ಚುನಾವಣೆ ಗಳಲ್ಲಿ ಎಚ್‌.ವಿಶ್ವನಾಥ್‌ ಗೆಲುವು ಸಾಧಿಸಲು ಒಕ್ಕಲಿಗರೇ ಕಾರಣ. ಅವರು ಒಕ್ಕಲಿಗರ ಋಣದಲ್ಲಿದ್ದಾರೆ. ಆದರೆ, ಇದನ್ನೆಲ್ಲಾ ಮರೆತು ಒಕ್ಕಲಿಗ ಮುಖಂಡರ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಕೃಷ್ಣೇಗೌಡ ಮಾತನಾಡಿ, ‘ಸಿ.ಪಿ.ಯೋಗೇಶ್ವರ್‌ ಬಗ್ಗೆ ವಿಶ್ವನಾಥ್‌ ಹೊಂದಿರುವ ನಿಲುವನ್ನು ಬದಲಿಸಿ ಕೊಳ್ಳಬೇಕು. ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ಸಿಗಬೇಕು ಎಂಬುದು ನಮ್ಮ ಬಯಕೆಯಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಚ್.ಟಿ.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಎಚ್.ಎನ್.ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT